ಬಿಜೆಪಿ ಬಿಡಲ್ಲ: ಸೋಮಣ್ಣ ಸ್ಪಷ್ಟನೆ
ಬೆಂಗಳೂರು: ನಾನು ಬಿಜೆಪಿ ಬಿಡುವುದಿಲ್ಲ. ಪಕ್ಷದಿಂದ ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತೇನೆ. ಇಲ್ಲವಾದರೆ ಪಕ್ಷಕ್ಕಾಗಿ ಕೆಲಸ ಮಾಡಿಕೊಂಡಿರುತ್ತೇನೆ ಎಂದು ವಸತಿ ಸಚಿವ ವಿ. ಸೋಮಣ್ಣ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ನನಗೆ ಯಾವ ಅಸಮಾಧಾನವೂ ಇಲ್ಲ. ಯಾವುದೇ ನಾಯಕರು ಅಗೌರವ ಆಗುವ ರೀತಿ ನಡೆದುಕೊಂಡಿಲ್ಲ. ನಾನು ಕೂಡ ಪಕ್ಷಕ್ಕೆ ಮುಜುಗರ ಆಗುವಂತೆ ವರ್ತಿಸಿಲ್ಲ. ನನಗೆ ಅವಮಾನ ಆಗಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೆ. ನಾನು ಯಾರ ಮುಲಾಜಿನಲ್ಲೂ ಇಲ್ಲ. ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಸುಮ್ಮನಿರುವುದಿಲ್ಲ ಎಂದರು.
ಪಕ್ಷ ತ್ಯಜಿಸುತ್ತೇನೆ ಎಂದು ನಾನು ಎಲ್ಲಿಯೂ ಹೇಳಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಜತೆ ವಿಮಾನದಲ್ಲಿ ಪ್ರಯಾಣಿಸುತ್ತಿರುವ ಫೋಟೊ ಹರಿಯಬಿಟ್ಟು ವದಂತಿ ಹಬ್ಬಿಸಲಾಗಿದೆ ಎಂದು ಕಣ್ಣೀರು ಹಾಕಿದರು.
ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡುವುದು ಪಕ್ಷಕ್ಕೆ ಬಿಟ್ಟ ವಿಚಾರ. ಟಿಕೆಟ್ ಕೊಟ್ಟರೆ ಯಾವುದೇ ಕ್ಷೇತ್ರದಲ್ಲೂ ಸ್ಪರ್ಧಿಸುತ್ತೇನೆ. ಇಲ್ಲವಾದರೆ ಯಾರನ್ನೇ ಅಭ್ಯರ್ಥಿ ಮಾಡಿದರೂ ಅವರ ಪರವಾಗಿ ಕೆಲಸ ಮಾಡುತ್ತೇನೆ. ಹಲವು ಕ್ಷೇತ್ರಗಳ ಉಪ ಚುನಾವಣೆಯ ಜವಾಬ್ದಾರಿಯನ್ನು ಪಕ್ಷದ ನಾಯಕರು ನನಗೆ ವಹಿಸಿದ್ದರು. ಎಲ್ಲ ಕಡೆಗಳಲ್ಲೂ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬಂದಿದ್ದೇನೆ. ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿದ್ದೇನೆ. ನನ್ನ ಇತಿಮಿತಿಗಳು ಗೊತ್ತಿವೆ ಎಂದರು.