ದಾವಣಗೆರೆ ಜಿಲ್ಲೆಗೆ ಏರ್‌ಪೋರ್ಟ್: ಅಧಿಕಾರಿಗಳ ತಂಡದಿಂದ ಸ್ಥಳ ಪರೀಶಿಲನೆ

ದಾವಣಗೆರೆ: ಜಿಲ್ಲೆಯಲ್ಲಿ ಆರಂಭಿಸಲು ಯದ್ದೇಶಿಸಿರುವ ಏರ್‌ಪೋರ್ಟ್ ಸಂಬಂಧ ಕರ್ನಾಟಕ ಮೂಲಸೌಕರ್ಯ ಅಭಿವೃದ್ದಿ ನಿಗಮದ ಅಧಿಕಾರಿಗಳು ಗುರುವಾರ ಜಿಲ್ಲೆಗೆ ಭೇಟಿ ನೀಡಿ ಎರಡು ಮೂರು ಕಡೆಗಳಲ್ಲಿ ಸ್ಥಳ ಪರಿಶೀಲಿಸಿ ನಂತರ ಜಿಲ್ಲಾಡಳಿತ ಭವನದ ಸಭೆಯಲ್ಲಿ ಸಂಸದರು, ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದರು.

ಕೇಂದ್ರ ವಿಮಾನಯಾನ ಸಚಿವಾಲಯದಿಂದ ಜಿಲ್ಲೆಯಲ್ಲಿ ಏರ್‌ಪೋರ್ಟ್ ಆರಂಭಕ್ಕೆ ಜಿಲ್ಲಾಡಳಿತಕ್ಕೆ ಬರೆದಿರುವ ಪತ್ರದಲ್ಲಿ ಕೇಳಲಾಗಿರುವ ಸ್ಪಷ್ಟನೆಗಳ ಹಿನ್ನಲೆಯಲ್ಲಿ ಸ್ಥಳ ಪರಿವೀಕ್ಷಣೆಗೆ ಆಗಮಿಸಿದ್ದ ಕರ್ನಾಟಕ ಮೂಲಸೌಕರ್ಯ ಅಭಿವೃದ್ದಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರವಿ ಅವರು ಮಾತನಾಡಿ ಸಚಿವರ ನಿರ್ದೇಶನದಂತೆ ಸ್ಥಳ ಪರಿವೀಕ್ಷಣೆ ಮಾಡಲಾಗಿದೆ. ಈಗಾಗಲೇ ಗುರುತಿಸಿರುವ ಸ್ಥಳಗಳು ಏರ್‌ಪೋರ್ಟ್ ಸೂಕ್ತವಾಗಿದ್ದು, ಕನಿಷ್ಠ 2.5 ಕಿಮೀ ಸ್ಥಳ ಬೇಕಾಗಲಿದೆ ಹಾಗೂ ಕೆಲ ಅಂಕಿ ಅಂಶಗಳು ಬೇಕಾಗಿವೆ ಏರ್‌ಬಸ್ ನಿಲ್ದಾಣ ಮಾಡುವುದಾದರೆ 500 ಎಕರೆ ಜಾಗ ಬೇಕಾಗಬಹುದು ಹಾಗೂ ಇದರಲ್ಲಿ ಎಷ್ಟು ಸರ್ಕಾರಿ ಜಾಗ ಇದೆಯೆಂದು ಪರಿಶೀಲಿಸಬೇಕು.

ಮುಖ್ಯವಾಗಿ ಈ ಭಾಗದಲ್ಲಿ ರೈತರ ಉತ್ಪಾದನೆಗಳು ಹೆಚ್ಚಿರುವುದರಿಂದ ಕಾರ್ಗೊ ನಿಲ್ದಾಣ ಮಾಡುವುದಾದರೆ ಹೆಚ್ಚು ಅನುಕೂಲವಾಗಲಿದೆ, ಕಾರ್ಗೊ ನಿಲ್ದಾಣಕ್ಕೆ 600 ಎಕರೆ ಜಾಗ ಬೇಕಾಗುವುದು ಹಾಗಾಗೀ ಏರ್‌ಬಸ್ ಬಗೆಗೆ ಚಿಂತಿಸಬೇಕಾಗುತ್ತದೆ ಎಂದರು.

ನಿಗಮದ ಕಾರ್ಯ ನಿರ್ವಾಹಕ ನಿರ್ದೇಶಕ ಪ್ರಕಾಶ್ ಮಾತನಾಡಿ ಕೇಂದ್ರ ವಿಮಾನಯಾನ ಪ್ರಾಧಿಕಾರದವರು ಜಿಲ್ಲೆಯಲ್ಲಿ ಏರ್‍ಪೋರ್ಟ್ ಮಾಡುವ ಸ್ಥಳದಿಂದ ಸುತ್ತಲಿನ ಏರ್‌ಪೋರ್ಟ್ ಬಗೆಗೆ ಮಾಹಿತಿ ಕೋರಿದ ಹಿನ್ನಲೆಯಲ್ಲಿ ಮ್ಯಾಪ್ ಹಾಕಿ ನೋಡಿದಾಗ ಶಿವಮೊಗ್ಗ, ಬಳ್ಳಾರಿ, ಹುಬ್ಬಳ್ಳಿ ನಿಲ್ದಾಣಗಳು ಕಂಡು ಬರುತ್ತವೆ. ಈ ಹಿಂದೆ ನೀಡಿರುವ ವರದಿಯಂತೆ ಈ ಸ್ಥಳ ಎಟಿಆರ್ 72 ಮಾದರಿ ಏರ್‌ಪೋರ್ಟ್ ನಿರ್ಮಿಸಲು ಸೂಕ್ತವಾಗಿದ್ದು 340 ಎಕರೆ ಭೂಮಿ ಗುರುತಿಸಲಾಗಿದೆ. ಒಂದುವೇಳೆ ಏರ್‍ಬಸ್ ನಿರ್ಮಿಸುವುದಾದರೆ ಕನಿಷ್ಠ 600 ಎಕರೆ ಜಾಗ ಬೇಕಾಗುತ್ತದೆ. ಅಗತ್ಯ ಭೂಮಿ ಒದಗಿಸಿದರೆ ನೀಲನಕ್ಷೆ ತಯಾರಿಸಲಾಗುವುದು, ಈ ಭಾಗದಲ್ಲಿ ಕೆಲ ತಾಂತ್ರಿಕ ಅಂಶಗಳನ್ನು ಪರಿಶೀಲಿಸಿ ಉದಾಹಣೆಗೆ ಮಣ್ಣಿನ ರಚನೆ ವಾತವರಣ ಮುಂತಾದವುಗಳನ್ನು ಅಭ್ಯಸಿಸಿ ವರದಿ ನೀಡಲಾಗುವುದು ಅಷ್ಟರೋಳಗೆ ಯಾವ ಮಾದರಿ ನಿಲ್ದಾಣಬೇಕು ಎಂಬುದು ನಿರ್ಧಾರವಾಗಬೇಕೆಂದರು.

ಸಂಸದ ಜಿ.ಎಂ ಸಿದ್ದೇಶ್ವರ್ ಪ್ರತಿಕ್ರಿಯಿಸಿ ಈಗಾಗಲೇ ವರದಿ ನೀಡಿರುವಂತೆ ಎಟಿಆರ್ 72 ಏರ್‌ಪೋರ್ಟ್ ಬಗೆಗೆ ಸಿದ್ದತೆ ಮಾಡಿಕೊಳ್ಳಿ ಮುಂದಿನ ಏರ್‌ಬಸ್ ನಿಲ್ದಾಣಕ್ಕೆ ಅನುಕೂಲವಾಗುವಂತೆ ಭೂಮಿಯನ್ನು ಗುರುತಿಸೋಣ ಎಂದರು.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತಾನಾಡಿ ಜಿಲ್ಲೆಯ ಜನರ ಬಹುದಿನಗಳ ಕನಸಾದ ಏರ್ ಪೋರ್ಟ್ ಸಾಕಾರಕ್ಕೆ ಜಿಲ್ಲಾಡಳಿತ ವತಿಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದೆಂದರು.

ಸಭೆಯಲ್ಲಿ ತಾಂತ್ರಿಕ ಪರಿಣಿತರಾದ ಪೂರ್ವಿಮಠ, ಪೈಲೇಟ್ ಶಮನ್, ದೂಡ ಅಧ್ಯಕ್ಷ ದೇವರಮನೆ ಶಿವಕುಮಾರ್, ಯಶವಂತ್‍ರಾವ್ ಜಾಧವ್, ಉಪವಿಭಾಗಾಧಿಕಾರಿ ಮಮತ ಹೊಸಗೌಡರ್, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ, ತಹಶೀಲ್ದಾರ್ ಗಿರೀಶ್ ಹಾಗೂ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!