ಆಟೋ ಪ್ರಯಾಣ ದರ ನಿಗದಿ ಸಭೆ 1.5 ಕಿ.ಮೀ. ಗೆ 30 ರೂ. ದರ ನಿಗದಿ, ಮಾರ್ಚ್ 01 ರಿಂದ ಜಾರಿ – ಜಿಲ್ಲಾಧಿಕಾರಿ ದಿವ್ಯಪ್ರಭು
ಚಿತ್ರದುರ್ಗ :ಚಿತ್ರದುರ್ಗ ಜಿಲ್ಲೆಯಲ್ಲಿ ಆಟೋ ಪ್ರಯಾಣಕ್ಕೆ ಮೊದಲ 1.5 ಕಿ.ಮೀ. ಗೆ 30 ರೂ. ನಂತೆ ಹಾಗೂ ನಂತರದ ಪ್ರತಿ ಒಂದು ಕಿ.ಮೀ. ಗೆ 15 ರೂ. ದರವನ್ನು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಅವರು ನಿಗದಿಗೊಳಿಸಿದ್ದು, ಮಾರ್ಚ್ 01 ರಿಂದ ಈ ದರ ಜಾರಿಗೆ ಬರಲಿದೆ. ನೂತನ ದರ ನಿಗದಿಗೆ ಆಟೋ ಚಾಲಕರ ವಿವಿಧ ಸಂಘದ ಪದಾಧಿಕಾರಿಗಳು ಒಪ್ಪಿಗೆ ಸೂಚಿಸಿ, ಜಿಲ್ಲಾಧಿಕಾರಿಗಳ ಆದೇಶ ಪಾಲಿಸುವುದಾಗಿ ಸಮ್ಮತಿಸಿದರು.
ಆಟೋ ಪ್ರಯಾಣ ದರ ನಿಗದಿ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ಕಳೆದ 2012 ರಲ್ಲಿ ಆಟೋ ದರ ನಿಗದಿಯಾಗಿತ್ತು. ಇದಾದ ಬಳಿಕ ಪುನಃ ದರ ನಿಗದಿ ಮಾಡಿರುವುದಿಲ್ಲ. ಈಗಿನ ದಿನಮಾನದಲ್ಲಿ ಇಂಧನ, ಬಿಡಿಭಾಗಗಳು ಸೇರಿದಂತೆ ಅಗತ್ಯ ವಸ್ತುಗಳ ದರದಲ್ಲಿ ಏರಿಕೆಯಾಗಿದ್ದು, ಹೀಗಾಗಿ ಆಟೋ ಚಾಲಕರ ಮನವಿ ಹಾಗೂ ಸಾರ್ವಜನಿಕರ ಮನವಿಗೆ ಅನುಗುಣವಾಗಿ ಇದೀಗ ಆಟೋ ಪ್ರಯಾಣ ದರವನ್ನು ನಿಗದಿ ಮಾಡಲಾಗಿದೆ. ಆಟೋ ಚಾಲಕರಿಗೂ ಲಾಭದಾಯಕವಾಗಬೇಕು, ಪ್ರಯಾಣಿಕರಿಗೂ ಹೊರೆಯಾಗದ ರೀತಿಯಲ್ಲಿ ಚರ್ಚಿಸಿದ್ದು, ನೆರೆ ಹೊರೆಯ ಜಿಲ್ಲೆಗಳಲ್ಲಿ ನಿಗದಿಯಾಗಿರುವ ಆಟೋ ದರವನ್ನು ಕೂಡ ಪರಾಮರ್ಶಿಸಿದ ಬಳಿಕವೇ ನೂತನ ದರವನ್ನು ನಿಗದಿಪಡಿಸಲಾಗಿದೆ. ಆಟೋದಲ್ಲಿ ಕಡ್ಡಾಯವಾಗಿ ಮೀಟರ್ ಅಳವಡಿಕೆಯಾಗಿರಲೇ ಬೇಕು. ನೂತನ ನಿಗದಿತ ದರದನ್ವಯ ಮೊದಲ 1.5 (ಒಂದೂವರೆ) ಕಿ.ಮೀ. ಆಟೋ ಪ್ರಯಾಣಕ್ಕೆ 30 ರೂ. ದರ ನಿಗದಿಪಡಿಸಿದ್ದು, ನಂತರದ ಪ್ರತಿ ಒಂದು ಕಿ.ಮೀ. ಗೆ 15 ರೂ. ನಿಗದಿಪಡಿಸಲಾಗಿದೆ. ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 05 ಗಂಟೆಯವರೆಗೆ ನಿಗದಿತ ಮೊತ್ತದ ಒಂದೂವರೆಪಟ್ಟು ದರವನ್ನು ಮಾತ್ರ ಆಟೋ ಚಾಲಕರು ಪಡೆಯಬೇಕು. ಹೆಚ್ಚಿನ ದರ ವಸೂಲಿ ಮಾಡುವಂತಿಲ್ಲ. ಕಾಯುವಿಕೆಗೆ ಮೊದಲ 15 ನಿಮಿಷಕ್ಕೆ ಯಾವುದೇ ದರ ವಿಧಿಸುವಂತಿಲ್ಲ, ನಂತರದ ಪ್ರತಿ 15 ನಿಮಿಷಕ್ಕೆ 05 ರೂ. ಕಾಯುವಿಕೆ ದರ ನಿಗದಿಪಡಿಸಲಾಗಿದೆ. 20 ಕೆ.ಜಿ. ತೂಕದವರೆಗೂ ಲಗೇಜ್ ಶುಲ್ಕ ವಸೂಲಿ ಮಾಡುವಂತಿಲ್ಲ, ನಂತರದ ಪ್ರತಿ ಒಂದು ಕೆ.ಜಿ. ಗೆ 05 ರೂ. ಲಗೇಜ್ ದರ ನಿಗದಿಪಡಿಸಲಾಗಿದೆ. ನೂತನ ದರ ಮಾರ್ಚ್ 01 ರಿಂದ ಜಾರಿಗೆ ಬರಲಿದ್ದು, ನಿಗದಿತ ಮೊತ್ತಕ್ಕಿಂತ ಹೆಚ್ಚಿನ ಮೊತ್ತಕ್ಕೆ ಆಟೋ ಚಾಲಕರು ಪ್ರಯಾಣಿಕರು ಬೇಡಿಕೆ ಸಲ್ಲಿಸುವಂತಿಲ್ಲ. ಆಟೋ ಪ್ರಯಾಣ ದರಕ್ಕೆ ಸಂಬಂಧಿಸಿದಂತೆ ಯಾವುದೇ ದೂರುಗಳಿಗೆ ಅವಕಾಶವಿಲ್ಲದಂತೆ ಸಾರ್ವಜನಿಕರೊಂದಿಗೆ ಸೌಜನ್ಯಯುತ ಹಾಗೂ ಗೌರವಯುತವಾಗಿ ವರ್ತಿಸಬೇಕು. ಮುಂದಿನ ದಿನಗಳಲ್ಲಿ ಇಂಧನ, ಅಗತ್ಯ ವಸ್ತುಗಳ ಬೆಲೆ ಏರಿಕೆಯಾದ ಸಂದರ್ಭಕ್ಕೆ ಮತ್ತೊಮ್ಮೆ ಸಭೆ ಕರೆದು ದರ ಪರಿಷ್ಕರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಹೇಳಿದರು.
ಚಿತ್ರದುರ್ಗ ತಾಲ್ಲೂಕಿನಲ್ಲಿ 3600 ಆಟೋಗಳಿದ್ದು, ಮೊದಲ ಹಂತದಲ್ಲಿ ಚಿತ್ರದುರ್ಗ ತಾಲ್ಲೂಕಿನ ಎಲ್ಲ ಆಟೋಗಳ ಮೀಟರ್‍ಗೆ ನೂತನ ದರ ನಿಗದಿಯಂತೆ ಕ್ಯಾಲಿಬರೇಶನ್ ಅಪ್‍ಡೇಟ್ ಕಾರ್ಯವನ್ನು ಜ. 30 ರಿಂದಲೇ ಪ್ರಾರಂಭಿಸಿ, ಫೆಬ್ರವರಿ 28 ರೊಳಗೆ ಪೂರ್ಣಗೊಳಿಸಲಾಗುವುದು. ಉಳಿದ ತಾಲ್ಲೂಕುಗಳ ಆಟೋ ಮೀಟರ್‍ಗಳ ಕ್ಯಾಲಿಬರೇಶನ್ ಕಾರ್ಯವನ್ನು ಕೂಡ ಆದಷ್ಟು ತ್ವರಿತವಾಗಿ ಪೂರ್ಣಗೊಳಿಸಲಾಗುವುದು ಎಂದು ತೂಕ ಮತ್ತು ಕಾನೂನು ಮಾಪನ ಇಲಾಖೆ ಚಿತ್ರದುರ್ಗ ನಿರೀಕ್ಷಕ ರಾಗ್ಯಾ ನಾಯಕ್ ಹೇಳಿದರು. ಮೀಟರ್ ಅಪ್‍ಡೇಷನ್ ಹಾಗೂ ಕ್ಯಾಲಿಬರೇಶನ್‍ಗೆ ನಿಗದಿತ ಶುಲ್ಕವನ್ನು ಮಾತ್ರ ಪಡೆಯಬೇಕು, ಇದಕ್ಕಾಗಿ ಸಂಚಾರ ಠಾಣೆ ಪೊಲೀಸ್ ಹಾಗೂ ಆಟೋ ಚಾಲಕರ ಸಂಘದ ಸಹಯೋಗದೊಂದಿಗೆ ವಿಶೇಷ ಶಿಬಿರವನ್ನು ಆಯೋಜಿಸಿ, ಆದಷ್ಟು ತ್ವರಿತವಾಗಿ ಪೂರ್ಣಗೊಳಿಸಬೇಕು. ಹೆಚ್ಚಿನ ದರ ವಸೂಲಿ ಸಂಬಂಧ ದೂರು ಬಂದಲ್ಲಿ, ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ನಗರದಲ್ಲಿ ದ್ವಿಚಕ್ರ ವಾಹನ, ಕಾರುಗಳಿಗೆ ಪಾರ್ಕಿಂಗ್ ಜಾಗ ನಿಗದಿಪಡಿಸಕಾಗಿದೆ, ಆದರೆ ಆಟೋ ಗಳಿಗೆ ಪಾರ್ಕಿಂಗ್‍ಗೆ ಸ್ಥಳ ನಿಗದಿಪಡಿಸಿಲ್ಲ, ನಗರದಲ್ಲಿ ಆಟೋ ಸ್ಟ್ಯಾಂಡ್‍ಗಳು ಇಲ್ಲದೆ ನಮಗೆ ಆಟೋ ನಿಲ್ಲಿಸಲು ತೀವ್ರ ತೊಂದರೆಯಾಗುತ್ತಿದೆ, ಈ ಬಗ್ಗೆ ಹಲವು ಬಾರಿ ನಗರಸಭೆಗೆ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ. ಕೊರೊನಾ ಸಂಕಷ್ಟದ ಬಳಿಕ ಇದೀಗ ತಾನೇ ಬದುಕು ಸುಧಾರಿಸುತ್ತಿದೆ, ಆಯಾ ದಿನದ ದುಡಿಮೆಯಿಂದಲೇ ನಮ್ಮ ಜೀವನ ಸಾಗುತ್ತದೆ. ನಮಗೆ ಯಾವುದೇ ಯೋಜನೆಯಲ್ಲಿ ಮನೆ ಸಿಗುತ್ತಿಲ್ಲ. ಹೀಗಾಗಿ ಆಟೋ ಚಾಲಕರಿಗಾಗಿಯೇ ನಿವೇಶನವನ್ನು ಗುರುತಿಸಿ, ಮನೆ ನಿರ್ಮಿಸಿಕೊಟ್ಟಲ್ಲಿ, ನಮ್ಮ ಬದುಕು ಸುಧಾರಣೆಗೊಳ್ಳಲು ಸಾಧ್ಯ ಎಂದು ಆಟೋ ಚಾಲಕರ ವಿವಿಧ ಸಂಘದ ಪದಾಧಿಕಾರಿಗಳು ಒಕ್ಕೊರಲಿನಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ನಗರದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಂದ ಸಮೀಕ್ಷೆ ಮಾಡಿಸಿ, ಆಟೋ ಪಾರ್ಕಿಂಗ್ ಸ್ಥಳ ನಿಗದಿ ಮತ್ತು ಆಟೋ ಸ್ಟ್ಯಾಂಡ್ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಲಾಗುವುದು. ನಿವೇಶನಕ್ಕೆ ಸಂಬಂಧಿಸಿದಂತೆಯೂ ಅಧಿಕಾರಿಗಳಿಂದ ಸೂಕ್ತ ಸ್ಥಳ ಹಾಗೂ ಯಾವ ಯೋಜನೆಯಲ್ಲಿ ನಿಮಗೆ ನಿವೇಶನ ಮತ್ತು ಮನೆ ಮಂಜೂರು ಮಾಡಬಹುದು ಎಂಬುದನ್ನು ಪರಿಶೀಲಿಸಿ, ಆಟೋ ಚಾಲಕರಿಗೆ ಅನುಕೂಲ ಮಾಡಿಕೊಡಲು ಪ್ರಾಮಾಣಿಕ ಯತ್ನ ಮಾಡುವುದಾಗಿ ಭರವಸೆ ನೀಡಿದರು.
ಹೊಸ ಮೀಟರ್ ಖರೀದಿಗೆ ಸಂಬಂಧಿಸಿದಂತೆ ಅಂಗಡಿಯವರು ಗರಿಷ್ಠ ಮಾರಾಟ ದರಕ್ಕಿಂತ ಹೆಚ್ಚಿನ ದರ ವಸೂಲಿ ಮಾಡುತ್ತಿದ್ದಾರೆ ಎಂದು ಕೆಲ ಆಟೋ ಚಾಲಕರು ಸಭೆಯ ಗಮನಕ್ಕೆ ತಂದರು, ಇದಕ್ಕೆ ಪ್ರತಿಕ್ರಿಯಿಸಿದ ತೂಕ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆ ಜಿಲ್ಲಾ ಸಹಾಯಕ ನಿಯಂತ್ರಕ ಗುರುಪ್ರಸಾದ್, ಗರಿಷ್ಠ ಮಾರಾಟ ದರಕ್ಕಿಂತ ಹೆಚ್ಚಿನ ದರ ವಸೂಲಿ ಮಾಡುತ್ತಿದ್ದಲ್ಲಿ, ಸೂಕ್ತ ದಾಖಲೆಗಳೊಂದಿಗೆ ನಮ್ಮ ಇಲಾಖೆಗೆ ದೂರು ಸಲ್ಲಿಸಿದಲ್ಲಿ, ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದರು. ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ಅಂಗಡಿಕಾರರೊಂದಿಗೆ ಸಭೆ ನಡೆಸಿ, ನಿಗದಿತ ದರಕ್ಕಿಂತ ಹೆಚ್ಚಿನ ದರ ವಸೂಲಿ ಮಾಡದಂತೆ ತಾಕೀತು ಮಾಡಲು ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಮ್ ಅವರು ಮಾತನಾಡಿ, ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ನಿಗದಿತ ಆಸನ ಸಾಮಥ್ರ್ಯಕ್ಕಿಂತ ಹೆಚ್ಚಿನ ಜನರನ್ನು ಹಾಕಿಕೊಂಡು ಆಟೋಗಳು ಸಂಚರಿಸುವ ಮೂಲಕ ಅಪಘಾತಗಳಿಗೆ ಕಾರಣರಾಗುತ್ತಿದ್ದಾರೆ, ಈ ಬಗ್ಗೆ ವ್ಯಾಪಕ ದೂರುಗಳು ಬರುತ್ತಿವೆ. ಪೊಲೀಸ್ ಹಾಗೂ ಆರ್‍ಟಿಒ ಅಧಿಕಾರಿಗಳಿಂದ ವಿಶೇಷ ಅಭಿಯಾನ ನಡೆಸಿ, ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಶಾಲಾ ಮಕ್ಕಳನ್ನು ಕರೆದೊಯ್ಯುವ ಆಟೋಗಳು ಕೂಡ 06 ಕ್ಕಿಂತ ಹೆಚ್ಚು ಮಕ್ಕಳನ್ನು ಹಾಕಬೇಡಿ, ಅಲ್ಲದೆ ಇತರೆ ಆಟೋಗಳೊಂದಿಗೆ ಸ್ಪರ್ಧೆಗಿಳಿಯಬೇಡಿ, ಜೀವಕ್ಕಿಂತ ದೊಡ್ಡದು ಯಾವುದೂ ಇಲ್ಲ, ಶಾಲಾ ಮಕ್ಕಳೊಂದಿಗಿನ ನಿಮ್ಮ ವರ್ತನೆಯೂ ಕೂಡ ಸರಿಯಾಗಿ ಇರಬೇಕು, ಈ ಬಗ್ಗೆ ಆಯಾ ಶಾಲೆಯವರು ಹಾಗೂ ಆಟೋ ಚಾಲಕರು ತೀವ್ರ ಮುಂಜಾಗ್ರತಾ ಕ್ರಮ ವಹಿಸುವುದು ಅಗತ್ಯ ಎಂದರು.
ಆರ್‍ಟಿಒ ಪ್ರಮುತೇಶ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಚಿತ್ರದುರ್ಗ ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು 3600 ಆಟೋಗಳಿವೆ, ಉಳಿದಂತೆ ಚಳ್ಳಕೆರೆ-851, ಹೊಳಲ್ಕೆರೆ-320, ಹೊಸದುರ್ಗ-380, ಮೊಳಕಾಲ್ಮೂರು-480, ಹಿರಿಯೂರು-950 ಆಟೋಗಳಿವೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಮ್, ಆರ್‍ಟಿಒ ಪ್ರಮುತೇಶ್, ತೂಕ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆ ಜಿಲ್ಲಾ ಸಹಾಯಕ ನಿಯಂತ್ರಕ ಗುರುಪ್ರಸಾದ್, ಪ್ರಾದೇಶಿಕ ಸಾರಿಗೆ ಇಲಾಖೆ ಅಧೀಕ್ಷಕ ಹೇಮಂತ್, ಸಂಚಾರ ಪೊಲೀಸ್ ಠಾಣೆ ಪೊಲೀಸ್ ಅಧಿಕಾರಿ ಟಿ. ರಾಜು ಸೇರಿದಂತೆ ವಿವಿಧ ಅಧಿಕಾರಿಗಳು, ಆಟೋ ಚಾಲಕರ ವಿವಿಧ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.