ರೈತರಿಗೆ ತೊಂದರೆಯಾಗದಂತೆ ರಸಗೊಬ್ಬರ ವಿತರಿಸಿ – ಶ್ರೀನಿವಾಸ್ ಚಿಂತಾಲ್

ದಾವಣಗೆರೆ: ಸದರಿ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ರೈತರಿಗೆ ಯಾವುದೇ ತೊಂದರೆಯಾಗದಂತೆ ರಸಗೊಬ್ಬರ, ಬಿತ್ತನೆ ಬೀಜ ವಿತರಿಸುವಂತೆ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಹೇಳಿದರು.
ನಗರದ ಶಾಮನೂರು ರಸ್ತೆಯಲ್ಲಿರುವ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ದಾವಣಗೆರೆ ನಗರದ ಪರವಾನಿಗೆ ಪಡೆದ ರಸಗೊಬ್ಬರ, ಬಿತ್ತನೆ ಬೀಜ ಮಾರಾಟಗಾರರಿಗೆ ಹಮ್ಮಿಕೊಂಡಿದ್ದ ಸುರಕ್ಷಿತ ಕೀಟನಾಶಕ ಬಳಕೆ ಮತ್ತು ಕೃಷಿ ಪರಿಕರಗಳ ಸಮರ್ಪಕ ದಾಸ್ತಾನು ಮತ್ತು ವಿತರಣೆ ಸಂಬಂಧ ಸರ್ಕಾರದ ಮಾರ್ಗಸೂಚಿಗಳ ಕುರಿತು ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
2023.24 ಸಾಲಿನ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಕಾರ್ಯಕ್ಕೆ ಕೃಷಿ ಇಲಾಖೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕೃಷಿ ಪರಿಕರ ಮಾರಾmಗಾರರು ಇಲಾಖೆಯ ಜೊತೆಗೆ ಕೈ ಜೋಡಿಸಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಣೆಯಲ್ಲಿ ಯಾವುದೇ ವ್ಯತ್ಯವಾಗದಂತೆ ನೋಡಿಕೊಳ್ಳಬೇಕೆಂದು ಕರೆ ನೀಡಿದರು.
ರಸಗೊಬ್ಬರ ಮತ್ತು ಬಿತ್ತನೆ ಬೀಜ ಸೇರಿದಂತೆ ಯಾವುದೇ ಕೃಷಿ ಪರಿಕರಗಳನ್ನು ಸರ್ಕಾರ ನಿಗಧಿಪಡಿಸಿ ಮಾನದಂಡಕ್ಕೆ ಅನುಗುಣವಾಗಿ ರೈತರಿಗೆ ವಿತರಣೆ ಮಾಡಬೇಕು. ಈ ವಿಚಾರದಲ್ಲಿ ದೂರುಗಳು ಕೇಳಿ ಬಂದರೆ ಅಂಥಹ ಮಾರಾಟಗಾರರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಉಪನಿರ್ದೇಶಕತಿಪ್ಪೇಸ್ವಾಮಿ, ತಾಲೂಕು ಸಹಾಯಕ ಕೃಷಿ ನಿರ್ದೇಶಕ ಶ್ರೀಧರ ಮೂರ್ತಿ,ಜಾರಿದಳದ ಅಧಿಕಾರಿಗಳು, ಕೃಷಿಪರಿಕರ ಮಾರಾಟಗಾರರ ಸಂಘದ ಅಧ್ಯಕ್ಷ ಲೋಕಿಕೆರೆ ನಾಗರಾಜ್, ಸಂಘದ ಕಾರ್ಯದರ್ಶಿ ಉಮಾಪತಯ್ಯ, ಶಿವಣ್ಣ, ಅಣಬೇರು ಗಂಗಣ್ಣ
ಇತರರು ಉಪಸ್ಥಿತರಿದ್ದರು.