ಏಪ್ರಿಲ್ 18, 19 ರಂದು ವೃತ್ತಿಪರ ಕೋರ್ಸ್‍ಗಳ ಪ್ರವೇಶಕ್ಕೆ ಸಿಇಟಿ ಪರೀಕ್ಷೆ

ದಾವಣಗೆರೆ; ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ 2024 ನೇ ಸಾಲಿನ ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶು ಸಂಗೋಪನಾ, ಫಾರ್ಮಸಿ, ಬಿ.ಎಸ್ಸಿ ನರ್ಸಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‍ಗಳ ಪ್ರವೇಶಕ್ಕೆ ಏಪ್ರಿಲ್ 18, 19 ರಂದು ಸಿಇಟಿ ಪರೀಕ್ಷೆ ನಡೆಯಲಿದ್ದು ದಾವಣಗೆರೆ ನಗರದ 23 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ಸೈಯ್ಯದ್ ಆಫ್ರೀನ್ ಭಾನು ಎಸ್.ಬಳ್ಳಾರಿ ತಿಳಿಸಿದರು.


ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ತುಂಗಭದ್ರಾ ಸಭಾಂಗಣದಲ್ಲಿ ಪರೀಕ್ಷಾ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಏಪ್ರಿಲ್ 18 ರಂದು ಬೆಳಗ್ಗೆ 10.30 ರಿಂದ 11.50 ರ ವರೆಗೆ 60 ಅಂಕಗಳಿಗೆ ಜೀವಶಾಸ್ತ್ರ, ಮಧ್ಯಾಹ್ನ 2.30 ರಿಂದ ಮ.3.50 ರವರೆಗೆ 60 ಅಂಕಗಳಿಗೆ ಗಣಿತ ಪರೀಕ್ಷೆ ನಡೆಯಲಿದೆ. ಏ.19 ರಂದು ಬೆಳಗ್ಗೆ 10.30 ರಿಂದ 11.50 ರ ವರೆಗೆ 60 ಅಂಕಗಳಿಗೆ ಭೌತಶಾಸ್ತ್ರ, ಮಧ್ಯಾಹ್ನ 2.30 ರಿಂದ 3.50 ರ ವರೆಗೆ 60 ಅಂಕಗಳಿಗೆ ರಸಾಯನಶಾಸ್ತ್ರ ವಿಷಯದ ಪರೀಕ್ಷೆ ನಡೆಯಲಿದೆ.


ಪರೀಕ್ಷಾ ಕೇಂದ್ರಗಳ ವಿವರ; ದಾವಣಗೆರೆ ನಗರದ 23 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು ಡಿಆರ್‍ಎಂ ಸೈನ್ಸ್ ಪಿಯು ಕಾಲೇಜು, ಎವಿಕೆ ಬಾಲಕಿಯರ ಪದವಿ ಪೂರ್ವ ಕಾಲೇಜು, ಮೋತಿ ವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು, ಸರ್ಕಾರಿ ಎಕ್ಸ್ ಮುನ್ಸಿಪಲ್ ಪಿಯು ಕಾಲೇಜು, ಎಆರ್‍ಜಿ ಪಿ.ಯು ಕಲಾ ಮತ್ತು ವಾಣಿಜ್ಯ, ರಾಜಮ್ಮ ಸೀತಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಶ್ರೀ ತರಳಬಾಳು ಜಗದ್ಗುರು ಸಂಯುಕ್ತ ಪದವಿ ಪೂರ್ವ ಕಾಲೇಜು, ವಿಶ್ವಚೇತನ ಪಿಯು ಕಾಲೇಜು, ಅಥಣಿ ಸಂಯುಕ್ತ ಪದವಿ ಪೂರ್ವ ಕಾಲೇಜು, ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು, ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಪಿಯು ಸೈನ್ಸ್ ಕಾಲೇಜು, ಸೆಂಟ್ ಜಾನ್ ಪಿಯು ಕಾಲೇಜು, ಶ್ರೀ ಸಿದ್ದಗಂಗಾ ಪಿಯು ಕಾಲೇಜು, ರಾಘವೇಂದ್ರ ಹೈಟೆಕ್ ಪಿಯು ಕಾಲೇಜು, ಟಿಎಂಸಿ ಮತ್ತು ಟಿಎಂ ಮೆಮೋ ಪಿಯು ಕಾಲೇಜು, ಸೆಂಟ್ ಪಾಲ್ಸ್ ಪಿಯು ಕಾಲೇಜು, ಚಾಣಕ್ಯ ಪಿಯು ಕಾಲೇಜು, ಲಲಿತಾ ಪಿಯು ಕಾಲೇಜು, ಸರ್‍ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜು, ಆನಂದ್ ಪಿಯು ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಎಸ್‍ಬಿಸಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ದಾವಣಗೆರೆ ಇಲ್ಲಿ ಸಿಇಟಿ ಪರೀಕ್ಷೆ ನಡೆಯಲಿದೆ.

ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಕ್ಕೆ ಸೂಚನೆ; ಪರೀಕ್ಷೆ ನಡೆಯುವ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ, ಗಾಳಿ, ಬೆಳಕಿನ ವ್ಯವಸ್ಥೆಯನ್ನು ಸರಿಯಾಗಿರುವಂತೆ ನೋಡಿಕೊಳ್ಳಬೇಕು. ಮತ್ತು ಬೇಸಿಗೆಯಾಗಿರುವುದರಿಂದ ವಿದ್ಯಾರ್ಥಿಗಳಿಗೆ ಕುಡಿಯಲು ಶುದ್ದ ನೀರಿನ ವ್ಯವಸ್ಥೆ ಮಾಡಬೇಕು. ಆದರೆ ವಾಟರ್‍ನ್ನು ಕೊಠಡಿಯೊಳಗೆ ತೆಗೆದುಕೊಂಡು ಹೋಗುವಂತಿಲ್ಲ, ನೀರು ಕುಡಿಯುವ ವಿದ್ಯಾರ್ಥಿ ಹೊರಗೆ ಬಂದು ನೀರು ಕುಡಿದು ಹೋಗಲು ಅವಕಾಶ ಮತ್ತು ಇದರ ವ್ಯವಸ್ಥೆ ಮಾಡಿಕೊಡಬೇಕು.

ಪೆನ್ ಮತ್ತು ವಸ್ತ್ರ ಸಂಹಿತೆ; ಓಎಂಆರ್ ಸೀಟ್‍ನಲ್ಲಿ ಮಾರ್ಕ್ ಮಾಡುವುದರಿಂದ ಕಪ್ಪು ಮತ್ತು ನೀಲಿ ಬಾಲ್‍ಪೆನ್ ಮಾತ್ರ ಉಪಯೋಗಿಸಬೇಕು. ಕೇಂದ್ರದೊಳಗೆ ಬ್ಲೇಡ್, ವೈಟ್ನರ್ ತೆಗೆದುಕೊಂಡು ಹೋಗುವಂತಿಲ್ಲ. ಮೊಬೈಲ್, ಬ್ಲೂಟುತ್ ಹಾಗೂ ಯಾವುದೇ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಕೇಂದ್ರದೊಳಗೆ ತೆಗೆದುಕೊಂಡು ಹೋಗುವಂತಿಲ್ಲ. ಪೂರ್ಣ ತೋಳು ಇರುವ ಶರ್ಟ್‍ಗಳನ್ನು ಹಾಕದೆ ಸ್ಲ್ಯಾಗ್ ಧರಿಸಬೇಕು, ಮಹಿಳೆಯರು ಸಹ ಪೂರ್ಣತೋಳಿನ ಉಡುಪು ಧರಿಸಬಾರದು. ಧರಿಸಿದ್ದಲ್ಲಿ ಪರೀಕ್ಷೆ ನಡೆಯುವುದಕ್ಕಿಂತ ಮುಂಚಿತವಾಗಿ ತಪಾಸಣೆ ಮಾಡಿ ಮಡಿಚಿಕೊಳ್ಳುವಂತೆ ಸೂಚನೆ ನೀಡಬೇಕು.

ಜಾಗೃತ ದಳ ನೇಮಕ; ಪರೀಕ್ಷೆಯನ್ನು ಸುಗಮವಾಗಿ ಮತ್ತು ಯಾವುದೇ ಅವ್ಯವಹಾರಗಳಿಗೆ ಅವಕಾಶ ಇಲ್ಲದಂತೆ ನೆಡೆಸುವುದು ಎಲ್ಲಾ ಪ್ರಾಂಶುಪಾಲರ ಜವಾಬ್ದಾರಿಯಾಗಿದೆ. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಉಪಮುಖ್ಯ ಅಧೀಕ್ಷಕರು ಪರೀಕ್ಷೆಯನ್ನು ಪಾರದರ್ಶಕ ಹಾಗೂ ಪರಿಣಾಮಕಾರಿಯಾಗಿ ನಡೆಸಿಕೊಡಬೇಕು. ಪ್ರತಿ ಕೇಂದ್ರದಲ್ಲಿ ಹಿರಿಯ ಉಪನ್ಯಾಸಕರನ್ನು ಹಾಗೂ ಹಿರಿಯ ಅಧಿಕಾರಿಗಳನ್ನು ಜಾಗೃತ ದಳ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗುತ್ತದೆ ಎಂದರು.

ನಿಷೇಧಾಜ್ಞೆ; ಸಿಇಟಿ ಪರೀಕ್ಷೆ ನಡೆಯುವ ಎಲ್ಲಾ ಕೇಂದ್ರಗಳ ಸುತ್ತಮುತ್ತ 144 ಸೆಕ್ಷನ್ ಜಾರಿಗೊಳಿಸುವ ಮೂಲಕ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕೇಂದ್ರಗಳ ಸುತ್ತಮುತ್ತ ಇಂಟರ್‍ನೆಟ್ ಸೆಂಟರ್, ಜೆರಾಕ್ಸ್ ಕೇಂದ್ರಗಳನ್ನು ಪರೀಕ್ಷೆ ನಡೆಯುವ ದಿನದಂದು ಮುಚ್ಚಲು ಆದೇಶಿಸಲಾಗಿದೆ.

ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಉಪನಿರ್ದೇಶಕ ಕರಿಸಿದ್ದಪ್ಪ ಹಾಗೂ ವಿವಿಧ ಕಾಲೇಜಿನ ಪ್ರಾಂಶುಪಾಲರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!