‘ಅಪ್ಪು ದೇವರ ಮಾಲೆ’ ಧರಿಸಲು ಕರೆ ನೀಡಿದ ಅಪ್ಪು ಅಭಿಮಾನಿ ಬಳಗ

‌‘ಅಪ್ಪು ದೇವರ ಮಾಲೆ’ ಧರಿಸಲು ಕರೆ ನೀಡಿದ ಅಪ್ಪು ಅಭಿಮಾನಿ ಬಳಗ

ಬೆಂಗಳೂರು: ಶಬರಿಮಲೆ ಅಯ್ಯಪ್ಪ ಮಾಲೆ ಮಾದರಿಯಲ್ಲಿಯೇ ‘ಅಪ್ಪು ದೇವರ ಮಾಲೆ’ ಧರಿಸಲು ಹೊಸಪೇಟೆ ಅಭಿಮಾನಿ ಬಳಗ ಕರೆ ನೀಡಿದೆ.
ಹೊಸಪೇಟೆಯ ಅಪ್ಪು ಅಭಿಮಾನಿಗಳ ಸಂಘ ಮಾರ್ಚ್​ 1ರಿಂದ​ 17ರವರೆಗೆ ಮಾಲಾಧಾರಣೆ ವ್ರತ ಆಚರಿಸಲು ಕರೆ ನೀಡಿದೆ. ಈ ಸಂಬಂಧ ಸಿದ್ಧಪಡಿಸಲಾದ ವ್ರತಾಚರಣೆ ನಿಯಮಗಳನ್ನು ಒಳಗೊಂಡಿರುವ ಕರಪತ್ರ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
ಮಾರ್ಚ್‌.17ರಂದು ಪುನೀತ್‌ ಹುಟ್ಟುಹಬ್ಬ ಇರುವುದರಿಂದ ಅಭಿಮಾನಿಗಳ ಸಂಘ ಈ ವ್ರತಕ್ಕೆ ಕರೆ ನೀಡಿದೆ. ಅಪ್ಪು ಮಾಲೆ ಧರಿಸಿದವರು ಮಾರ್ಚ್​ 18ರಂದು ಪುನೀತ್​ ರಾಜ್​ಕುಮಾರ್​ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ತಮ್ಮ ನೆಚ್ಚಿನ ನಟನಿಗೆ ಗೌರವ ಸಲ್ಲಿಸಬೇಕು ಎಂದು ಸಂಘ ಹೇಳಿದೆ.
ಈ ಕರೆ ನೀಡಿರುವ ವಿಚಾರ ಇದೀಗ ಸಾಮಾಜಿಕ ಮಾಧ್ಯಗಳಲ್ಲಿ ಭಾರೀ ಚರ್ಚೆಗೆ ಗುರಿಯಾಗಿದೆ. ಈ ವ್ರತದ ಕುರಿತು ಪರ–ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
‌‘ಅಪ್ಪು ದೇವರ ಮಾಲೆ’ ವ್ರತ ಆಚರಿಸುವವರು ಕೆಲವಷ್ಟು ನಿಯಮಗಳನ್ನು ಪಾಲಿಸಬೇಕು. ಅಪ್ಪು ಚಿತ್ರ ಹೊಂದಿರುವ ಡಾಲರ್​ ಧರಿಸಬೇಕು. ಕೇಸರಿ ಶಾಲು, ಪಂಚೆ, ಶರ್ಟ್​ ಧರಿಸಿ ಅಪ್ಪು ಭಾವಚಿತ್ರವನ್ನಿಟ್ಟು ಪೂಜಿಸಬೇಕು. ಬೆಳಗ್ಗೆ ಸೂರ್ಯ ಹುಟ್ಟುವುದಕ್ಕಿಂತ ಮೊದಲು ಮತ್ತು ಸಂಜೆ ಸೂರ್ಯ ಮುಳುಗಿದ ನಂತರ ಸ್ನಾನ ಮಾಡಬೇಕು ಎಂದು ಅಭಿಮಾನಿಗಳ ಸಂಘ ಹೇಳಿದೆ.
ಅಭಿಮಾನಿಗಳು 11, 5 ಮತ್ತು ಒಂದು ದಿನದ ಮಾಲೆ ಧರಿಸಬಹುದು. ದಿನಸಿ ವಸ್ತುಗಳಿರುವ ಇಡುಮುರಿಯನ್ನು ಹೊತ್ತು ಪುನೀತ್​ ರಾಜ್​ಕುಮಾರ್​ ಅವರ ಪುಣ್ಯಭೂಮಿಗೆ ತೆರಳಬೇಕು. ಸಮಾಧಿ ದರ್ಶನ ಪಡೆದ ನಂತರ ಹಂಪಿಯ ಪುಣ್ಯ ನದಿಯಲ್ಲಿ ಸ್ನಾನ ಮಾಡಿ, ಬಳಿಕ ವಿರೂಪಾಕ್ಷ ದೇವರಿಗೆ ಪೂಜೆ ಸಲ್ಲಿಸಿ ಮಾಲೆ ವಿಸರ್ಜಿಸತಕ್ಕದ್ದು ಎಂದು ಕರಪತ್ರದಲ್ಲಿ ಸೂಚಿಸಲಾಗಿದೆ.  ಹೊಸಪೇಟೆಯ ಪುನೀತ್‌ ರಾಜ್‌ಕುಮಾರ್‌ ವೃತ್ತದಲ್ಲಿ ಮಾಲೆ ಧರಿಸುವವರು ಸೇರಬೇಕೆಂದು ತಿಳಿಸಲಾಗಿದೆ.
ಹೊಸಪೇಟೆಯಲ್ಲಿ ಪುನೀತ್​ ರಾಜ್​ಕುಮಾರ್​ ಪ್ರತಿಮೆ ಇದೆ. ಅಪ್ಪು ಅಭಿಮಾನಿ ಎಂದು ಕರೆದುಕೊಂಡವರಿಂದ ಇದೇ ಊರಿನಲ್ಲಿ ನಟ ದರ್ಶನ್‌ ಮೇಲೆ ಇತ್ತೀಚೆಗೆ ಹಲ್ಲೆಯೂ ನಡೆದಿತ್ತು. ಇದೀಗ ಮಾಲೆ ಧರಿಸುವ ವ್ರತ ಹಮ್ಮಿಕೊಂಡಿದೆ. ಅಯ್ಯಪ್ಪ ಮಾಲಾಧಾರಣೆಯಂತೆ ರೂಪಿಸಲಾಗಿರುವ ಈ ಕಾರ್ಯಕ್ರಮಕ್ಕೆ ಕೆಲವರಿಂದ ತೀವ್ರ ವಿರೋಧವೂ ವ್ಯಕ್ತವಾಗುತ್ತಿದೆ. ಈ ರೀತಿ ಮಾಡುವುದು ಅಯ್ಯಪ್ಪ ಸ್ವಾಮಿಗೆ ಅವಮಾನ ಮಾಡಿದಂತೆ, ಮೌಢ್ಯತೆಯ ಹೊಸ ರೂಪ ಎಂದು ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!