ದರೋಡೆಗೆ ತೆರಳಿದ್ದರಾ ಈ ಮೂವರು? ಆನಗೋಡು ಬಳಿ ಅಪಘಾತಗೊಂಡ ಮೃತಪಟ್ಟ ಮೂವರೂ ದರೋಡೆಗೆ ಇಳಿದಿದ್ದರಾ.. ?

ಆನಗೋಡು ಬಳಿ ಅಪಘಾತಗೊಂಡ ಮೃತಪಟ್ಟ ಮೂವರೂ ದರೋಡೆಗೆ ಇಳಿದಿದ್ದರಾ

ದಾವಣಗೆರೆ: ಶುಕ್ರವಾರ ರಾತ್ರಿ ಆನಗೋಡು ಬಳಿ ನಡೆದ ಅಪಘಾತದಲ್ಲಿ ದಾವಣಗೆರೆ ಶ್ರೀರಾಮನಗರದ ಮೂವರು ಯುವಕರು ಮೃತಪಟ್ಟ ಘಟನೆ ಬೇರೆಯದ್ದೇ ಆದ ರೋಚಕ ತಿರುವು ಪಡೆಯುವ ಸಾಧ್ಯತೆ ಇದೆ.
ದಾವಣಗೆರೆ ನಗರದ ರಾಮನಗರದ ನಿವಾಸಿಗಳಾದ ಸಂದೇಶ್‌ (23) ಪರಶುರಾಮ್ (24) ಹಾಗೂ  ಶಿವು (26) ಈ ಮೂವರು ಯವಕರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಒಂದೇ ಬೈಕ್‌ನಲ್ಲಿ ಹೋಗುತ್ತಿದ್ದಾಗ ಲಾರಿಯೊಂದು ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ಪ್ರಾಯಕ್ಕೆ ಬಂದ ಈ ಯುವಕರ ಸಾವಿನಿಂದಾಗಿ ರಾಮನಗರ ಸೇರಿದಂತೆ ದಾವಣಗೆರೆಯ ಜನತೆಯೂ ಮರುಕಪಟ್ಟಿತ್ತು.
ಅದರಲ್ಲೂ ನಾಗರಾಜ್ ಹಾಗೂ ರತ್ನಮ್ಮ ದಂಪತಿಯ ಪುತ್ರ ಪರಶುರಾಮ್ ಅವರಿಗೆ ಒಂದುವರೆ ವರ್ಷಗಳ ಹಿಂದಷ್ಟೇ ವಿವಾಹವಾಗಿದ್ದು, ಪತ್ನಿ 7 ತಿಂಗಳ ಗರ್ಭಿಣಿ. ಈ ವಿಷಯ ತಿಳಿದ ಜನತೆ ದೇವರೇ ನೀನೆಷ್ಟು ಕ್ರೂರಿ ಎಂದು ಶಾಪ ಹಾಕಿದ್ದೂ ಉಂಟು.
ಶನಿವಾರ ಮುಂಜಾನೆ 3 ಗಂಟೆಗೆ ಶವಗಳನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ತಂದಾಗ ಮೃತರ ಸಂಬಂಧಿಕರು ಆಸ್ಪತ್ರೆಯ ಶವಾಗಾರದ ಬಳಿ ನೆರೆದಿದ್ದರು. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.
ಮುಂಜಾನೆ 3 ಗಂಟೆಗೆ ಶವಗಳನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ತರಲಾಗಿತ್ತು. ಮೃತರ ಸಂಬಂಧಿಕರು ಆಸ್ಪತ್ರೆಯ ಶವಾಗಾರದ ಬಳಿ ನೆರೆದಿದ್ದರು. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.
ಬೇರೆಯವರ ಮನೆಯಲ್ಲಿ ದುಡಿದು ನಿನ್ನನ್ನು ಸಾಕಿದ್ದೆ. ನಿನಗೆ ಈ ರೀತಿಯ ಸಾವು ಬರಬಾರದಿತ್ತು. ನನಗಾದರೂ ಸಾವು ಬರಬಾರದಿತ್ತೇ ಎಂದು ಪರಶುರಾಮ್ ಅವರ ತಾಯಿ ರತ್ನಮ್ಮ ಅಳುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಆದರೆ ಇದೀಗ ಈ ಘಟನೆಗೆ ಸಂಬಂಧಿಸಿದ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪ್ರಕರಣ ಬೇರೆಯದ್ದೇ ಆದ ತಿರುವು ಪಡೆಯಲು ಹೊರಟಿದೆ.
ಮೂಲಗಳ ಪ್ರಕಾರ ಈ ಮೂವರು ದರೋಡೆ ಕೆಲಸದಲ್ಲಿ ನಿರತರಾಗಿದ್ದರು ಎನ್ನಲಾಗಿದೆ. ರಾತ್ರಿ ಸುಮಾರು 10.30ರ ವೇಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ನಿಲ್ಲಿಸಿ, ಊಟ ಮಾಡುತ್ತಿದ್ದ ಚಾಲಕನ ಮೇಲೆ 12.20ರ ವೇಳೆಗೆ ಆಗಮಿಸಿ ಈ ಮೂವರ ಜೊತೆ ಮತ್ತೊಂದು ಬೈಕ್‌ನಲ್ಲಿ ಬಂದ ಮೂವರು ಸೇರಿ ಒಟ್ಟು ಆರು ಜನರು ದಾಳಿ ಮಾಡಿದ್ದಾರೆ. ಚಾಲಕನನ್ನು ಥಳಿಸಿ ಕೆಗೆ ಸಿಕ್ಕದ್ದನ್ನು ದೋಚಿ ಹೊರಟಿದ್ದಾರೆ.
ಸಿಸಿ ಟಿವಿಯಲ್ಲಿ ಬೈಕ್ ನಿಲ್ಲಿಸಿರುವ ಹಾಗೂ ಲಾರಿ ಚಾಲನಕನಿಗೆ ಥಳಿಸಿರುವುದು ಸೆರೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ತನ್ನನ್ನು ಥಳಿಸಿ, ಹಣ ಕಿತ್ತುಕೊಂಡ ಕೋಪಕ್ಕೆ ಲಾರಿ ಚಾಲಕ ಎಡಭಾಗದಲ್ಲಿದ್ದ ಬೈಕ್ ಮೇಲೆ ಲಾರಿ ಹಾಯಿಸಿದ್ದಾನೆ. ಮೂವರ ಮೇಲೂ ಲಾರಿ ಹರಿದಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮತ್ತೊಂದು ಬೈಕ್‌ನಲ್ಲಿದ್ದವರೂ ಎಡ ಭಾಗದಲ್ಲಿದ್ದರೆ ಅವರೂ ಯಮನ ಪಾದ ಸೇರುವ ಸಾಧ್ಯತೆ ಇತ್ತು ಎನ್ನಲಾಗಿದೆ.
ಈ ಯುವಕರು ಡಕಾಯತಿ ಕೆಲಸದಲ್ಲಿ ಮೊದಲಿನಿಂದಲೂ ನಿರತರಾಗಿದ್ದರು ಎನ್ನಲಾಗಿದ್ದು, ಶ್ರೀರಾಮನಗರದಲ್ಲಿರುವ ಮುಖ್ಯ ರೌಡಿಯೊಬ್ಬ ಇವರ ಬೆನ್ನಿಗಿದ್ದಾನೆ. ಆತನೇ ಈ ಪ್ರಕರಣದ ಪ್ರಮುಖ ಸೂತ್ರಧಾರ ಎನ್ನಲಾಗಿದ್ದು, ಅತಿ ಕಡಿಮೆ ಅವಧಿಯಲ್ಲಿಯೇ ಹಣ ಮಾಡುತ್ತಿದ್ದನ್ನು ನೋಡಿ, ಆಸೆಗೆ ಬಿದ್ದ ಅಲ್ಲಿನ ಯುವಕರೂ ಸಹ ದರೋಡೆ ಕೃತ್ಯಗಳಿಗೆ ಮುಂದಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಒಟ್ಟಿನಲ್ಲಿ ಪ್ರಕರಣದ ಸತ್ಯಾಂತಶವನ್ನು ಪೊಲೀಸರು ಬಯಲಿಗೆಳೆಯಬೇಕಿದೆ.

Leave a Reply

Your email address will not be published. Required fields are marked *

error: Content is protected !!