ಎತ್ತಿನಗಾಡಿ, ಬೈಕ್ ನಲ್ಲಿ ಮರಳು ತುಂಬಲು ನಮ್ಮ ಸರ್ಕಾರವೇ ಪರವಾನಿಗೆ ಕೊಟ್ಟಿದೆ :ನಾನು ಬಡವರ ಪರ ಇರುತ್ತೇನೆ – ರೇಣುಕಾಚಾರ್ಯ ಸ್ಪಷ್ಟನೆ

ದಾವಣಗೆರೆ: ಎತ್ತಿನಗಾಡಿ, ಬೈಕ್ ನಲ್ಲಿ ಮರಳು ತುಂಬಲು ನಮ್ಮ ಸರ್ಕಾರವೇ ಪರವಾನಿಗೆ ಕೊಟ್ಟಿದೆ. ಆದರೆ, ಈಗ ಬಂದಿರುವ ನೂತನ ಎಸ್ಪಿ ಅವರು ಸರಿಯಾದ‌ ಮಾಹಿತಿ ಸಂಗ್ರಹಿಸಿದೆ, ಮರಳು ಸೀಜ್ ಮಾಡಲು ಆದೇಶ ನೀಡಿರುವುದಕ್ಕೆ ಮಾತ್ರ ನಾನು ಆಕ್ಷೇಪಿಸಿದ್ದೇನೆ ಹೊರತು, ಅಕ್ರಮ ಮರಳು ಗಣಿಗಾರಿಕೆ ಪರವಾಗಿಯಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಸ್ಪಷ್ಟನೆ ನೀಡಿದ್ದಾರೆ.

ನಿನ್ನೆಯಷ್ಟೆ ಎಸ್ಪಿ ರಿಷ್ಯಂತ್ ಮತ್ತು ಹೊನ್ನಾಳಿ ಸಿಪಿಐ ಟಿ.ಬಿ. ದೇವರಾಜ್ ಅವರ ವಿರುದ್ಧ ಮರಳು ಸಂಗ್ರಹಣೆ ಮೇಲೆ ದಾಳಿ ಮಾಡಿದ ಕಾರಣಕ್ಕೆ ಹರಿಹಾಯ್ದಿದ್ದ ರೇಣುಕಾಚಾರ್ಯ ವಿರುದ್ಧ ಅಕ್ರಮ ಗಣಿಗಾರಿಕೆ ಪರವಾಗಿ ಶಾಸಕರಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗಳು ಶುರುವಾಗಿದ ಹಿನ್ನೆಲೆಯಲ್ಲಿ ಮಂಗಳವಾರ ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ಸ್ಪಷ್ಟಪಡಿಸಿದ್ದಾರೆ‌.

ಅಕ್ರಮ ಮರಳು‌ಗಣಿಗಾರಿಕೆ‌ ಬಗ್ಗೆ ನನ್ನದೂ ಆಕ್ಷೇಪವಿದೆ. ಅಂತಹವರನ್ನು ಬೇಕಾದರೆ ಪೊಲೀಸಿನವರು ಸೀಜ್ ಮಾಡಿಕೊಳ್ಳಲಿ ಅದನ್ನು ಬಿಟ್ಟು, ಎತ್ತಿನಗಾಡಿಯಲ್ಲಿ, ಬೈಕ್ ನಲ್ಲಿ ದೇವಸ್ಥಾನ ನಿರ್ಮಾಣಕ್ಕೆ, ಆಶ್ರಯಮನೆ, ಶೌಚಾಲಯ ನಿರ್ಮಿಸಲು ಮರಳನ್ನು ತೆಗೆದುಕೊಂಡು ಹೋಗುವವರನ್ನು ಹಿಡಿಯುವುದು ಸರಿಯಲ್ಲ. ಅವರು ಬಡ ಜನರು, ಅವರ ಹೊಟ್ಟೆಪಾಡಿಗಾಗಿ ಅವರು ಮರಳು ಸಂಗ್ರಹಿಸಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ. ಇದರಿಂದ ಜನರಿಗೂ ಮರಳು ಕಡಿಮೆಗೆ ಸಿಗುತ್ತದೆ ಅಲ್ಲಿಂದ ಎಂದು ಅವರು ಹೇಳಿದರು.

ನಾನು ಬಡವರ ಪರ, ಎತ್ತಿನಗಾಡಿ, ಬೈಕ್ ನಲ್ಲಿ ಹೊಡೆದ ಮರಳು ಸೀಜ್‌ ಮಾಡಲು ಬಿಡುವುದಿಲ್ಲಾ. ದೇವರಾಜ್ ಅವರಿಗೆ ಅಂತಹ ಮರಳು ಸೀಜ್ ಮಾಡುವುದು ಬೇಡ ಎಂದ ಹೇಳಿದ್ದೇನಷ್ಟೇ, ಸಣ್ಣ ಪುಟ್ಟ ರೈತರು, ಕೃಷಿ ಕಾರ್ಮಿಕರು, ಡಿ.ದರ್ಜೆನೌಕರರ ಪರ ಹೋರಾಟ ಮಾಡೋದು ತಪ್ಪಾ ಎಂದು ಪ್ರಶ್ನಿಸಿದರು.

ಅಕ್ರಮ ಗಣಿಗಾರಿಕೆ, ಮರಳುಗಾರಿಕೆ ಮಾಡಿದರೆ ಸೀಜ್ ಮಾಡಲಿ. ನಾನು ಅದಕ್ಕೆ ಬೆಂಬಲ ಕೊಡುತ್ತೇನೆ. ಮಟ್ಕ,ಜೂಜಾಟ ಆಡುವವರನ್ನು ಸೀಜ್ ಮಾಡಿ ಎಂದು ಹೇಳಿದ್ದೇನೆ. ನಾನು ಬಡವರ ಪರವಾಗಿ ಕೊನೆ ಉಸಿರಿರುವವರೆಗೂ ಇರುತ್ತೇನೆ ಎಂದರು.

Leave a Reply

Your email address will not be published. Required fields are marked *

error: Content is protected !!