ಸಿ ಎಂ ರೇಸ್‌ನಲ್ಲಿ ನಮ್ಮ ಮೂರು ಹುಲಿಗಳು ಓಡುತ್ತಿದ್ದಾರೆ. ಯಡಿಯೂರಪ್ಪ ನವರಿಗೆ ರೇಸ್‌ನಲ್ಲಿ ಗೋಲ್ಡ್ ಮೆಡಲ್ ಬಂದಿದೆ – ಜಯಮೃತ್ಯುಂಜಯ ಸ್ವಾಮೀಜಿ

ದಾವಣಗೆರೆ: ರಾಜ್ಯಕ್ಕೆ ನಾಯಕತ್ವ ನೀಡಿದ ಸಮಾಜ ಎಂದರೆ ಅದು ಲಿಂಗಾಯತ ಸಮಾಜ. ಹಾಗಾಗಿ, ಒಂದು ವೇಳೆ ನಾಯಕತ್ವ ಬದಲಾವಣೆ ಮಾಡಿದರೆ ಲಿಂಗಾಯತರಿಗೆ ಅವಕಾಶ ಕೊಡಿ ಎಂದು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ಮನವಿ ಮಾಡಿರುವುದಾಗಿ ಕೂಡಲಸಂಗಮ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ಸಮಾಜದಲ್ಲಿ ರಾಜ್ಯಕ್ಕೆ ಒಂದು ಹುಲಿಯಾದರೆ, ನಮ್ಮ ಸಮಾಜದಲ್ಲಿ ಹಳ್ಳಿಗೊಂದು ಹುಲಿಗಳಿವೆ ಎಂದು ಸಮರ್ಥಿಸಿಕೊಂಡರು. ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿದಾಗ ಉತ್ತರ ಕರ್ನಾಟಕದವರಿಗೆ ಮಾನ್ಯತೆ ನೀಡಲು ಕೇಳಿದ್ದೇನೆ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಉತ್ತರ ಕರ್ನಾಟಕದವರೇ ಸಿಎಂ ಆದ್ರೆ ಸೂಕ್ತ. ‘ಕಟ್ಟಿಕಲ್ಲು ಕಟ್ಟಿಗೆ’ ಎಂಬುದು ಉತ್ತರ ಕರ್ನಾಟಕದ ಗಾದೆ ಇದೆ. ಅದರಂತೆ ಲಿಂಗಾಯತರ ಸ್ಥಾನಕ್ಕೆ ಲಿಂಗಾಯತರನ್ನೇ ತನ್ನಿ ಎಂದು ಆಗ್ರಹಿಸಿರುವುದಾಗಿ ಶ್ರೀಗಳು ಹೇಳಿದರು.

ರೇಸ್‌ನಲ್ಲಿ ನಮ್ಮವರು ಮೂರು ಹುಲಿಗಳು ಓಡುತ್ತಿದ್ದಾರೆ. ಯಡಿಯೂರಪ್ಪ ನವರು ಈಗಾಗಲೇ ರೇಸ್‌ನಲ್ಲಿ ಓಡಿ ಗೋಲ್ಡ್ ಮೆಡಲ್ ತೆಗೆದುಕೊಂಡಿದ್ದಾರೆ. ನಾನು ಒಬ್ಬರ ಹೆಸರು ಹೇಳಿ ಉಳಿದ ರೇಸ್ ನಲ್ಲಿ ಓಡುವವರ ಮನಸ್ಸಿಗೆ ನೋವು ಮಾಡೋಲ್ಲ. ಒಟ್ಟಿನಲ್ಲಿ ನಮ್ಮ ಸಮಾಜದವರಿಗೆ ಆದ್ಯತೆ ನೀಡಬೇಕೆಂದರು.

ಎಂಎಲ್‌ಸಿ ಹೆಚ್‌.ವಿಶ್ವನಾಥ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಉತ್ತರ ಕರ್ನಾಟಕದ ಮೇಲಿನ ಅಭಿಮಾನದಿಂದ ಹಾಗೇ ಪಂಚಮಸಾಲಿ ಸಮಾಜಕ್ಕೆ ಸಿಎಂ ಸ್ಥಾನ ನೀಡಿ ಎಂದು ಹೇಳಿಕೆ‌ ವಿಪ ಸದಸ್ಯ ಹೆಚ್. ವಿಶ್ವನಾಥ್ ಹೇಳಿರಬಹುದು ಎಂದರು.

ಅರುಣ್‌ಸಿಂಗ್‌ ರನ್ನು ಪಂಚಮಸಾಲಿ 2ಎ ಮೀಸಲಾತಿ ಬಗ್ಗೆ ಚರ್ಚಿಸಲು ಭೇಟಿ ಮಾಡಲು ಹೋಗಿದ್ದೆ. ಅಲ್ಲಿ 2A ಮೀಸಲಾತಿ ಬಗ್ಗೆ ಚರ್ಚೆ ಮಾಡಿದ್ದೇವೆ. ಸಮಾಜದ ವಿಚಾರವಾಗಿ ದೆಹಲಿಗೆ ಬರುವಂತೆ ಆಹ್ವಾನ ನೀಡುತ್ತೇವೆ ಎಂದಿದ್ದಾರೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!