ಬೂತ್ ವಿಜಯ ಅಭಿಯಾನ ಯಶಸ್ಸಿನ ಮೂಲಕ ರಾಜ್ಯದಲ್ಲಿ ಬಿಜೆಪಿ ಗೆಲುವು: ಕೋಟ ಶ್ರೀನಿವಾಸ ಪೂಜಾರಿ

ಬೆಂಗಳೂರು: ಬೂತ್ ವಿಜಯ ಅಭಿಯಾನವನ್ನು ಬಿಜೆಪಿ ವತಿಯಿಂದ ಜ.2ರಿಂದ 12ರವರೆಗೆ ಹಮ್ಮಿಕೊಂಡಿದ್ದೆವು. ಸಂಭ್ರಮ, ಆತ್ಮವಿಶ್ವಾಸದಿಂದ ಇದನ್ನು ನಡೆಸಲಾಗಿದೆ. ಬೂತ್ ವಿಜಯ ಅಭಿಯಾನದ ಯಶಸ್ಸಿನ ಮೂಲಕ ರಾಜ್ಯದಲ್ಲಿ ಬಿಜೆಪಿ ಗೆಲುವು ಖಚಿತ ಎಂದು ಬಿಜೆಪಿ ಬೂತ್ ವಿಜಯ ಅಭಿಯಾನದ ಸಂಚಾಲಕ ಮತ್ತು ರಾಜ್ಯದ ಸಮಾಜಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮನೆಮನೆಯಲ್ಲಿ ಬಿಜೆಪಿ ಧ್ವಜ ಹಾರಿಸಲಾಗಿದೆ. ಪೇಜ್ ಪ್ರಮುಖರನ್ನು ನಿಯುಕ್ತಿ ಮಾಡಿದ್ದೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿವಾಜಿನಗರದಲ್ಲಿ, ರಾಜ್ಯಾಧ್ಯಕ್ಷರಾದ ನಳಿನ್‍ಕುಮಾರ್ ಕಟೀಲ್ ಅವರು ಮಂಗಳೂರಿನಲ್ಲಿ, ಮುಖಂಡ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಅವರು ಶಿವಮೊಗ್ಗದಲ್ಲಿ ಬೂತ್ ವಿಜಯ ಅಭಿಯಾನ ಪ್ರಾರಂಭಿಸಿದ್ದರು. ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಗದಗದಲ್ಲಿ, ಕು.ಶೋಭಾ ಕರಂದ್ಲಾಜೆಯವರು ಉಡುಪಿಯಲ್ಲಿ, ಎಲ್ಲ ಉಸ್ತುವಾರಿ ಸಚಿವರು ಆಯಾ ಜಿಲ್ಲೆಯಲ್ಲಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ವಿವರ ನೀಡಿದರು.

ಸಂಸದರು, ಎಂಎಲ್‍ಎ, ಎಂಎಲ್‍ಸಿಗಳು ಸೇರಿ ಅಭಿಯಾನ ಮಾಡಿದ್ದು, ಕಟ್ಟಕಡೆಯ ಕಾರ್ಯಕರ್ತರಲ್ಲಿ ಇದು ಸಂಚಲನ ಉಂಟು ಮಾಡಿತ್ತು. ಬೂತ್ ಗೆಲುವಿನ ಮೂಲಕ ರಾಜ್ಯದಲ್ಲಿ ಗೆಲುವು ಖಂಡಿತ ಎಂದು ತಿಳಿಸಿದರು.
51,872 ಬೂತ್ ಸಮಿತಿ ರಚನೆ ಮಾಡಿದ್ದೇವೆ. 13,21,792 ಪೇಜ್ ಪ್ರಮುಖರ ನೇಮಕ ಮಾಡಲಾಗಿದೆ. ಪ್ರತಿ ಪುಟವೂ 30 ಮತದಾರರನ್ನು ಒಳಗೊಂಡಿರುತ್ತದೆ. ಕಾರ್ಯಕರ್ತರಿಗಾಗಿ 50,260 ವಾಟ್ಸಪ್ ಗ್ರೂಪ್ ರಚಿಸಲಾಗಿದೆ. 32 ಲಕ್ಷದ 883 ಮನೆಗಳ ಮೇಲೆ ಬಿಜೆಪಿ ಧ್ವಜ ಹಾರಿಸಿದ್ದೇವೆ. ಗಲ್ಲಿಗಲ್ಲಿ, ಮನೆಮನೆಗಳ ಮೇಲೆ ಬಿಜೆಪಿ ಬಾವುಟ ಹಾರುತ್ತಿದೆ ಎಂದು ತಿಳಿಸಿದರು.

15,93,848 ಕಾರ್ಯಕರ್ತರ ಶ್ರಮ ಇದರಲ್ಲಿತ್ತು. ಅವರೆಲ್ಲರ ತನು, ಮನ, ಧನದ ಸಹಕಾರ ಸಿಕ್ಕಿದೆ. ಬಿಜೆಪಿ ಗೆಲುವು ಖಾತ್ರಿ ಪಡಿಸಲು ಮತ್ತು ಡಬಲ್ ಎಂಜಿನ್ ಸರಕಾರಗಳ ಸಾಧನೆ ಮತ್ತು ಅಭಿವೃದ್ಧಿ ವಿಚಾರಗಳನ್ನು ತಿಳಿಸಲು ನಾವು ಶ್ರಮಿಸಲಿದ್ದೇವೆ ಎಂದು ತಿಳಿಸಿದರು.

ಕಾರ್ಯಕರ್ತರಲ್ಲಿ ರಣೋತ್ಸಾಹ, ಪ್ರೀತಿ, ನಂಬಿಕೆ ಇದೆ. 50 ಲಕ್ಷಕ್ಕೂ ಹೆಚ್ಚು ಧ್ವಜ ಹಾರಿಸುವ ಗುರಿ ಮೀರಿ ಸಾಧನೆ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪಕ್ಷದಲ್ಲಿನ ಕೆಲವರ ಅಸಮಾಧಾನ ಕುರಿತು ಪ್ರಶ್ನಿಸಿದಾಗ, ಸಣ್ಣಪುಟ್ಟ ಗುಡುಗು, ಮಿಂಚು ಸಹಜ. ಅದು ಮಳೆಯ ಬಳಿಕ ತಣ್ಣಗಾಗುತ್ತದೆ ಎಂದು ಉತ್ತರ ನೀಡಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಅಭಿಯಾನದ ಸಹ ಸಂಚಾಲಕ ಮಹೇಶ್ ಟೆಂಗಿನಕಾಯಿ ಅವರು ಮಾತನಾಡಿ, ಕೇಂದ್ರ ಸಚಿವ ಅಮಿತ್ ಶಾ ಅವರು ಬೂತ್ ಗೆಲುವಿನ ಮೂಲಕ ರಾಜ್ಯದಲ್ಲಿ ಗೆಲುವಿನ ಗುರಿ ನೀಡಿದ್ದಾರೆ. ಪಕ್ಷದ ಎಲ್ಲ ನಾಯಕರು ಒಂದು ಬೂತ್‍ಗೆ ಹೋಗಿ ಅಲ್ಲಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರೂ ಇದರಲ್ಲಿ ಭಾಗವಹಿಸಿದ್ದು ವಿಶೇಷ ಎಂದರು.

ಬೂತ್‍ನಲ್ಲಿ ಮಾಡಿದ ಕಾರ್ಯಗಳು ಇತರ ರಾಜ್ಯಗಳಲ್ಲೂ ಗೆಲುವಿಗೆ ಪೂರಕ ಎನಿಸಿತ್ತು. ಬೂತ್ ಅಭಿಯಾನ ಯಶಸ್ಸಿಗಾಗಿ 65,320 ಸಭೆಗಳನ್ನು ಮಾಡಿದ್ದೇವೆ. 615 ವೆಬೆಕ್ಸ್ ಸಭೆಗಳನ್ನೂ ನಡೆಸಲಾಗಿತ್ತು. ಈ ಮೂಲಕ ಎಲ್ಲ ಜನಪ್ರತಿನಿಧಿಗಳನ್ನು ಒಳಗೊಳ್ಳುವಂತೆ ನೋಡಿಕೊಂಡಿದ್ದೇವೆ ಎಂದು ತಿಳಿಸಿದರು.

ಇದೊಂದು ಬಹು ದೊಡ್ಡ ಅಭಿಯಾನ. ಫಲಾಪೇಕ್ಷೆ ಇಲ್ಲದ ಕಾರ್ಯಕರ್ತರು ನಮ್ಮಲ್ಲಿದ್ದಾರೆ. ಮಿಷನ್ 150 ಗುರಿ ನಮ್ಮ ಎದುರಿದೆ. ಅದನ್ನು ಸಾಧಿಸುತ್ತೇವೆ. ಅದಕ್ಕೆ ಈ ಅಭಿಯಾನವು ಪೂರಕ ಎಂದು ವಿವರಿಸಿದರು. ಮನೆ ಮುಟ್ಟುವ ಜೊತೆಗೆ ಮನ ಮುಟ್ಟಲು ಮುಂದಾಗಿದ್ದು, ಹೊಸ ವಾಟ್ಸಪ್ ಗ್ರೂಪ್ ರಚಿಸಿದ್ದೇವೆ. ಅದರ ಮೂಲಕ ಡಬಲ್ ಎಂಜಿನ್ ಸರಕಾರಗಳ ಸಾಧನೆ, ಮುಂದಿನ ಯೋಜನೆಗಳ ವಿವರ ನೀಡಲಿದ್ದೇವೆ ಎಂದು ವಿವರಿಸಿದರು.

ಬಿಜೆಪಿ 6 ಮೋರ್ಚಾಗಳ ಪದಾಧಿಕಾರಿಗಳು, ಎಲ್ಲ ಪ್ರಕೋಷ್ಠಗಳನ್ನು ಒಳಗೊಂಡು 312 ಮಂಡಲಗಳಲ್ಲಿ ಕೆಲಸ ಮಾಡಿದ್ದಾರೆ. ವರದಿ ನೀಡುವ ನಿಟ್ಟಿನಲ್ಲಿ ಇಡೀ ತಂಡ ಪರಿಶ್ರಮ ಹಾಕಿದೆ. ಅವರಿಗೆ ಅಭಿನಂದನೆಗಳು ಎಂದು ತಿಳಿಸಿದರು. ಕಾರ್ಯಕರ್ತರ ಬಲದ ಮೇಲೆ ಪಕ್ಷ ಗೆಲುವು ಸಾಧಿಸಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!