ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆ ನಗರ ಮಟ್ಟದ ಸಲಹಾ ಸಮಿತಿ ಸಭೆ: ಹಂದಿ ಹಾವಳಿ ತಡೆಗೆ ದಿಟ್ಟ ಕ್ರಮ

 

ದಾವಣಗೆರೆ: ಹಂದಿಗಳ ಹಾವಳಿ ನಗರ ಪ್ರದೇಶದಲ್ಲಿ ಹೆಚ್ಚಾಗುತ್ತಿದ್ದು, ಜನರ ಮೇಲೆ ದಾಳಿ ಮಾಡುವುದು ಸಾಮಾನ್ಯವಾಗಿದೆ. ಈಗಾಗಲೇ ಹಲವು ಬಾರಿ ಇವುಗಳ ನಿಯಂತ್ರಣಕ್ಕೆ ಸೂಚನೆ ನೀಡಿದ್ದರೂ, ಅಧಿಕಾರಿಗಳು ಯಾವುದೇ ಕ್ರಮ ಜರುಗಿಸಿಲ್ಲ. ಹಂದಿಗಳ ನಿಯಂತ್ರಣಕ್ಕೆ ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳುವಂತೆ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆ ನಗರ ಮಟ್ಟದ 8ನೇ ಸಲಹಾ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಯಡಿ ಅನೇಕ ಅಭಿವೃದ್ಧಿಪರ ಕಾಮಗಾರಿಗಳು ನಡೆಯುತ್ತಿವೆ. ಆದರೆ ನಗರದ ಬೀದಿ ಬೀದಿಗಳಲ್ಲಿ ಎಲ್ಲೆಂದರಲ್ಲಿ ಹಂದಿಗಳ ಓಡಾಟ ಸರ್ವೇ ಸಾಮಾನ್ಯವಾಗಿದೆ. ಪ್ರತ್ಯೇಕ ಜಾಗ ಮೀಸಲಿರಿಸಿ ಇವುಗಳ ನಿಯಂತ್ರಣಕ್ಕಾಗಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಸಚಿವರು ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕು, ಇದರ ಜೊತೆಗೆ ಬೀದಿ ನಾಯಿಗಳ ಹಾವಳಿಯೂ ಕೂಡ ನಗರದಲ್ಲಿ ಹೆಚ್ಚಾಗಿದ್ದು ಇವುಗಳ ನಿಯಂತ್ರಣಕ್ಕೂ ಅಗತ್ಯ ಕ್ರಮ ತೆಗೆದುಕೊಳ್ಳಿ ಎಂದು ಆದೇಶ ನೀಡಿದರು.

ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಪ್ರತಿಕ್ರಿಯಿಸಿ ಈಗಾಗಲೇ ಹೆಬ್ಬಾಳು ಬಳಿ 6-7 ಎಕರೆ ಪ್ರದೇಶದಲ್ಲಿ ಹಂದಿಗಳ ದೊಡ್ಡಿ ನಿರ್ಮಿಸುವ ಮೂಲಕ ನಗರದಲ್ಲಿ ಹಂದಿಗಳ ಸಮಸ್ಯೆ ನಿವಾರಿಸಲು ಕ್ರಮ ತೆಗೆದುಕೊಂಡಿದ್ದೇವೆ. ಹಂದಿಗಳ ಸಮಸ್ಯೆ ಪರಿಹಾರ ಅಂತಿಮ ಮಟ್ಟದಲ್ಲಿದೆ. ಹಾಗೂ ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾದ ಕಾರಣ ಸಂತಾನಹರಣಕ್ಕೆ ಪಾಲಿಕೆ ಅಧಿಕಾರಿಗಳು ಮುಂದಾಗಿದ್ದು, ನಾಯಿ ದಾಳಿಯಿಂದ ಜನರಿಗೆ ತೊಂದರೆಯಾಗದಂತೆ ನಾಯಿಗಳಿಗೆ ಸಂತಾನಹರಣ ಲಸಿಕೆ ನೀಡಲಾಗುತ್ತಿದೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ರಸ್ತೆಯಲ್ಲಿರುವ ಎಲ್ಲಾ ಫುಟ್‌ಪಾತ್ ವ್ಯಾಪರಿಗಳಿಗೆ ವ್ಯಾಪಾರ ಮಾಡಲು ಸೂಕ್ತ ಜಾಗ ಒದಗಿಸಿಕೊಡಿ. ಸ್ಥಳಾವಕಾಶ ಲಭ್ಯ ಇರುವ ಕಡೆ ಫುಡ್ ಕೋರ್ಟ್ ತೆರೆಯಲು ಮುಂದಾಗಬೇಕು, ವ್ಯಾಪಾರಸ್ಥರಿಗೆ ತೊಂದರೆಯಾಗದಂತೆ ಬೇಕಾದ ಮೂಲಭೂತ ಸೌಲಭ್ಯಗಳನ್ನು ನೀಡಿ ಎಂದರು.

ಸ್ಮಾರ್ಟ್ ಸಿಟಿ ಯೋಜನೆಯಡಿ ಬೀದಿಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ಸ್ಥಳ ಕಾಯ್ದಿರಿಸಲಾಗಿದ್ದು, ಹಲವು ವ್ಯಾಪಾರಿಗಳು ಅಲ್ಲಿಯೇ ವ್ಯಾಪಾರ ಮಾಡುತ್ತಿದ್ದಾರೆ. ಕೆಲವರು ನಗರ ಪ್ರದೇಶದ ಮುಖ್ಯ ರಸ್ತೆಗಳ ಬೀದಿ ಬದಿಗಳಲ್ಲಿ ವ್ಯಾಪಾರ ಮಾಡುತ್ತಿದ್ದು, ಇದರಿಂದ ಸಂಚಾರ ಕಿರಿಕಿರಿ, ಸ್ವಚ್ಚತೆಗೆ ತಡೆಯಾಗುತ್ತಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ತಿಳಿಸಿದರು.

ಸ್ಮಾರ್ಟ್ ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ಮಾತನಾಡಿ, ಕುಂದವಾಡ ಕೆರೆಯ ಸುತ್ತ ಬಂಡ್ ಸುಧಾರಣೆಯೊಂದಿಗೆ ಸೈಕಲ್ ಟ್ರಾö್ಯಕ್ ಕಾಮಗಾರಿಯನ್ನು ಪೂರ್ಣಗೊಳಿಸಲು ಕೆರೆಯ ನೀರನ್ನು ಖಾಲಿ ಮಾಡಿ ಜ.2 ರಿಂದ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ. ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಿರ್ವಹಿಸಿ 4.9 ಕಿ.ಮೀ ಏರಿಯಲ್ಲಿ 3.6 ಕಿ.ಮೀ ಏರಿ ಕೆಲಸವನ್ನು ಪೂರ್ಣಗೊಳಿಸಿ 1.11 ಕಿ.ಮೀ ರಿವಿಟ್‌ಮೆಂಟ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಇದಕ್ಕೆ ಯುವ ಭಾರತ ಗ್ರೀನ್ ಬ್ರಿಗೇಡ್ ಅವರು ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಹೈಕೋರ್ಟ್ ನಲ್ಲಿ ರಿಟ್ ಸಲ್ಲಿಸಿದ್ದು, ಕಾಮಗಾರಿ ಪಕ್ಕದಲ್ಲಿ ನಿರ್ವಹಿಸುತ್ತಿರುವ ರಾಜಕಾಲುವೆಯ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ ಎಂದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರತಿಕ್ರಿಯಿಸಿ, ಈ ಕುರಿತು ನ್ಯಾಯಾಲಯಕ್ಕೆ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದು, ತೀರ್ಪು ಕೂಡ ಸರ್ಕಾರದ ಪರವಾಗಿ ಆಗಿದೆ ಎಂದರು. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿಕ್ರಿಯಿಸಿ ಅಭಿವೃದ್ಧಿ ಕಾರ್ಯಗಳನ್ನು ಮತ್ತಷ್ಟು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿ ಇನ್ನೂ 15-20 ದಿನಗಳ ನಂತರ ಮತ್ತೊಮ್ಮೆ ಕಾಮಗಾರಿ ವೀಕ್ಷಣೆ ಮಾಡಲು ಬರುತ್ತೇನೆ. ಅಷ್ಟರೊಳಗಾಗಿ ಕಾಮಗಾರಿ ಪೂರ್ಣಗೊಂಡಿರಬೇಕು ಎಂದರು.

ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ರವೀಂದ್ರ ಮಲ್ಲಾಪುರ ಮಾತನಾಡಿ, ದಾವಣಗೆರೆ ನಗರಕ್ಕೆ ಬೇಸಿಗೆಯು ಸೇರಿದಂತೆ ನಿರಂತರವಾಗಿ ಕುಡಿಯುವ ನೀರು ಸರಬರಾಜು ಮಾಡಲು ಹಾಗೂ 0.20 ಟಿ.ಎಂ.ಸಿ ನೀರು ನಿರಂತರವಾಗಿ ಇರುವಂತೆ ನೋಡಿಕೊಳ್ಳಲು ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಒಟ್ಟು ರೂ.76.11 ಕೋಟಿ ವೆಚ್ಚದಲ್ಲಿ ರಾಜನಹಳ್ಳಿ-ಮಾಕನೂರು ಗ್ರಾಮಗಳ ಬಳಿ ತುಂಗಭದ್ರಾ ನದಿಗೆ ಬ್ಯಾರೇಜ್ ನಿರ್ಮಾಣ ಮಾಡಲಾಗುತ್ತಿದೆ. ಬ್ಯಾರೇಜ್ ನಿರ್ಮಾಣಕ್ಕೆ ನದಿಯ ಎರಡು ಬದಿಯಲ್ಲಿನ ಖಾಸಗಿ ಜಮೀನಿನಲ್ಲಿ ನಿರ್ಮಾಣ ಕಾರ್ಯ ಕೈಗೊಳ್ಳಬೇಕಿದ್ದು, ಅವಶ್ಯವಿರುವ ಭೂಮಿಯನ್ನು ಗುರುತಿಸಿ, ಸ್ಥಳ ಪರಿಶೀಲಿಸಿ ಮಾಕನೂರು ಗ್ರಾಮದಲ್ಲಿ ಸುಮಾರು 5 ಎಕರೆ ಭೂಮಿ ಹಾಗೂ ರಾಜನಹಳ್ಳಿ ಗ್ರಾಮದ 2 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಾಗಿದ್ದು, ಭೂ-ಮಾಲೀಕರು ನ್ಯಾಯಾಲಯದಲ್ಲಿ ಪ್ರತ್ಯೇಕವಾಗಿ ದಾವೆಗಳನ್ನು ಹೂಡಿದ್ದಾರೆ.

ಇವರು ಭೂಮಿ ಅಳತೆ ಮಾಡಲು ಸಹಕರಿಸದೆ ತಕರಾರು ಮಾಡುತ್ತಿದ್ದಾರೆ ಎಂದರು.ಇದಕ್ಕೆ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ ಈಗಾಗಲೇ ಸಂಬಂಧಪಟ್ಟ ಭೂ ಮಾಲೀಕರೊಂದಿಗೆ ಮಾತನಾಡಿದ್ದು, ವಕೀಲರ ಮೂಲಕ ಲಿಖಿತ ಹೇಳಿಕೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಈ ಭೂಮಿಯಲ್ಲಿ ಸ್ವಲ್ಪ ಭಾಗ ಹಾವೇರಿ ಜಿಲ್ಲೆಗೆ ಸೇರಿರುವುದರಿಂದ ಅಲ್ಲಿಯ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಉಳಿದಂತೆ ನಮ್ಮ ಭಾಗಕ್ಕೆ ಸಂಬಂಧಿಸಿದ ಭೂಮಿಗೆ ಈಗಾಗಲೇ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.

ಸ್ಮಾರ್ಟ್ ಸಿಟಿ ಲಿಮಿಟೆಡ್ ಎಂ.ಡಿ ಮಾತನಾಡಿ, ದಾವಣಗೆರೆ ನಗರವು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿರುವುದರಿಂದ ಮಳೆನೀರು ಸರಾಗವಾಗಿ ಹರಿಯುವಂತೆ ಮಾಡುವ ಸಲುವಾಗಿ ಒಟ್ಟು 10 ಕಿ.ಮೀ ನಷ್ಟು ಉದ್ದ ಚರಂಡಿ ನಿರ್ಮಿಸುತ್ತಿದ್ದು, ಈಗಾಗಲೇ 7 ಕಿ.ಮೀ ಚರಂಡಿ ಕಾಮಗಾರಿ ಪೂರ್ಣಗೊಂಡಿದೆ. ಶೇ.72 ರಷ್ಟು ಭೌತಿಕ ಪ್ರಗತಿಯಾಗಿದೆ. ಆದರೆ ವಿನಾಯಕ ಬಡಾವಣೆ ಹಾಗೂ ಬಾಪೂಜಿ ಪಾಲಿಟೆಕ್ನಿಕ್ ಕಾಲೇಜು ಸಮೀಪದಲ್ಲಿ ರಾಜಕಾಲುವೆ ನಿರ್ಮಿಸಲು ಅಡಚಣೆಯಾಗಿದೆ ಎಂದರು.

ಜಗಳೂರು ಬಸ್ ನಿಲ್ದಾಣವು ದಾವಣಗೆರೆ ಹರಪನಹಳ್ಳಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿದ್ದು, ಹರಪನಹಳ್ಳಿ, ಹೊಸಪೇಟೆ, ಬಳ್ಳಾರಿ, ಕೊಟ್ಟೂರು ಮಾರ್ಗದ ಬಸ್‌ಗಳು ಜಗಳೂರು ಬಸ್ ನಿಲ್ದಾಣದಿಂದ ಚಲಿಸುತ್ತದೆ. ಈ ಬಸ್ ನಿಲ್ದಾಣಕ್ಕೆ ಯಾವುದೇ ಕಟ್ಟಡ, ಬಸ್‌ಬೇ ಇತರೆ ಅನುಕೂಲಗಳು ಇಲ್ಲದಿರುವುದರಿಂದ ಸುಸಜ್ಜಿತ ಬಸ್ ನಿಲ್ದಾಣವನ್ನು ನಿರ್ಮಿಸುವ ಕಾಮಗಾರಿ ಕೈಗೆತ್ತಿಕೊಂಡಿದ್ದು, ಗಣೇಶ ದೇವಸ್ಥಾನಕ್ಕೆ ಹೊಂದಿಕೊಂಡು ಕೆ.ಆರ್ ರಸ್ತೆಗೆ ಲಗತ್ತಾಗಿರುವ ಖಾಸಗಿ ವ್ಯಕ್ತಿಯೋರ್ವರ ಮನೆ 40*60 ಅಡಿ ಖಾಲಿ ನಿವೇಶನದಲ್ಲಿ ಯಾವುದೇ ಕಟ್ಟಡಗಳು ಇಲ್ಲದೇ ನ್ಯಾಯಾಲಯದಲ್ಲಿ ತಮ್ಮ ಸ್ವತ್ತಿನಲ್ಲಿ ಅನಧಿಕೃತವಾಗಿ ನಿರ್ಮಿಸುತ್ತಿರುವ ಬಸ್ ನಿಲ್ದಾಣವನ್ನು ತಕ್ಷಣದಲ್ಲಿ ನಿಲ್ಲಿಸುವಂತೆ ಕೋರಿದ್ದಾರೆ. ಈ ಜಾಗವನ್ನು ಬಿಟ್ಟು ಬಸ್ ನಿಲ್ದಾಣ ಮಾಡಿದರೆ ಬಸ್‌ಗಳನ್ನು ನಿಲ್ಲಿಸಲು ಸುಗಮವಾಗಿ ಸಂಚರಿಸಲು ಸಾಧ್ಯವಾಗುವುದಿಲ್ಲ ಎಂದರು.

ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿಕ್ರಿಯಿಸಿ ಇನ್ನೂ ಒಂದು ತಿಂಗಳಲ್ಲಿ ಈ ಸಮಸ್ಯೆಯನ್ನು ಪರಿಹರಿಸಿಕೊಡುತ್ತೇವೆ. ಪೊಲೀಸ್ ಇಲಾಖೆ ಹಾಗೂ ಬೆಸ್ಕಾಂ ಇಲಾಖೆಯವರ ಸಹಾಯದೊಂದಿಗೆ ಸಾರ್ವಜನಿಕರಿಗೆ ಅನುಕೂಲವಾಗುವ ಸುಸಜ್ಜಿತ ಬಸ್ ನಿಲ್ದಾಣದ ಕಾಮಗಾರಿಯನ್ನು ಪೂರೈಸಿ ಎಂದರು.

ಸ್ಮಾರ್ಟ್ ಸಿಟಿ ಲಿಮಿಟೆಡ್ ಎಂ.ಡಿ ಮಾತನಾಡಿ, ನಗರದ ಸರ್ಕಾರಿ ಶಾಲೆಗಳಲ್ಲಿ ಡಿಜಿಟಲ್ ತಂತ್ರಜ್ಞಾನ ಆಧಾರಿತ ಸ್ಮಾರ್ಟ್ ತರಗತಿಗಳನ್ನು ನಿರ್ಮಿಸುವ ಕಾಮಗಾರಿಯನ್ನು ಎರಡು ಹಂತದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಡಿಜಿಟಲ್ ತಂತ್ರಜ್ಞಾನದ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುವುದಕ್ಕೆ ಸ್ಮಾರ್ಟ್ ಕ್ಲಾಸ್ ಮತ್ತು ಸ್ಮಾರ್ಟ್ ಲ್ಯಾಬ್ ಮಾಡಲಾಗುತ್ತಿದೆ. ‘ಎಲ್ಲರಿಗೂ ಶಿಕ್ಷಣ’ ಎಂಬ ಆಶಯದಂತೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಶೈಕ್ಷಣಿಕ ವಿಷಯಗಳೊಂದಿಗೆ ಎಐಒ ಕಂಪ್ಯೂರ‍್ಸ್ ಅಂಡ್ ಇಂಟರ್ ಆ್ಯಕ್ಟಿವ್ ಡಿವೈಸಸ್ ವಿತ್ ಎಜ್ಯುಕೇಷನಲ್ ಕಂಟೆಟ್ಸ್ ಗಳನ್ನು ಸ್ಥಾಪಿಸುವ ಮೂಲಕ ಸ್ಮಾರ್ಟ್ಸ್ಕೂಲ್ ಕಾಮಗಾರಿಗಳನ್ನು ಅನುಷ್ಟಾನಗೊಳಿಸಲಾಗಿದ್ದು, ಸಂಪನ್ಮೂಲ ಬಳಕೆಗಳ ಕುರಿತು ಶಿಕ್ಷಕರಿಗೆ ತರಬೇತಿಯನ್ನು ನೀಡಲಾಗುತ್ತಿದೆ ಎಂದರು.

ನಗರದ ಹೊಂಡದ ಸರ್ಕಲ್ ಬಳಿಯಿರುವ ಕಲ್ಯಾಣಿಗೆ ಪಾರಂಪರಿಕ ಶೈಲಿಯಲ್ಲಿ ಹೈಟೆಕ್ ಟಚ್ ಕೊಡಲು ಹಾಗೂ ಹಳೇ ಗಡಿಯಾರ ಕಂಬಕ್ಕೆ ವಾಸ್ತುಶಿಲ್ಪದ ಕ್ರಿಯಾತ್ಮಕ ವಿದ್ಯುತ್ ದೀಪಾಲಂಕಾರವನ್ನು ನೀಡುವುದರ ಮೂಲಕ ಸೌಂರ‍್ಯೀಕರಣಗೊಳಿಸಿ, ಜನಾಕರ್ಷಣೆ ಕೇಂದ್ರವನ್ನಾಗಿಸುವ ಯೋಜನೆಯು ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿಕ್ರಿಯಿಸಿ ಸ್ಮಾರ್ಟ್ ಸಿಟಿಯಡಿ ನಡೆಯುತ್ತಿರುವ ಎಲ್ಲಾ ಕಾಮಗಾರಿಗಳನ್ನು ಒಂದು ವರ್ಷದೊಳಗಾಗಿ ಪೂರ್ಣಗೊಳಿಸಬೇಕು ಎಂದು ಆದೇಶಿಸಿದರು.

ಸಭೆಯಲ್ಲಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ಶಾಸಕರಾದ ಶಾಮನೂರು ಶಿವಶಂಕರಪ್ಪ, ಎಸ್.ಎ.ರವೀಂದ್ರನಾಥ್, ಮಹಾಪೌರ ಎಸ್.ಟಿ.ವೀರೇಶ್, ಜಿಲ್ಲಾ ಪಂಚಾಯತ್ ಸಿಇಒ ವಿಜಯ ಮಹಾಂತೇಶ ದಾನಮ್ಮನವರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಡಿಹೆಚ್‌ಒ ಡಾ.ನಾಗರಾಜ್, ಸ್ಮಾರ್ಟ್ ಸಿಟಿ ಲಿಮಿಟೆಡ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!