27 ಸಾವಿರ ಎಕರೆ ಸಾಗುವಳಿ ಅಮೃತ್ ಮಹಲ್ ಕಾವಲ್ ಭೂಮಿ ಮಂಜೂರಾತಿ ಹಾದಿ ಸುಗಮ – ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ

ಚಿತ್ರದುರ್ಗ: ಅಮೃತ ಮಹಲ್ ಕಾವಲ್ ಪ್ರದೇಶ ಸಾಗುವಳಿದಾರರಿಗೆ ಭೂ ಮಂಜೂರಾತಿ ಮಾಡಲು ಉಂಟಾಗಿದ್ದ ತಾಂತ್ರಿಕ ಅಡಚಣೆ ದೂರ ಮಾಡುವ ಸರ್ಕಾರಿ ಆದೇಶದ ಕಡತ ಲಭ್ಯವಾಗಿದೆ. 1962 ರಲ್ಲಿ ಸರ್ಕಾರ ಅಮೃತ ಮಹಲ್ ಕಾವಲ್ ಭೂಮಿಯನ್ನು ಪಶುಇಲಾಖೆಯಿಂದ ಬಿಡುಗಡೆ ಮಾಡಿ ಕಂದಾಯ ಇಲಾಖೆಗೆ ನೀಡಿದೆ. ಈ ಅಂಶವು ಬೆಳಕಿಗೆ ಬಂದಿದ್ದರಿಂದ ಜಿಲ್ಲೆಯ 27 ಸಾವಿರ ಎಕರೆ ಸಾಗುವಳಿ ಅಮೃತ್ ಮಹಲ್ ಕಾವಲ್ ಭೂಮಿ ಮಂಜೂರಾತಿಗೆ ಹಾದಿ ಸುಗಮವಾಗಲಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲೆಯ ಅಮೃತ ಮಹಲ್ ಕಾವಲ್ ಜಮೀನುಗಳ ಹಾಗೂ ಸಹಕಾರ ಸಂಘಗಳಿಗೆ ಮಂಜೂರಿ, ಗುತ್ತಿಗೆ ನೀಡಿರುವ ಜಮೀನುಗಳ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಅಮೃತ್ ಮಹಲ್ ಕಾವಲ್ ಪ್ರದೇಶದಲ್ಲಿ ಸಾಗುವಳಿ ಮಾಡುತ್ತಿದ್ದ ಸಾಗುವಳಿದಾರರು, ಸಾಗುವಳಿ ಭೂಮಿ ಮಂಜೂರಾತಿಗೆ ಅರ್ಜಿ ಸಲ್ಲಿಸುತ್ತಿದ್ದರು. ಅಮೃತ್ ಮಹಲ್ ಕಾವಲ್ ಪ್ರದೇಶ ಪಶುಸಂಗೋಪನೆ ಇಲಾಖೆ ಅಡಿ ಬರುವುದರಿಂದ ಸಾಗುವಳಿದಾರರಿಗೆ ಮಂಜೂರಾತಿ ಮಾಡಲು ಬರುವುದಿಲ್ಲ ಎಂಬ ಕಾರಣಕ್ಕೆ ಅರ್ಜಿಗಳು ತಿರಸ್ಕøತವಾಗುತ್ತಿದ್ದವು. ಈ ನಿಟ್ಟಿನಲ್ಲಿ ಸಭೆಯ ನಡೆಸಿದಾಗ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರು ಸ್ಪಷ್ಟನೆ ನೀಡಿದರು.

ಸಹಕಾರಿ ಕೃಷಿ ನಡೆಸಲು ಕಾವಲು ಪ್ರದೇಶಗಳನ್ನು ಸಹಕಾರಿ ಸಂಘಗಳಿಗೆ 1960ರಲ್ಲಿ ನೀಡಲಾಗಿತ್ತು. ಈ ಕುರಿತು ಭೂಮಿಯನ್ನು ಪಡೆದ ಸಹಕಾರಿ ಸಂಘ ಸಂಸ್ಥೆಗಳ ಸಭೆ ನಡೆಸಲಾಯಿತು. ಇದರಲ್ಲಿ ಹಲವು ಸಹಕಾರಿ ಸಂಘ ಸಂಸ್ಥೆಗಳು ಮುಚ್ಚಿಹೋಗಿದ್ದವು. ಅಮೃತ ಮಹಲ್ ಕಾವಲು ಪ್ರದೇಶದಲ್ಲಿ ಸಾಗುವಳಿ ಮಾಡುತ್ತಿರುವ ಕುಟುಂಬಗಳಿಗೆ ಮಂಜೂರಾತಿ ನೀಡಲು ಕಂದಾಯ ಇಲಾಖೆ, ಸಹಕಾರ ಇಲಾಖೆ, ಅರಣ್ಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ರಾಜ್ಯ ಮಟ್ಟದ ಜಂಟಿ ಸಭೆ ನಡೆಸಲಾಯಿತು. ಸರಿಯಾದ ದಾಖಲೆಗಳು ಇಲ್ಲದೆ ಭೂಮಿ ಮಂಜೂರು ಮಾಡಲು ಬರುವುದಿಲ್ಲ. ಇದಕ್ಕಾಗಿ ರಾಜ್ಯ ಸರ್ಕಾರ ಪ್ರತ್ಯೇಕ ಸುಗ್ರೀವಾಜ್ಞೆ ಹೊರಡಿಸಬೇಕಾಗುತ್ತದೆ. ಹೊಸ ಕಾನೂನು ರಚನೆ ಮಾಡಬೇಕಾಗುತ್ತಿದೆ ಎಂದು ಕಂದಾಯ ಇಲಾಖೆ ಸಚಿವ ಆರ್.ಅಶೋಕ್ ತಿಳಿಸಿದರು. ಈ ಕುರಿತು ಸಮಗ್ರ ವರದಿ ತಯಾರು ಮಾಡಲು ತಿಳಿಸಿದರು. ಅಧಿಕಾರಿಗಳು ಚಾಮರಾಜನಗರ, ಮೈಸೂರು, ತಮಕೂರು, ದಾವಣಗೆರೆ, ಧಾರವಾಡ ಹಾಗೂ ಚಿತ್ರದುರ್ಗ ಜಿಲ್ಲೆಯಲ್ಲಿ ಸಹಕಾರಿ ಸಂಘ ಸಂಸ್ಥೆಗಳಿಗೆ ಭೂಮಿ ಮಂಜೂರು ಮಾಡಲು ತೊಡಕಿದೆ. ಇದನ್ನು ಪರಿಹರಿಸುವಂತೆ ತಿಳಿಸಿದರು.

ಪಶು ಇಲಾಖೆಯ ಕಾವಲು ಭೂಮಿಯನ್ನು ಅನ್ಯ ಕಾರ್ಯಗಳಿಗೆ ಮಂಜೂರು ಮಾಡದಂತೆ  ಉಚ್ಛನ್ಯಾಯಾಲಯ ಆದೇಶ ನೀಡಿದೆ. ಈ ಸಮಸ್ಯೆ ಬಗೆಹರಿಸಲು ಕಚೇರಿಗಳಲ್ಲಿನ ಅಗತ್ಯ ಕಡತಗಳನ್ನು ಹುಡುಕುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೆ. ಜಿಲ್ಲೆಯ 27,000 ಎಕರೆ ಕಾವಲ್ ಜಮೀನನ್ನು ಕಂದಾಯ ಇಲಾಖೆ ಬಿಡುಗಡೆ ಮಾಡಿ ಸರ್ಕಾರ 1962ರಲ್ಲಿ ಆದೇಶ ನೀಡಿದೆ. ಈ ಕಡತ ಈಗ ಲಭಿಸಿದೆ. ಈ ಆದೇಶದ ಬಗ್ಗೆ ಅರಿವಿಲ್ಲದೇ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ನೇತೃತ್ವದ ಬರ್ಕಾಸ್ತ್ ಸಮಿತಿಗಳು ಭೂ ಮಂಜೂರು ಮಾಡದೆ ಅರ್ಜಿಗಳನ್ನು ತಿರಸ್ಕರಿಸುತ್ತಿದ್ದವು.

ಈಗಾಗಲೇ ಕಾವಲ್‍ನಿಂದ ಕಂದಾಯ ಇಲಾಖೆಗೆ ವರ್ಗಾವಣೆ ಮಾಡಲಾಗಿರುವ ಕಡತ ಇದೇ ಮೊದಲ ಬಾರಿಗೆ ದೊರಕಿದೆ.  ಈ ಆದೇಶದಿಂದ ಚಿತ್ರದುರ್ಗ ಜಿಲ್ಲೆ ಮಾತ್ರವಲ್ಲದೇ ಚಿಕ್ಕಮಗಳೂರು, ಹಾಸನ, ಮಂಡ್ಯ, ಶಿವಮೊಗ್ಗ, ತುಮಕೂರು ಜಿಲ್ಲೆಗಳ ಕಾವಲು ಪ್ರದೇಶವು ಕಂದಾಯ ಇಲಾಖೆಗೆ ವರ್ಗಾವಣೆಗೊಂಡಿದೆ ಎಂದರು. 60 ವರ್ಷದ ಹಿಂದಿನ ಈ ಕಡತವನ್ನು ಹುಡುಕಲಾಗಲಿದ್ದು, ಈ ಆದೇಶದಿಂದ ಚಿತ್ರದುರ್ಗ ಜಿಲ್ಲೆಯಲ್ಲಿ 27 ಸಾವಿರ ಎಕರೆ ಹಕ್ಕುಪತ್ರ ವಿತರಣೆ ಮಾಡಬಹುದಾಗಿದೆ. ಇದರಿಂದ ಬಡವರಿಗೆ ಅನುಕೂಲವಾಗಲಿದೆ ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ, ತಹಶೀಲ್ದಾರ್‍ಗಳಾದ ಸತ್ಯನಾರಾಯಣ, ಸುರೇಶಾಚಾರಿ, ಸುರೇಶ್, ಮಲ್ಲಿಕಾರ್ಜುನಪ್ಪ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಕಲ್ಲಪ್ಪ ಸೇರಿದಂತೆ ಇತರೆ ಸಿಬ್ಬಂದಿ ಇದ್ದರು.

Leave a Reply

Your email address will not be published. Required fields are marked *

error: Content is protected !!