ಅತಿಥಿ ಉಪನ್ಯಾಸಕರ ನ್ಯಾಯಯುತ ಬೇಡಿಕೆ ಈಡೇರಿಸಲು ಎಐಡಿಎಸ್ಓ ಒತ್ತಾಯ

ದಾವಣಗೆರೆ:  ಅತಿಥಿ ಉಪನ್ಯಾಸಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ದಾವಣಗೆರೆಯಲ್ಲಿ ಎಐಡಿಎಸ್ಒ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಜಯದೇವ ವೃತ್ತದಲ್ಲಿ ಆಲ್ ಇಂಡಿಯಾ ಡೆಮಾಕ್ರಟಿಕ್ ಆರ್ಗನೈಸೇಶನ್ ಕಾರ್ಯಕರ್ತರು ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸಿದರು.

ಅತಿಥಿ ಉಪನ್ಯಾಸಕರ ಹೋರಾಟಕ್ಕೆ ರಾಜ್ಯದ ವಿದ್ಯಾರ್ಥಿಗಳ ಸಂಪೂರ್ಣ ಬೆಂಬಲವಿದೆ. ಸರ್ಕಾರ ತಕ್ಷಣ ಅತಿಥಿ ಉಪನ್ಯಾಸಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.

ರಾಜ್ಯವ್ಯಾಪಿ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು ಕಳೆದ 20 ಕ್ಕೂ ಹೆಚ್ಚು ದಿನಗಳಿಂದ ತರಗತಿಗಳನ್ನು ಬಹಿಷ್ಕರಿಸಿ ಹೋರಾಟ ನಡೆಸುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ತೊಂದರೆಯಾಗಿದೆ. ಕೂಡಲೇ ಅವರನ್ನು ಖಾಯಂ ಗೊಳಿಸುವಂತೆ ಆಗ್ರಹಿಸಿದರು.

ಇತ್ತೀಚೆಗೆ ತೀರ್ಥಹಳ್ಳಿಯ ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕ ಶ್ರೀಹರ್ಷ ಶಾನುಭೋಗ ಅವರು ಕೆಲಸದ ಭದ್ರತೆಯಿಲ್ಲದೇ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಪನ್ಯಾಸಕರ ಸಂಕಷ್ಟದ ದಿನಗಳ ದರ್ಶನ ಮಾಡಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಉದ್ಯೋಗದ ಭದ್ರತೆ ಇಲ್ಲದೆ, ಎಷ್ಟೋ ತಿಂಗಳುಗಳ ಕಾಲ ಸಂಬಳವೇ ಇಲ್ಲದೆ ಇಂತಹ ಸಾವಿರಾರು ಅತಿಥಿ ಉಪನ್ಯಾಸಕರು ಅತ್ಯಂತ ಯಾತನಾಮಯ ಜೀವನ ನಡೆಸುತ್ತಿದ್ದಾರೆ. ಇವರಲ್ಲಿ ಎಷ್ಟೋ ಜನ ಉನ್ನತ ಪದವಿ ಪಡೆದವರು. ನೆಟ್ ಪರೀಕ್ಷೆ ಉತ್ತೀರ್ಣರಾದವರು ಡಾಕ್ಟರೇಟ್ ಮಾಡಿರುವವರು, ಕಾಲೇಜುಗಳಲ್ಲಿ 10-15 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ ಆಕ್ರೋಶ ವ್ಯಕ್ತಪಡಿಸಿದರು.

ಸರಕಾರ‌ ಕೂಡಲೇ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದಲಾದರೂ ಅತಿಥಿ ಉಪನ್ಯಾಸಕರ ಬೇಡಿಕೆಗೆ ಸ್ಪಂದಿಸಲಿ. ವಿದ್ಯಾರ್ಥಿಗಳಾದ ನಮ್ಮ ಮೇಲೆ ನೈತಿಕ ಜವಾಬ್ದಾರಿ ಇದ್ದು, ರಾಜ್ಯದ ವಿದ್ಯಾರ್ಥಿಗಳು ಉಪನ್ಯಾಸಕರ ಹೋರಾಟಕ್ಕೆ ಬೆಂಬಲವಾಗಿ ನಿಂತಿದ್ದೇವೆ ಎಂದು ಹೇಳಿದರು.

ಅತಿಥಿ ಉಪನ್ಯಾಸಕರ ನ್ಯಾಯಯುತ ಬೇಡಿಕೆಗಳನ್ನು ಈ ಕೂಡಲೇ ಈಡೇರಿಸಿ. ರಾಜ್ಯದಲ್ಲಿ ಶೈಕ್ಷಣಿಕ ಗೊಂದಲವನ್ನು ಬಗೆಹರಿಸಿ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪೂಜಾ ನಂದಿಹಳ್ಳಿ, ಪುಷ್ಪಾ, ಕಾವ್ಯಾ, ಶಿವಕುಮಾರ್, ಶರತ್, ಗಜೇಂದ್ರ, ಯಶವಂತ ಸೇರಿದಂತೆ ಪ್ರಥಮ ದರ್ಜೆ ಸರ್ಕಾರಿ ಮಹಿಳಾ ಹಾಗೂ ವಿವಿಧ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!