ದಾವಣಗೆರೆಯಲ್ಲಿ ನಡೆಯುವ 38 ನೇ ಪತ್ರಕರ್ತರ ಸಮ್ಮೇಳನದ ಮಿನಿಟ್ ಟು ಮಿನಿಟ್ ಕಾರ್ಯಕ್ರಮ ದ ವಿವರ ಹೀಗಿದೆ

ಪತ್ರಕರ್ತರ ಸಮ್ಮೇಳನ

ದಾವಣಗೆರೆ: ದಾವಣಗೆರೆಯಲ್ಲಿ ಜಿಲ್ಲೆಯಾಗಿ ಮೊದಲ ಬಾರಿಗೆ ರಾಜ್ಯ ಮಟ್ಟದ 38ನೇ ಪತ್ರಕರ್ತರ ಸಮ್ಮೇಳನ ನಡೆಯಲಿರುವ ಹಿನ್ನೆಲೆಯಲ್ಲಿ ನಗರದ ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ಫೆ.3ರಂದು ಬೆಳಗ್ಗೆ 8.30ಕ್ಕೆ ನಡೆಯಲಿದೆ.

ಮೆರವಣಿಗೆ ಪೂರ್ವದಲ್ಲಿ ಹರ್ಡೇಕರ್ ಮಂಜಪ್ಪ, ಮಹಾತ್ಮ ಗಾಂಧೀಜಿ, ಡಾ. ಬಿ.ಆರ್. ಅಂಬೇಡ್ಕರ್, ಬಾಬು ಜಗಜೀವನರಾಂ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದ ನಂತರ ಅಂಬೇಡ್ಕರ್ ವೃತ್ದದಿಂದ ಮಾಧ್ಯಮದ ಮಿತ್ರರ ಬೃಹತ್ ಮೆರವಣಿಗೆ ನಡೆಯಲಿದ್ದು, ಮಹಾನಗರ ಪಾಲಿಕೆ ಮೇಯರ್ ವಿನಾಯಕ ಪೈಲ್ವಾನ್, ಆಯುಕ್ತರಾದ ರೇಣುಕಾ ಚಾಲನೆ ನೀಡಲಿದ್ದಾರೆ.
ಸಾರೋಟನಲ್ಲಿ ಇರಿಸಲಾಗುವ ವೃಕ್ಷದ ಆಕೃತಿಯಲ್ಲಿ ಬರುವ ರಂಬೆ-ಕೊಂಬೆಗಳಲ್ಲಿ ಎಲ್ಲಾ ಪತ್ರಿಕೆಗಳ ಶಿರೋನಾಮೆಗಳನ್ನು ಬಿಂಬಿಸಲಾಗುವುದು. ಮೆರವಣಿಗೆಯಲ್ಲಿ ಕಲಾ ತಂಡಗಳು, ಆನೆ ಗಮನ ಸೆಳೆಯಲಿವೆ. ಪತ್ರಕರ್ತರು, ಸಾಹಿತಿಗಳು, ಕನ್ನಡಪರ ಹೋರಾಟಗಾರರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ.

ಉದ್ಘಾಟನೆ : ಮೆರವಣಿಗೆ ನಂತರ ಬೆಳಿಗ್ಗೆ 10.30 ಗಂಟೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಹಿರಿಯ ಶಾಸಕರಾದ ಶಾಮನೂರು ಶಿವಶಂಕರಪ್ಪ ಅವರ ಘನ ಉಪಸ್ಥಿತಿ ಮತ್ತು ಕೆಯುಡಬ್ಲ್ಯುಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ಅಧ್ಯಕ್ಷತೆಯಲ್ಲಿ ಛಾಯಾಚಿತ್ರ ಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ಉದ್ಘಾಟಿಸಲಿದ್ದಾರೆ. ಸ್ಮರಣ ಸಂಚಿಕೆಯನ್ನು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಬಿಡುಗಡೆ ಮಾಡುವರು. ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ. ಮಹಾದೇವಪ್ಪ ಅವರು ವಸ್ತು ಪ್ರದರ್ಶವನ್ನು, ಕೈಗಾರಿಕ ಸಚಿವ ಎಂ.ಬಿ. ಪಾಟೀಲ್ ಅವರು ವ್ಯಂಗ್ಯ ಚಿತ್ರ ಪ್ರದರ್ಶನದ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಜಿಲ್ಲೆಯ ಎಲ್ಲಾ ಶಾಸಕರೂ, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳು, ಜಿಲ್ಲೆಯ ಹಿರಿಯ ಅಧಿಕಾರಿಗಳು ಮುಖ್ಯ ಅತಿಥಿಗಳಾಗಿದ್ದಾರೆ.

ಪತ್ರಕರ್ತರ ಸಮ್ಮೇಳನ
ಗೋಷ್ಠಿ : ಸಮಾರಂಭದ ಉದ್ಘಾಟನೆಯ ನಂತರ ಮಧ್ಯಾಹ್ನ 2 ಗಂಟೆಗೆ `ಕೃತಕ ಬುದ್ಧಿಮತ್ತೆ ಮತ್ತು ಮಾಧ್ಯಮಗಳ ಭವಿಷ್ಯ’ ಮತ್ತು ಸಂಜೆ 4 ಗಂಟೆಗೆ `ಪತ್ರಿಕೆಗಳು : ಹಿಂದೆ-ಇಂದು-ಮುಂದು’ವಿಷಯಗಳ ಕುರಿತಂತೆ ಗೋಷ್ಠಿಗಳು ಜರುಗಲಿವೆ. ಕೊಪ್ಪಳ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಬಿ.ಕೆ. ರವಿ, ಹಿರಿಯ ಪತ್ರಕರ್ತ ಈಶ್ವರ ದೈದೋಟ ಸೇರಿದಂತೆ ನಾಡಿನ ಹಿರಿಯ ಪತ್ರಕರ್ತರು ಗೋಷ್ಠಿಗಳನ್ನು ನಡೆಸಿಕೊಡಲಿದ್ದಾರೆ. ಅದೇ ದಿನ ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ದಿನಾಂಕ 4ರ ಭಾನುವಾರ ಬೆಳಿಗ್ಗೆ 9.45ಕ್ಕೆ ಪ್ರತಿನಿಧಿಗಳ ಸಮಾವೇಶ ಜರುಗಲಿದೆ. ನಂತರ ಬೆಳಿಗ್ಗೆ 10.30ಕ್ಕೆ `ಮಾಧ್ಯಮ ಮತ್ತು ಸರ್ಕಾರ’ ಹಾಗೂ ಬೆಳಿಗ್ಗೆ 11.30ಕ್ಕೆ `ಸಾಮಾಜಿಕ ಮಾಧ್ಯಮ – ವೃತ್ತಿ ವಿಶ್ವಾಸಾರ್ಹತೆ’ವಿಷಯಗಳ ಕುರಿತ ಗೋಷ್ಠಿಗಳನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ. ಪ್ರಭಾಕರ್, ನಾಡಿನ ಹಿರಿಯ ಪತ್ರಕರ್ತ ಎಸ್.ಕೆ. ಶೇಷಚಂದ್ರಿಕಾ ಉದ್ಘಾಟಿಸಲಿದ್ದಾರೆ. ನಾಡಿನ ಹಿರಿಯ ಪತ್ರಕರ್ತರು ಗೋಷ್ಠಿಗಳನ್ನು ನಡೆಸಿಕೊಡುವರು.

ಸಮಾರೋಪ : ಗೋಷ್ಠಿಗಳ ನಂತರ ಮಧ್ಯಾಹ್ನ 2 ಗಂಟೆಗೆ ಜರುಗಲಿರುವ ಸಮಾರೋಪ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಮಾರೋಪದ ನುಡಿಗಳನ್ನಾಡುವರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಲೋಕಸಭಾ ಸದಸ್ಯ ಜಿ.ಎಂ. ಸಿದ್ದೇಶ್ವರ, ಕಾರ್ಮಿಕ ಸಚಿವ ಸಂತೋಷ್ ಲಾಡ್, ಮಹಿಳಾ-ಮಕ್ಕಳ ಕಲ್ಯಾಣ ಸಚಿವರಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್‌ಕರ್, ಅರಣ್ಯ – ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಜಿಲ್ಲೆಯ ಶಾಸಕರು ವಿಶೇಷ ಆಹ್ವಾನಿತರಾಗಿದ್ದಾರೆ.

ಗೌರವಾರ್ಪಣೆ : ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿರುವ-ಸಲ್ಲಿಸುತ್ತಿರುವ ದಾವಣಗೆರೆ ಜಿಲ್ಲೆಯ 60 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ಪತ್ರಕರ್ತರನ್ನು ಸನ್ಮಾನಿಸಿ, ಗೌರವಿಸಲಾಗುತ್ತದೆ. ಅಲ್ಲದೇ, ರಾಜ್ಯ ಪತ್ರಕರ್ತರ ಸಮ್ಮೇಳನದ ಸಂದರ್ಭದಲ್ಲಿ ಪ್ರತಿ ವರ್ಷ ನಾಡಿನ ಹಿರಿಯ ಪತ್ರಕರ್ತರಿಗೆ ಕೊಡಮಾಡುವ ಕೆಯುಡಬ್ಲ್ಯೂಜೆ ರಾಜ್ಯ ಪ್ರಶಸ್ತಿಯನ್ನು ದಾವಣಗೆರೆ ಜಿಲ್ಲೆಯ 6 ಜನರಿಗೆ ಸನ್ಮಾನ ಮಾಡಲಾಗುವುದು ಎಂದು ಕಾನಿಪ ಜಿಲ್ಲಾಧ್ಯಕ್ಷ ಇ.ಎಂ.ಮಂಜುನಾಥ್ ಏಕಬೋಟೆ, ಪ್ರಧಾನ ಕಾರ್ಯದರ್ಶಿ ಎ.ಫಕೃದ್ದೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!