Bhadra water; ಭದ್ರಾ ನೀರಿಗಾಗಿ ಎರಡು ಜಿಲ್ಲೆಯಲ್ಲಿ ರೈತರ ಹೋರಾಟ

ದಾವಣಗೆರೆ, ಸೆ. 06: ಭದ್ರಾ ಡ್ಯಾಂ ನೀರಿನ (Bhadra water) ಮೇಲೆ ಎರಡು ಜಿಲ್ಲೆಯಲ್ಲಿ ಈಗ ಹೋರಾಟ ನಡೆಯುತ್ತಿದ್ದು, ಒಂದು ಕಡೆ ನೀರು ಹರಿಸಬೇಕೆಂದು ಹೋರಾಟ ನಡೆಯುತ್ತಿದ್ದರೆ, ಇನ್ನೊಂದು ಕಡೆ ನೀರು ನಿಲ್ಲಿಸುವಂತೆ ಹೋರಾಟ ನಡೆಯುತ್ತಿದೆ.

ಶಿವಮೊಗ್ಗದಲ್ಲಿ ಹೆಚ್ಚು ಅಡಕೆ ತೋಟವಿರುವ ಕಾರಣ ಬೇಸಿಗೆಗೆ ನೀರು ಹರಿಸಿ ಅಥವಾ ಆನ್ ಆಂಡ್ ಆಫ್ ಸಿಸ್ಟಮ್ ಮಾಡಿ ಎಂದು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಭಾಗದ ರೈತರು ಹೋರಾಟ ನಡೆಸುತ್ತಿದ್ದಾರೆ. ಇನ್ನೊಂದು ಕಡೆ ದಾವಣಗೆರೆಯಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಬೆಳೆ 70ರಷ್ಟು ಇದ್ದು, ನೀರು ಹರಿಸಿದರೆ ಭತ್ತ ಹಾಳಾಗಿ ರೈತರು ನಷ್ಟ ಹೊಂದುತ್ತಾರೆ. ಆದ್ದರಿಂದ ನಾಲೆಯಲ್ಲಿ ನೀರು ಹರಿಸುವಂತೆ ದಾವಣಗೆರೆ ವಿಭಾಗದ ರೈತರು ಹೋರಾಟ ನಡೆಸುತ್ತಿದ್ದಾರೆ.

ನಗರದ ಬೀರಲಿಂಗೇಶ್ವರ ದೇವಾಲಯ ಆವರಣದಲ್ಲಿ ಭಾರತೀಯ ರೈತ ಒಕ್ಕೂಟ ಸಭೆ ಒಕ್ಕೂಟದ ನೇತೃತ್ವದಲ್ಲಿ ರೈತರು ಸಭೆ ನಡೆಸಿದ್ದಾರೆ. ಈ ವೇಳೆ ರೈತ ಮುಖಂಡ ಬಿ.ಎಂ.ಸತೀಶ್ ಮಾತನಾಡಿ, ರಾಜ್ಯ ಸರಕಾರ ತೀರ್ಮಾನಿಸಿ ವೇಳಾಪಟ್ಟಿ ಹೊರಡಿಸಿದಂತೆ ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ನಿರಂತರ 100 ದಿನ ನೀರು ಹರಿಸಬೇಕು, ಶೇ.70ರಷ್ಟು ಭದ್ರಾ ಅಚ್ಚುಕಟ್ಟು ಪ್ರದೇಶ ದಾವಣಗೆರೆ ಜಿಲ್ಲೆಯಲ್ಲಿ ಇರುವುದರಿಂದ ದಾವಣಗೆರೆ ಜಿಲ್ಲೆ ಜನ ಪ್ರತಿನಿಧಿಯೊಬ್ಬರನ್ನು ತಾತ್ಕಾಲಿಕ ಅಧ್ಯಕ್ಷರನ್ನಾಗಿ ನೇಮಕ ಮಾಡಿ, ಐಸಿಸಿ ಸಭೆ ದಾವಣಗೆರೆಯಲ್ಲಿ ನಡೆಸಬೇಕು. ಆಹಾರ ಬೆಳೆ ಬೆಳೆಯಲು ಭದ್ರಾ ಜಲಾಶಯ ನಿರ್ಮಾಣ ಮಾಡಲಾಗಿದೆ. ಆದರೆ ಭತ್ತದ ಬೆಳೆಗಿಂತ ಅಡಕೆ ಬೆಳೆಗೆ ನೀರು ಬೇಕು ಎಂದು ಒತ್ತಾಯಿಸುವುದು ಸರಿಯಲ್ಲ. ಸರಕಾರ ತರಾತುರಿಯಲ್ಲಿ ಶಿವಮೊಗ್ಗ ಜಿಲ್ಲೆ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರನ್ನು ತಾತ್ಕಾಲಿಕ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಸಭೆ ಕರೆದಿರುವುದು ಭತ್ತದ ಬೆಳೆಗಾರರಿಗೆ ಮರಣ ಶಾಸನವಾಗಿದೆ ಎಂದು ಹೇಳಿದರು.

Pourakarmika; ಪೌರ ಕಾರ್ಮಿಕರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳ ತಾತ್ಕಾಲಿಕ ಪಟ್ಟಿ ಪ್ರಕಟ

ಶಾಸಕ ಬಿ.ಪಿ. ಹರೀಶ್ ಮಾತನಾಡಿ, ನಾಲೆಗೆ ಅಕ್ರಮ ಪಂಪ್ ಸೆಟ್ ಅಳವಡಿಸಿಕೊಂಡು ಅಡಕೆ ತೋಟ ಮಾಡಿರುವ ಕೆಲವು ರೈತರು ಭದ್ರಾ ನಾಲೆಗಳಲ್ಲಿ ನಿರಂತರ ನೀರು ಹರಿಸಿದರೆ ಮುಂದಿನ ಬೇಸಿಗೆಯಲ್ಲಿ ತೋಟ ನಿರ್ವಹಣೆಗೆ ಅನಾನುಕೂಲವಾಗುತ್ತದೆ ಎಂಬ ಕಾರಣಕ್ಕೆ ನೀರು ಹರಿಸುವ ವೇಳಾಪಟ್ಟಿಯನ್ನು ಪರಿಷ್ಕರಿಸಲು ಒತ್ತಾಯಿಸುತ್ತಿದ್ದಾರೆ ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ಬೆಳವನೂರು ನಾಗೇಶ್ವರರಾವ್ ಮಾತನಾಡಿ, ಸರಕಾರ 100 ದಿನ ನಿರಂತರವಾಗಿ ನೀರು ಹರಿಸುವುದಾಗಿ ಅಧಿಸೂಚನೆ ಹೊರಡಿಸಿದ್ದರಿಂದ ರೈತರು ಭತ್ತದ ನಾಟಿ ಮಾಡಿದ್ದಾರೆ. ಈಗಾಗಲೇ 2 ಬಾರಿ ಗೊಬ್ಬರ ಹಾಕಿದ್ದು, ಒಂದು ಎಕರೆಗೆ ಸುಮಾರು 35 ಸಾವಿರದಷ್ಟು ಸಾಲ ಮಾಡಿ ಬಂಡವಾಳ ಸುರಿದಿದ್ದಾರೆ. ಈಗ ನೀರು ಹರಿಸುವ ವೇಳಾಪಟ್ಟಿಯನ್ನು ಪರಿಷ್ಕರಿಸುತ್ತೇವೆ ಎನ್ನುವುದು ಮಕ್ಕಳಾಟವಾಗಿದೆ ಎಂದು ಖಂಡಿಸಿದ್ದಾರೆ.

ಸದ್ಯ ಭದ್ರಾ ಡ್ಯಾಂನಲ್ಲಿ 33 ಟಿಎಂಸಿ ನೀರಿನ ಸಂಗ್ರಹವಿದೆ. ಈಗಾಗಲೇ ನೀರು ಹರಿಸಲು ಪ್ರಾರಂಭಿಸಿ 25 ದಿನಗಳಾಗಿವೆ. ಇನ್ನು 75 ದಿನ ನೀರು ಹರಿಸಲು 23 ಟಿಎಂಸಿ ನೀರು ಬೇಕು. ಜಲಾಶಯದಲ್ಲಿ ಕುಡಿಯುವ ನೀರಿಗೆ 7 ಟಿಎಂಸಿ ನೀರು ಮೀಸಲಿಟ್ಟರೂ 33 ಟಿಎಂಸಿ ನೀರಿನ ಸಂಗ್ರಹ ಇದೆ. ಆದ್ದರಿಂದ ಸರಕಾರ ರೈತರೊಂದಿಗೆ ಹುಡುಗಾಟಿಕೆ ಮಾಡಬಾರದು ಎಂದು ದಾವಣಗೆರೆ ರೈತರು ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!