ಕಾರ್ಮಿಕರು ಸರಿಯಾಗಿ ಕೆಲಸ ಮಾಡಿದರೆ ದಾವಣಗೆರೆ ಸುಂದರವಾಗಿರುತ್ತದೆ: ಡಾ. ಶಾಮನೂರು ಶಿವಶಂಕರಪ್ಪ.
ದಾವಣಗೆರೆ: ಪೌರಕಾರ್ಮಿಕರು ಸರಿಯಾಗಿ ತಮ್ಮ ತಮ್ಮ ಕೆಲಸ ಮಾಡಿದರೆ ದಾವಣಗೆರೆ ನಗರ ಸುಂದರವಾಗಿರುತ್ತದೆ ಎಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಶಾಸಕರು ಹಾಗೂ ಮಾಜಿ ಸಚಿವರಾದ ಸನ್ಮಾನ್ಯ ಡಾ. ಶಾಮನೂರು ಶಿವಶಂಕರಪ್ಪ ರವರು ತಿಳಿಸಿದರು.
ಭಾನುವಾರ ದಾವಣಗೆರೆ ಮಹಾನಗರ ಪಾಲಿಕೆಯ ವ್ಯಾಪ್ತಿಯ ವಾರ್ಡ್ ನಂಬರ್ 17ರ ಸೂಪರ್ ಮಾರ್ಕೆಟ್ ಬಳಿ ‘ಪೌರಕಾರ್ಮಿಕರುಗಳಿಗೆ ಅತ್ಯಾಧುನಿಕ ವಿಶ್ರಾಂತಿ ಗೃಹ’ ನಿರ್ಮಿಸುವ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಅವರು ಮಾತಾಡಿದರು.
ಮಹಾನಗರ ಪಾಲಿಕೆಯು ಪೌರ ಕಾರ್ಮಿಕರ ಹಿತದೃಷ್ಟಿಯಿಂದ ಅವರಿಗೆ ಅತ್ಯಾಧುನಿಕ ವಿಶ್ರಾಂತಿ ಗೃಹವನ್ನು ನಿರ್ಮಿಸುತ್ತಿದ್ದಾರೆ. ಇದರಿಂದಾಗಿ ಪ್ರತಿ ನಿತ್ಯ ಗಂಟೆಗಟ್ಟಲೇ ಕೆಲಸಮಾಡಿ ಸುಸ್ತಾಗಿ ಬರುವ ಕಾರ್ಮಿಕರಿಗೆ ವಿಶ್ರಾಂತಿಸಲು ಅನುಕೂಲವಾಗುತ್ತದೆ ಎಂದರು.
2021-22ನೇ ಸಾಲಿನ 15ನೇ ಹಣಕಾಸು ಆಯೋಗದ ಅನುದಾನದಲ್ಲಿ ಪೌರ ಕಾರ್ಮಿಕರುಗಳಿಗೆ ಅತ್ಯಾಧುನಿಕ ವಿಶ್ರಾಂತಿ ಗೃಹವನ್ನು ನಿರ್ಮಾಣ ಮಾಡಲಾಗುತ್ತಿದೆ. ದಾವಣಗೆರೆಯ ರತ್ನು ಕನ್‍ಸ್ಟ್ರಕ್ಷನ್ ಗುತ್ತಿಗೆದಾರರಿಗೆ ನಿರ್ಮಾಣ ಹೊಣೆ ವಹಿಸಲಾಗಿದೆ ಎಂದು ಮಹಾನಗರ ಪಾಲಿಕೆಯ ಆಯುಕ್ತೆ ರೇಣುಕಾ ತಿಳಿಸಿದರು.
ಈ ವೇಳೆ ಮಹಾನಗರ ಪಾಲಿಕೆಯ ಮೇಯರ್ ವಿನಾಯಕ್ ಫೈಲ್ವಾನ್, ಕಾರ್ಯಪಾಲ ಅಭಿಯಂತರರಾದ ಹರ್ಷಿತಾ ಎಂ.ಎನ್, ಸಹಾಯಕ ಕಾರ್ಯಪಾಲ ಅಭಿಯಂತರರಾದ ವಿನಾಯಕ್ ಎಂ ನಾಯಕ್, ಕಿರಿಯ ಅಭಿಯಂತರರಾದ ಮಾರುತಿ, ರತ್ನು ಕನ್‍ಸ್ಟ್ರಕ್ಷನ್ ಗುತ್ತಿಗೆದಾರರಾದ ತಿಲಕ್ ರತ್ನು, ಉಮೇಶ್, ಶೀತಲ್ ನಾಯ್ಕ್, ಕಾರ್ತಿಕ್ ಆಲೂರು, ಸ್ವರೂಪ್ ಮತ್ತಿ, ಅಭಿಲಾಷ್ ಹಾಗೂ ಪಾಲಿಕೆಯ ಪೌರ ಕಾರ್ಮಿಕರು ಸೇರಿದಂತೆ ಇತರರು ಹಾಜರಿದ್ದರು.