// ಶ್ರೀ ಉಚ್ಚಂಗೆಮ್ಮದೇವಿ ಸದ್ಭಕ್ತರಿಗೊಂದು ವಿಸ್ಮಯಕಾರಿ ಸುದ್ದಿ : ಉಚ್ಚಂಗಿದುರ್ಗ ಬೆಟ್ಟದ ಕುರಿತು ಹೊಸ ಹೊಳಹು ನೀಡಿದ ದಾವಣಗೆರೆ ಅರ್ಜುನ್ //

ಭಾರತ ದೇಶ ಹಲವು ಅಚ್ಚರಿ, ವಿಚಿತ್ರ, ವಿಸ್ಮಯಗಳ ತಾಣ. ಪ್ರಕೃತಿಯಲ್ಲಿ ಉಂಟಾಗುತ್ತಿರುವ ಬದಲಾವಣೆಯಿಂದ ಹಿಡಿದು, ಸೃಷ್ಟಿಕರ್ತನ ಕೈಚಳಕದ ಕುಲುಮೆಯಲ್ಲಿ ಅರಳಿರುವ ಹಲವು ಅದ್ಭುತಗಳು ತರ್ಕಕ್ಕೆ ನಿಲುಕದ ವಿಸ್ಮಯಕಾರಿ ಸಂಗತಿಗಳಾಗಿವೆ. ಅಂತೆಯೇ ದೇವರು, ದೈವ ಮತ್ತು ದೈವ ಲೀಲೆಗಳು ಮನುಷ್ಯರಿಗೆ ಎಂದಿಗೂ ಕೌತುಕದ ವಿಚಾರಗಳೇ ಆಗಿವೆ .

ಇದಕ್ಕೆ ಉದಾಹರಣೆ ಎಂಬಂತೆ ತಿರುಪತಿ ಶ್ರೀ ಕ್ಷೇತ್ರದ ಬೆಟ್ಟದಲ್ಲಿ ಶ್ರೀ ವೆಂಕಟೇಶ್ವರನ ರೂಪ ಕಾಣಸಿಗುವುದು ಅಪರೂಪದಲ್ಲಿ ಅಪರೂಪದ ಸಂಗತಿಗೆ ಸಾಕ್ಷಿಯಾಗಿದೆ . ಇದು ಪ್ರಕೃತಿಯ ವಿಸ್ಮಯವೋ ಅಥವಾ ಆ ಕ್ಷೇತ್ರದ ಪವಾಡವೋ, ದೈವ ಲೀಲೆಯೋ ಅಂತೂ ತರ್ಕಕ್ಕೆ ನಿಲುಕದ ವಾಸ್ತವ ಸತ್ಯ.

ಇಂತಹ ಅಚ್ಚರಿ ವಿಷಯಗಳಿಂದ ಪ್ರೇರೇಪಿತರಾದ ದಾವಣಗೆರೆ ವಾಸಿ, ಹವ್ಯಾಸಿ ಸಂಶೋಧಕರಾದ ಅರ್ಜುನ್ ರವರು ವಿಸ್ಮಯಕಾರಿ ಸ್ಥಳಗಳ ಬಗ್ಗೆ ವಿಶೇಷ ಗಮನಹರಿಸಿ ಹೊಸ ಹೊಳಹುಗಳನ್ನು ಹುಡುಕುತ್ತಾ ಹೋದ ಅವರ ಕ್ಯಾಮೆರದ ಒಳಗಣ್ಣಿಗೆ ಬಿದ್ದದ್ದು ಶ್ರೀ ಕ್ಷೇತ್ರ ಉಚ್ಚಂಗಿದುರ್ಗದ ಬೆಟ್ಟ. ಈ ಬೆಟ್ಟದ ವಿಶೇಷ ವಿಸ್ಮಯಕಾರಿ ಸಂಗತಿಯೊಂದನ್ನು ಅವರೀಗ ಬೆಳಕಿಗೆ ತಂದಿದ್ದಾರೆ.

ಈಗಿನ ವಿಜಯನಗರ ಜಿಲ್ಲೆ, ಹರಪನಹಳ್ಳಿ ತಾಲೂಕಿಗೆ ಒಳಪಡುವ ಈ ಕ್ಷೇತ್ರ ಲಕ್ಷಾಂತರ ಜನರ ಭಕ್ತಿಗೆ ಪಾತ್ರವಾಗುವ ಮೂಲಕ ಇಲ್ಲಿ ನೆಲೆಸಿರುವ ಶ್ರೀ ಉಚ್ಚಂಗೆಮ್ಮ ದೇವಿ ಭಕ್ತರ ಕಷ್ಟ ನೀಗುವ ಮನ – ಮನೆ ದೇವತೆಯಾಗಿ ನೆಲೆಸಿದ್ದಾಳೆ. ಈ ಕ್ಷೇತ್ರಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅಂತೆಯೇ ಈ ಕ್ಷೇತ್ರದಲ್ಲಿ ಹಲವು ವಿಶೇಷಗಳನ್ನು ನಾವು ಕಾಣಬಹುದು.

ಇತ್ತೀಚಿಗೆ ದಾವಣಗೆರೆ ಅರ್ಜುನ್ ರವರು ಈ ಕ್ಷೇತ್ರದ ಬಗ್ಗೆ ಸಂಶೋಧನೆ ಮಾಡ ಹೊರಟಾಗ ಇವರಿಗೆ ಅಚ್ಚರಿಯ ಸಂಗತಿಯೊಂದು ಹೊಳೆದಿದೆ. ಅದೇನೆಂದರೆ ತಿರುಪತಿ ಬೆಟ್ಟದಲ್ಲಿ ತಿಮ್ಮಪ್ಪನ ರೂಪ ಒಡಮೂಡಿರುವಂತೆ ಉಚ್ಚಂಗಿದುರ್ಗದ ಬೆಟ್ಟದಲ್ಲಿ ತಾಯಿಯ ಚಿತ್ರ ಒಡಮೂಡಿರುವ ಅಚ್ಚರಿಯ ವಿಚಾರ . ಬೆಟ್ಟದಿಂದ ಸ್ವಲ್ಪ ದೂರ ಒಂದು ನಿರ್ದಿಷ್ಟ ಜಾಗದಲ್ಲಿ ನಿಂತು ನೋಡಿದಾಗ ದೇವಿಯೇ ಬೆಟ್ಟದಲ್ಲಿ ಉದ್ಭವವಾಗಿರುವಂತೆ ಕಾಣುವ ವಿಸ್ಮಯವನ್ನು ಪತ್ತೆ ಹಚ್ಚಿರುವ ಅರ್ಜುನ್ ಈ ಅಚ್ಚರಿಯನ್ನು ಬೆಳಕಿಗೆ ತಂದು ಸದ್ಭಕ್ತರು ದೇವಿಯ ರೂಪವನ್ನು ಈ ಬೆಟ್ಟದಲ್ಲಿ ನೋಡಿ ಪುನೀತರಾಗಬೇಕೆಂದು ಬಯಸಿದ್ದಾರೆ.

ಶ್ರೀ ಕ್ಷೇತ್ರ ಉಚ್ಚಂಗಿದುರ್ಗ ಕೂಡ ತಿರುಪತಿಯಂತೆಯೇ ಇನ್ನಷ್ಟು ಕೀರ್ತಿ ಪಡೆಯಲಿ ಎಂಬ ಸದುದ್ದೇಶದಿಂದ ಈ ವಿಷಯವನ್ನು ಹಂಚಿಕೊಂಡಿರುವ ಅರ್ಜುನ್ ಈ ಕ್ಷೇತ್ರದ ಮಹಿಮೆ ಭಾರತದ ಉದ್ದಗಲಕ್ಕೂ ಪಸರಿಸಿರುವ ಉಚ್ಚಂಗೆಮ್ಮ ದೇವಿಯ ಭಕ್ತ ಸಮೂಹಕ್ಕೆ ತಲುಪಿ ಈ ಕ್ಷೇತ್ರದ ಮಹಿಮೆ ಹಾಗೂ ದೇವಿಯ ಮೂರ್ತಿಯನ್ನು ಹೋಲುವ ಇಲ್ಲಿಯ ವಿಸ್ಮಯ ಬೆಟ್ಟದ ವಿಚಾರ ಹೊರ ಜಗತ್ತಿಗೆ ತಿಳಿಯಲಿ ಎಂದು ಆಶಿಸಿದ್ದಾರೆ . ಸತತ ಮೂರ್ನಾಲ್ಕು ತಿಂಗಳ ಪ್ರಯತ್ನದಿಂದ ಹಾಗೂ ದೈವೀ ಕೃಪೆಯಿಂದ ತಮಗೆ ಈ ಅದ್ಭುತ ಗೋಚರಿಸಿದೆ. ಈ ಸಂಗತಿ ದೇವಿಯ ಸಮಸ್ತ ಭಕ್ತರಿಗೂ ತಲುಪಲಿ ಎಂಬ ಹಂಬಲ ನನ್ನದು ಎನ್ನುತ್ತಾರೆ ಅರ್ಜುನ್.

ಈ ವಿಸ್ಮಯಕಾರಿ ಸಂಗತಿಯನ್ನು ಬೆಳಕಿಗೆ ತಂದಿರುವ ಅರ್ಜುನ್ ಅವರ ಸಂಶೋಧನಾಸಕ್ತಿ ಹಾಗೂ ಶ್ರದ್ಧಾ ಭಕ್ತಿಗೆ ಸಮಸ್ತ ಭಕ್ತ ವೃಂದದ ಪರವಾಗಿ ಹಾರ್ದಿಕ ಅಭಿನಂದನೆಗಳು. ಅಂತೆಯೇ ಇಂತಹ ಹವ್ಯಾಸಿ ಸಂಶೋಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಇಂತಹ ಇನ್ನಷ್ಟು ನಿಗೂಢ ರಹಸ್ಯ ಹಾಗೂ ಪ್ರಕೃತಿಯ ವಿಸ್ಮಯಗಳನ್ನು ಬೆಳಕಿಗೆ ತರಲು ಸ್ಪೂರ್ತಿ ತುಂಬುವ ಕಾರ್ಯವಾಗಲಿ.

ಬೆಟ್ಟದ ಈ ವಿಸ್ಮಯ ಕುರಿತು ಹಾಗೂ ಯಾವ ಜಾಗದಲ್ಲಿ ನಿಂತು ನೋಡಿದರೆ ದೇವಿಯ ರೂಪವನ್ನು ಸ್ಪಷ್ಟವಾಗಿ ಕಾಣಬಹುದು ಎಂಬಿತ್ಯಾದಿ ಹೆಚ್ಚಿನ ಮಾಹಿತಿಗೆ ಅರ್ಜುನ್ ರವರನ್ನು ಅವರ ಮೊಬೈಲ್ ಸಂಖ್ಯೆ : 9035528728 ಗೆ ಕರೆ ಮಾಡಿ ಸಂಪರ್ಕಿಸಬಹುದು.

– ಗಂಗಾಧರ ಬಿ ಎಲ್ ನಿಟ್ಟೂರ್

Leave a Reply

Your email address will not be published. Required fields are marked *

error: Content is protected !!