ಫೆ.28ರಂದು ದಾವಿವಿ 10ನೇ ವರ್ಷದ ಘಟಿಕೋತ್ಸವ
ದಾವಣಗೆರೆ: ಇದೇ ಫೆ.28ರ ಮಂಗಳವಾರ ದಾವಣಗೆರೆ ವಿಶ್ವವಿದ್ಯಾನಿಲಯದ 10ನೇ ಘಟಿಕೋತ್ಸವ ಕಾರ್ಯಕ್ರಮ ನಡೆಯಲಿದೆ.
ಶಿವಗಂಗೋತ್ರಿಯ ಜ್ಞಾನಸೌಧದಲ್ಲಿ ಬೆಳಿಗ್ಗೆ 10.15ಕ್ಕೆ ನಡೆಯಲಿರುವ ಘಟಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ವಹಿಸಲಿದ್ದಾರೆ ಎಂದು ದಾವಣಗೆರೆ ವಿವಿ ಕುಲಪತಿ ಪ್ರೊ.ಬಿ.ಡಿ. ಕುಂಬಾರ ತಿಳಿಸಿದ್ದಾರೆ
ಶನಿವಾರ ವಿಶ್ವವಿದ್ಯಾಲಯದಲ್ಲಿ ಪತ್ರಕರ್ತರಿಗೆ ಮಾಹಿತಿ ನೀಡಿದ ಅವರು, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಉಪಸ್ಥಿತರಿರಲಿದ್ದಾರೆ. ನವದೆಹಲಿಯ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಅಧ್ಯಕ್ಷ ಪ್ರೊ.ಟಿ.ಜಿ. ಸೀತಾರಾಮ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಹೇಳಿದರು.
ಘಟಿಕೋತ್ಸವದಲ್ಲಿ 01 ಪುರುಷ ಅಭ್ಯರ್ಥಿ ಮಾಸ್ಟರ್ ಆಫ್ ಫಿಲಾಸಫಿ (ಎಂ.ಫಿಲ್) ಮತ್ತು 04 ಮಹಿಳಾ ಹಾಗೂ 10 ಪುರುಷ ಅಭ್ಯರ್ಥಿಗಳು ಸೇರಿ ಒಟ್ಟು 14 ಜನ ಡಾಕ್ಟರ್ ಆಫ್ ಫಿಲಾಸಫಿ (ಪಿ.ಹೆಚ್‌ಡಿ) ಪದವಿಗೆ ಪ್ರಧಾನ ಮಾಡಲಾಗುವುದು.
ಸ್ನಾತಕ ಪದವಿಗಳಾದ ಬಿ.ಎ./ಬಿ.ಎಸ್.ಡಬ್ಲ್ಯೂ../ಬಿ.ವಿ.ಎ../ಡಿಪ್ಲೋಮಾ ಇನ್ ಡಿಜಿಟಲ್ಅ ನಿಮೆಷನ್ & ಮಲ್ಟಿಮೀಡಿಯಾ/ ಬಿ.ಎಸ್ಸಿ./ಬಿ.ಸಿ.ಎ./ಬಿ.ಕಾಂ./ಬಿ.ಬಿ.ಎ.,/ಬಿ.ಇಡಿ, ಹಾಗೂ ಬಿ.ಪಿ.ಇಡಿ., ಪದವಿಗಳಲ್ಲಿ 2021-22ನೇ ಸಾಲಿನಲ್ಲಿ 7,219 ಮಹಿಳಾ ಹಾಗೂ 4,960 ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 12,179 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿರುತ್ತಾರೆ.
ಸ್ನಾತಕೋತ್ತರ ಪದವಿಗಳಲ್ಲಿ 2021-22ನೇ ಸಾಲಿನಲ್ಲಿ 1,161 ಮಹಿಳಾ ವಿದ್ಯಾರ್ಥಿಗಳು ಹಾಗೂ 638 ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 1,799 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿದ್ದಾರೆ. ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳು ಸೇರಿ ಒಟ್ಟು 13,978 ವಿದ್ಯಾರ್ಥಿಗಳು ಪದವಿ ಪಡೆಯಲು ಅರ್ಹರಾಗಿರುತ್ತಾರೆ.
2021-22 ನೇ ಸಾಲಿನಲ್ಲಿ ಒಟ್ಟು 81 ಸ್ವರ್ಣ ಪದಕಗಳು ಇದ್ದು, ಸ್ನಾತಕ ಪದವಿಯಲ್ಲಿ 10 ಮಹಿಳಾ ಹಾಗೂ 4 ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 14 ವಿದ್ಯಾರ್ಥಿಗಳು 22 ಸ್ವರ್ಣ ಪದಕಗಳನ್ನು ಪಡೆಯಲಿದ್ದಾರೆ. ಹಾಗೂ ಸ್ನಾತಕೋತ್ತರ ಪದವಿಯಲ್ಲಿ 22 ಮಹಿಳಾ ಹಾಗೂ 9 ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 31 ವಿದ್ಯಾರ್ಥಿಗಳು 59 ಸ್ವರ್ಣ ಪದಕಗಳನ್ನು ಪಡೆಯಲಿದ್ದಾರೆ. ಒಟ್ಟಾರೆ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಒಟ್ಟು 32 ಮಹಿಳಾ ವಿದ್ಯಾರ್ಥಿನಿಗಳು ಹಾಗೂ 13 ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 45 ವಿದ್ಯಾರ್ಥಿಗಳು 81 ಚಿನ್ನದ ಪದಕಗಳನ್ನು ಹಂಚಿಕೊಂಡಿದ್ದಾರೆ ಎಂದು ಪ್ರೊ.ಕುಂಬಾರ ಮಾಹಿತಿ ನೀಡಿದರು.
2021-2022ರಲ್ಲಿ ನಡೆದ ಪರೀಕ್ಷೆಗಳಲ್ಲಿ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ [ಎಂ.ಕಾಂ.,] ವಿಭಾಗದ ಹಾಲಮ್ಮ ಬಿ. ಮತ್ತು ಸ್ನಾತಕೋತ್ತರ ಜೀವರಸಾಯನಶಾಸ್ತ್ರ ವಿಭಾಗದ ಕೆ. ಅರುಣ್ ಶರ್ಮ ಅತೀ ಹೆಚ್ಚು ಅಂಕ ಪಡೆದು ತಲಾ 5 ಸ್ವರ್ಣ ಪದಕಗಳನ್ನು ಪಡೆದಿರುವುದಾಗಿ ಅವರು ಹೇಳಿದರು.
2021-22ನೇ ಶೈಕ್ಷಣಿಕ ವರ್ಷದಲ್ಲಿ ಸ್ನಾತಕ ಪದವಿಯಲ್ಲಿ ಶೇಕಡ 73.22% ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಶೇಕಡ 96.82% ಫಲಿತಾಂಶ ಬಂದಿದ್ದು, ಫಲಿತಾಂಶ ಸುಧಾರಣೆಗೆ ಮತ್ತಷ್ಟು ಕ್ರಮ ತೆಗದೆುಕೊಳ್ಳುವುದಾಗಿ ಪ್ರೊ.ಕುಂಬಾರ ಹೇಳಿದರು. ಪ್ರೊ.ಶಿವಶಂಕರ್ ಕೆ. ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.