ಜನಾರ್ಧನ ರೆಡ್ಡಿ ಸ್ಪರ್ಧೆಗೆ ಅವಕಾಶ ನೀಡದಂತೆ ಆಯೋಗಕ್ಕೆ ದೂರು: ಟಪಾಲ್ ಗಣೇಶ್
ಕೊಪ್ಪಳ : ಗಾಲಿ ಜನಾರ್ಧನ ರೆಡ್ಡಿ ಚುನಾವಣೆಗೆ ಸ್ಪರ್ಧಿಸಲು ಇದೀಗ ಮತ್ತೊಂದು ಕಂಠಕ ಎದುರಾದಂತಾಗಿದೆ.
ರೆಡ್ಡಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡದಂತೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುತ್ತಿದೆ
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಉದ್ಯಮಿ ಟಪಾಲ್ ಗಣೇಶ್, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸ್ಥಾಪಕ ಜನಾರ್ದನ ರೆಡ್ಡಿ ಮೇಲೆ ಬಹುಕೋಟಿ ಗಣಿ ಹಗರಣದ ಪ್ರಕರಣಗಳು ತನಿಖಾ ಹಂತದಲ್ಲಿದ್ದರೂ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ. ಇದಕ್ಕೆ ಅವಕಾಶ ಕೊಡದಂತೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದು ಹೇಳಿದರು.
ಬಸವಣ್ಣನ ತತ್ವ ಹಾಗೂ ಸಿದ್ದಾಂತದಡಿ ಕೆಆರ್‌ಪಿಪಿ ಪಕ್ಷ ಸ್ಥಾಪಿಸಿ, ಜನರ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ರೆಡ್ಡಿ ಸುಳ್ಳು ಹೇಳಿಕೆ ನೀಡಿ, ಜನರಿಗೆ ಹಣದ ಆಮಿಷ ತೋರಿಸುತ್ತಿದ್ದಾರೆ. ರೆಡ್ಡಿಬಳಿ ಆಕ್ರಮ ಸಂಪತ್ತು ಸಾಕಷ್ಟಿದ್ದು, ಅವರಿಂದ ಹಣ ತೆಗೆದುಕೊಳ್ಳಿ. ಆದರೆ ಮತ ಮಾತ್ರ ನೀಡಿಬೇಡಿ ಎಂದರು.
ಆಕ್ರಮ ಗಣಿಗಾರಿಕೆ ಹಗರಣದಲ್ಲಿ ಬಂಧಿತರಾಗಿ ಷರತ್ತುಗಳ ಮೇಲೆ ಜಾಮೀನು ಮೇಲೆ ಹೊರಬಂದಿರುವ ರೆಡ್ಡಿ ಜನರಿಗೆ ಸುಳ್ಳಿನ ಭರವಸೆಗಳು ನೀಡಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ರೆಡ್ಡಿ 2006-07ರಲ್ಲಿ ಆಂಧ್ರದ ಭಾಗಗಳಲ್ಲಿ ಗಣಿಗಾರಿಕೆ ನಡೆಸಲು ಪರವಾನಗಿ ಪಡೆದು ಸರ್ಕಾರ ಮತ್ತು ಅಧಿಕಾರಿಗಳಿಗೆ ಹಣ ನೀಡಿ, ಕರ್ನಾಟಕ ಭಾಗದ ಕೆಲ ಪ್ರದೇಶಗಳನ್ನು ಗುತ್ತಿಗೆ ರೂಪದಲ್ಲಿ ಪಡೆದು, ಆಕ್ರಮ ಗಣಿಗಾರಿಕೆ ನಡೆಸಿ, ನೈಸರ್ಗಿಕ ಸಂಪತ್ತು ನಾಶ ಮಾಡಿದ್ದಾರೆ. ಇಂಥವರು ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅವಕಾಶ ಕೊಡಬೇಕಾ ಎಂದು ಪ್ರಶ್ನಿಸಿದರು.