ಭದ್ರಾವತಿ ಉಕ್ಕಿನ ಕಾರ್ಖಾನೆ ಮುಚ್ಚದಂತೆ ಮೋದಿಗೆ ದೇವೇಗೌಡ ಪತ್ರ
ಬೆಂಗಳೂರು: ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ ದೇವೇಗೌಡ ಅವರು ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾ ನೆ(ವಿಐಎಸ್ಎಲ್) ಮುಚ್ಚದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ನಾನು 1996ರಲ್ಲಿ ಪ್ರಧಾನಿಯಾಗಿದ್ದಾಗ ವಿಐಎಸ್ಎಲ್ ಅನ್ನು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಜೊತೆ ವಿಲೀನಗೊಳಿಸಲು ಕ್ರಮ ಕೈಗೊಂಡಿದ್ದೆ. 650 ಕೋಟಿ ರೂ. ಹೂಡಿಕೆಯೊಂದಿಗೆ ಕಾರ್ಖಾನೆ ಮೇಲ್ದರ್ಜೆಗೇರಿಸಲು ಮುಂದಾಗಿದ್ದೆ, ಆದರೆ ದುರಾದೃಷ್ಟವಶಾತ್ ಅದು ಸಾಧ್ಯವಾಗಲಿಲ್ಲ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಬೃಹತ್ ಸಾರ್ವಜನಿಕ ವಲಯದ ಈ ಉಕ್ಕಿನ ಕೈಗಾರಿಕೆ ಮುಚ್ಚಲ್ಪಟ್ಟರೆ, ಸುಮಾರು 20 ಸಾವಿರಕ್ಕೂ ಹೆಚ್ಚು ಕುಟಂಬಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಈ ಭಾಗದ ಜನರ ಹಾಗೂ ನೌಕರ ವರ್ಗದವರ ಆತ್ಮಬಲದ ಮೇಲೆ ಪರಿಣಾಮವಾಗಲಿದೆ ಎಂದು ದೇವೇಗೌಡರು ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಕಾರ್ಖಾನೆ ಪುನಶ್ಚೇತನಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಉಕ್ಕು ಸಚಿವಾಲಯ ಹಾಗೂ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರುತ್ತೇನೆ ಎಂದು ದೇವೇಗೌಡರು ತಮ್ಮ ಪತ್ರದಲ್ಲಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ.