ಕೋವಿಡ್ ನಿಂದ ಮೃತರಾಗಿದ್ದವರ ಶವಸಂಸ್ಕಾರ ಮಾಡಿದ ಕಾರ್ಯಕರ್ತರಿಗೆ ಸನ್ಮಾನ – ನಳಿನ್ ಕುಮಾರ್ ಕಟೀಲ್

ಬೆಂಗಳೂರು: ಕೋವಿಡ್ ಸಂದರ್ಭದಲ್ಲಿ ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರು ತಮ್ಮ ಜೀವವನ್ನೇ ಪಣವಾಗಿಟ್ಟು 4,531 ಶವಸಂಸ್ಕಾರಗಳನ್ನು ಮಾಡಿದ್ದು, ಅವರ ಸಮಾಜಮುಖಿ ಚಿಂತನೆ ಮತ್ತು ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಅವರನ್ನು ಮಂಡಲ ಮಟ್ಟದಲ್ಲಿ ಮತ್ತು ಜಿಲ್ಲಾ ಮಟ್ಟದ ಕಾರ್ಯಕಾರಿಣಿಯಲ್ಲಿ ಸನ್ಮಾನಿಸಲು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ಸೂಚಿಸಿದ್ದಾರೆ ಎಂದು ರಾಜ್ಯ ಬಿಜೆಪಿ ವಕ್ತಾರರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್‍ನಿಂದ ಮೃತಪಟ್ಟ ಬಿಪಿಎಲ್ ಕುಟುಂಬದವರಿಗೆ ರಾಜ್ಯ ಸರಕಾರ ನೀಡುವ ಒಂದು ಲಕ್ಷ ರೂ., ಮತ್ತು ಕೇಂದ್ರ ಸರಕಾರ ಘೋಷಿಸಿದ ಅನಾಥ ಮಕ್ಕಳ ರಕ್ಷಣೆಗಾಗಿ ಬ್ಯಾಂಕ್‍ನಲ್ಲಿ 10 ಲಕ್ಷ ರೂ., ಠೇವಣಿ ಇಡುವ ಹಾಗೂ 21 ವರ್ಷಗಳವರೆಗೆ ಅವರನ್ನು ನೋಡಿಕೊಳ್ಳುವ ವಿಚಾರವನ್ನು ಜನಮಾನಸಕ್ಕೆ ತಿಳಿಸಬೇಕು ಎಂದು ರಾಜ್ಯಾಧ್ಯಕ್ಷರು ತಿಳಿಸಿದ್ದಾರೆ ಎಂದರು.

ವೈದ್ಯಕೀಯ ಸವಲತ್ತುಗಳನ್ನು ಗ್ರಾಮಗಳಲ್ಲಿ ಕೊಡುವುದರಲ್ಲಿ ವಿಫಲರಾದ ಕಾಂಗ್ರೆಸ್‍ನಿಂದಾಗಿ ನಾವು ಈ ಎರಡು ಅಲೆಗಳ ವೇಳೆ ಇದನ್ನು ಸಮರ್ಥವಾಗಿ ನಿಭಾಯಿಸಲು ಸ್ವಲ್ಪ ಎಡರುತೊಡರು ಉಂಟಾಗಿದೆ ಎಂದು ಹೇಳಿದರು.

ಮುಂದಿನ ಎರಡ್ಮೂರು ತಿಂಗಳುಗಳಲ್ಲಿ ಸಂಘಟನಾತ್ಮಕವಾಗಿ ಹೇಗೆ ತೊಡಗಿಸಿಕೊಳ್ಳಬೇಕು ಎಂಬುದರ ಕುರಿತು ನಮ್ಮ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್‍ಕುಮಾರ್ ಅವರು ಮಾಹಿತಿ ನೀಡಿದರು. ಸೇವಾ ಹೀ ಸಂಘಟನ್ ಅನ್ನು ಇನ್ನೂ ವಿಸ್ತರಿಸುವುದು, ಲಸಿಕಾ ಅಭಿಯಾನದಲ್ಲಿ ತೊಡಗಿಸಿಕೊಳ್ಳುವುದು, ಪ್ರತಿ ಬೂತ್ ಅನ್ನು ಲಸಿಕಾಯುಕ್ತ ಬೂತ್ ಆಗುವುದಕ್ಕಾಗಿ ಪ್ರಯತ್ನ ನಡೆಸಬೇಕು ಎಂದು ಮಾರ್ಗದರ್ಶನ ಮಾಡಿದರು ಎಂದು ತಿಳಿಸಿದರು.

ನಮ್ಮ ಬೂತ್‍ನಲ್ಲಿ ಇರುವ ಕಾರ್ಯಕರ್ತರನ್ನು ಜೋಡಿಸಿಕೊಂಡು ಒಟ್ಟು 2 ಲಕ್ಷ ಕಾರ್ಯಕರ್ತರಿಗೆ ಆರೋಗ್ಯ ಸಂಬಂಧ ಮೂಲ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಆಕ್ಸಿಮೀಟರ್ ಬಳಕೆ ಹೇಗೆ, ರಕ್ತದೊತ್ತಡ ತಿಳಿಯುವುದು ಹೇಗೆ, ಕೋವಿಡ್ ಕಿಟ್ ಬಳಕೆ, ಏನಾದರೂ ಆರೋಗ್ಯ ಸಮಸ್ಯೆ ಬಂದರೆ ತುರ್ತು ಪರಿಹಾರ ಹೇಗೆ ಎಂಬಂಥ ತರಬೇತಿ ಕೊಡಲು ದೊಡ್ಡ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಡಿಸೆಂಬರ್‍ನಲ್ಲಿ ನಡೆಯಬಹುದಾದ ತಾಲ್ಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರ ಸಮಾವೇಶ ನಡೆಸುವುದು, ರಾಜ್ಯ ಮಟ್ಟದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸಮಾವೇಶ ಏರ್ಪಡಿಸುವುದರ ಕುರಿತು ಚರ್ಚಿಸಲಾಗಿದೆ ಎಂದರು.

ಕಾಂಗ್ರೆಸ್‍ನ ಮಾನಸಿಕತೆಯಲ್ಲೇ ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಚಿಂತನೆ ಇದೆ. ಹಾಗಾಗಿ ಮುಂದಿನ ದಿನಗಳಲ್ಲಿ ನಾವೆಲ್ಲರೂ ಇಂಥ ವಾತಾವರಣ ಬರದಂತೆ ಸಂಘಟಿತ ಪ್ರಯತ್ನ ಮಾಡಬೇಕಿದೆ ಎಂದರು.

Leave a Reply

Your email address will not be published. Required fields are marked *

error: Content is protected !!