dcc bank; ಡಿಸಿಸಿ ಬ್ಯಾಂಕ್ ಚುನಾವಣೆ; ಅಂತಿಮ ಮತದಾರರ ಪಟ್ಟಿ ಪ್ರಕಟಗೊಂಡ ಕೆಲವೇ ನಿಮಿಷಗಳಲ್ಲಿ ಮಾಯ
ದಾವಣಗೆರೆ: dcc bank ರಾಜ್ಯ ಹೈಕೋರ್ಟಿನ ಆದೇಶದ ಮೇರೆಗೆ ಇದೇ ಜ.25 ರಂದು ನಿಗಧಿಯಾಗಿದ್ದ ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಚುನಾವಣೆಗೆ ಕೇವಲ 2 ವಾರ ಬಾಕಿ ಇದ್ದು, ಈ ಹಿನ್ನೆಲೆಯಲ್ಲಿ ಶನಿವಾರ ಪ್ರಕಟಗೊಂಡಿದ್ದ ಅಂತಿಮ ಮತದಾರರ ಪಟ್ಟಿ ಸೂಚನಾ ಫಲಕದಲ್ಲಿ ಕಾಣಿಸಿಕೊಂಡ ಕೆಲವೇ ನಿಮಿಷಗಳಲ್ಲಿ ಮಾಯವಾಗಿದೆ.
ನಗರದ ದೇವರಾಜ್ ಅರಸು ಬಡಾವಣೆಯಲ್ಲಿರುವ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ಸೂಚನಾ ಫಲಕದಲ್ಲಿ ಬ್ಯಾಂಕ್‌ನ 13 ಕ್ಷೇತ್ರಗಳಿಗೆ ಸಂಬಂಧಿಸಿದ ಅಂತಿಮ ಮತದಾರರ ಪಟ್ಟಿಯನ್ನು ಶನಿವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಪ್ರಕಟಿಸಲಾಗಿತ್ತು.
ಆದರೆ ಇದಾದ ಕೆಲವೇ ನಿಮಿಷಗಳಲ್ಲಿ ಈ ಪಟ್ಟಿಯನ್ಜು ಹರಿದು ಹಾಕಿರುವುದಲ್ಲದೇ ಈ ಸೂಚನಾ ಫಲಕವನ್ನು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರು ತಮ್ಮ ಕೊಠಡಿಗೆ ಸ್ಥಳಾಂತರಿಸಿ ಬೀಗ ಹಾಕಿರುವುದು ಬೆಳಕಿಗೆ ಬಂದಿದೆ.
ಮತದಾರರ ಪಟ್ಟಿ ಹರಿದು ಹಾಕಿರುವುದಕ್ಕೆ ಬ್ಯಾಂಕಿನ ಸೂಚನಾ ಫಲಕದ ಕೆಳಗೆ ಪೇಪರ್ ತುಣುಕುಗಳು ಸಾಕ್ಷಿಯಾಗಿ ಬಿದ್ದಿವೆ. ಈ ಎಲ್ಲ ದೃಶ್ಯಾವಳಿಗಳು ಬ್ಯಾಂಕ್‌ನ ಸಿಸಿ ಟಿವಿಯಲ್ಲಿ ದಾಖಲಾಗಿವೆ. ದಾವಣಗೆರೆ ಮತ್ತು ಮೈಸೂರು ಡಿಸಿಸಿ ಬ್ಯಾಂಕ್‌ನ ಆಡಳಿತ ಮಂಡಳಿಗೆ ಗರಿಷ್ಠ 8 ವಾರಗಳ ಒಳಗೆ ಚುನಾವಣಾ ನಡೆಯಬೇಕೆಂದು ಹೈಕೋರ್ಟ್ ವಿಭಾಗೀಯ ಪೀಠ ಆದೇಶಿಸಿತ್ತು.
ದಾವಣಗೆರೆ ಜಿಲ್ಲಾ ಬ್ಯಾಂಕ್‌ನ ಚುನಾವಣಾ ಪ್ರಕ್ರಿಯೆ ಅಂತಿಮ ಘಟ್ಟಕ್ಕೆ ಬಂದು ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಇದೇ ಜ.10 ರಿಂದ ಆರಂಭವಾಗಬೇಕಿತ್ತು. ಬ್ಯಾಂಕಿನ ಆಡಳಿತಾಧಿಕಾರಿ, ಚುನಾವಣಾಧಿಕಾರಿ ಮತ್ತು ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ರಿಟರ್ನಿಂಗ್ ಅಧಿಕಾರಿಗಳು ಸರ್ಕಾರದ ಒತ್ತಡಕ್ಕೆ ಮಣಿದು ಇದರಲ್ಲಿ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.ಚುನಾವಣೆಯನ್ನು ಮುಂದೂಡಬೇಕೆನ್ನುವುದೆ ಇದರ ಮೂಲ ಉದ್ದೇಶವಾಗಿದೆ ಎಂದು ಹೇಳಲಾಗಿದೆ.
ನಿಬಂಧನೆಗಳ ಪ್ರಕಾರ ಚುನಾವಣೆ ದಿನಾಂಕಕ್ಕೂ 21 ದಿನಗಳ ಹಿಂದೆ ಅಂತಿಮ ಮತದಾರರ ಪಟ್ಟಿ ಪ್ರಕಟಗೊಳ್ಳಬೇಕು. ಆದಾಗ್ಯೂ ಸರಿಯಾದ ದಿನಾಂಕಕ್ಕೆ ಪಟ್ಟಿ ಪ್ರಕಟಗೊಂಡಿದೆಯಾದರೂ ಅದನ್ನು ಕೆಲವೇ ನಿಮಿಷಗಳಲ್ಲಿ ಹರಿದು ಹಾಕಿ ಇಡೀ ಸೂಚನಾ ಫಲಕವನ್ನೆ ಎಂಡಿ ತಮ್ಮ ಕಚೇರಿಗೆ ಸ್ಥಳಾಂತರಿಸಿ ಬೀಗ ಕೂಡ ಹಾಕಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಈಗಾಗಲೇ ಚುನಾವಣಾ ಆಕಾಂಕ್ಷೆಗಳು ದೃಢೀಕೃತ ಅಂತಿಮ ಮತದಾರರ ಪಟ್ಟಿ ಕೋರಿ ನಿಗಧಿತ ಶುಲ್ಕತುಂಬಿ ಅರ್ಜಿ ಸಲ್ಲಿಸಿದ್ದರು. ಈ ಎಲ್ಲರಿಗೂ ಜ.6 ರಂದು ಪಟ್ಟಿ ನೀಡುವುದಾಗಿ ತಿಳಿಸಲಾಗಿತ್ತು. ಇದಕ್ಕೂ ಮುನ್ನವೇ ನಿಯಮಾವಳಿಗಳ ಪ್ರಕಾರ ಸೂಚನಾ ಫಲಕದಲ್ಲಿ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗಿತ್ತು. ಆದರೆ ಅಂಟಿಸಿದ ಪಟ್ಟಿಯನ್ನೆ ಹರಿದು ಹಾಕಲಾಗಿದ್ದು, ಇದರಿಂದ ಆಕಾಂಕ್ಷೆಗಳು ಚುನಾವಣಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.