ಜಿಲ್ಲೆಯ ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್ ಅವರಿಗೆ ನಾಡಿಗೇರ ಕೃಷ್ಣರಾಯ ಪ್ರಶಸ್ತಿ
ದಾವಣಗೆರೆ: ರಾಜ್ಯದ ಪತ್ರಕರ್ತರ ಪ್ರಾತಿನಿಧಿಕ ಸಂಸ್ಥೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ)ವು ಪ್ರತಿಭಾನ್ವಿತ ಪತ್ರಕರ್ತರಿಗೆ ಪ್ರತಿ ವರ್ಷ ಕೊಡಮಾಡುವ ಪ್ರಶಸ್ತಿಗೆ ಜಿಲ್ಲೆಯ ಹಿರಿಯ ಪತ್ರಕರ್ತ-ಸಾಹಿತಿ ಬಿ.ಎನ್. ಮಲ್ಲೇಶ್ ಭಾಜನರಾಗಿದ್ದಾರೆ.
ಅಲ್ಲದೇ, ಮೂಲತಃ ದಾವಣಗೆರೆ ತಾಲ್ಲೂಕಿನ ರಾಮಗೊಂಡನಹಳ್ಳಿಯವರಾದ ನಾಡಿನ ಹಿರಿಯ ಪತ್ರಕರ್ತ – ಸಾಹಿತಿ ಆರ್.ಜಿ.ಹಳ್ಳಿ ನಾಗರಾಜ್ ಅವರಿಗೂ ಪ್ರಶಸ್ತಿ ದೊರೆತಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ ತಿಳಿಸಿದ್ದಾರೆ.
ಪತ್ರಿಕೋದ್ಯಮದ ಕ್ಷೇತ್ರದ ವಿವಿಧ ವಿಭಾಗಗಳ ಸಾಧಕರಿಗೆ ನಾಡಿನ ಅನೇಕ ಮಹನೀಯರ ಹೆಸರಿನಲ್ಲಿ ಒಟ್ಟು 21 ದತ್ತಿ ಪ್ರಶಸ್ತಿಗಳನ್ನು ಪ್ರತಿ ವರ್ಷ ನೀಡಲಾಗುತ್ತಿದ್ದು, 2023ನೇ ಸಾಲಿನ ಪ್ರಶಸ್ತಿಗಳಿಗೆ ಬಿ.ಎನ್. ಮಲ್ಲೇಶ್ ಮತ್ತು ಆರ್.ಜಿ. ಹಳ್ಳಿ ನಾಗರಾಜ್ ಆಯ್ಕೆಯಾಗಿದ್ದಾರೆ.
ಪತ್ರಿಕೋದ್ಯಮ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸುತ್ತಿರುವ ನಾಡಿನ ಹಿರಿಯ ಪತ್ರಕರ್ತರಿಗೆ ಗೌರವ ಪೂರ್ವಕವಾಗಿ ಕೊಡಮಾಡುವ `ನಾಡಿಗೇರ ಕೃಷ್ಣರಾಯ’ರ ಪ್ರಶಸ್ತಿಯನ್ನು ಬಿ.ಎನ್. ಮಲ್ಲೇಶ್ ಅವರಿಗೂ, `ನಾಡಪ್ರಭು ಕೆಂಪೇಗೌಡ’ ಪ್ರಶಸ್ತಿಯನ್ನು ಆರ್.ಜಿ.ಹಳ್ಳಿ ನಾಗರಾಜ್ ಅವರಿಗೂ ನೀಡಲಾಗಿದೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಬೆಂಗಳೂರಿನಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಶಸ್ತಿಗಳ ವಿಜೇತರ ಪಟ್ಟಿಯನ್ನು ಬಿಡುಗಡೆ ಮಾಡಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಬರುವ ಫೆಬ್ರವರಿ 4 ಮತ್ತು 5ರಂದು ವಿಜಯಪುರದಲ್ಲಿ ಏರ್ಪಾಡಾಗಿರುವ 37ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ಸಾಧಕರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ಫಕೃದ್ದೀನ್ ತಿಳಿಸಿದ್ದಾರೆ.
ಪ್ರಶಸ್ತಿ ವಿಜೇತರನ್ನು ಸಂಘದ ರಾಜ್ಯ ಘಟಕದ ಸದಸ್ಯ ಕೆ. ಚಂದ್ರಣ್ಣ, ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ, ಪ್ರಧಾನ ಕಾರ್ಯದರ್ಶಿ ಎ. ಫಕೃದ್ದೀನ್, ಜಿಲ್ಲಾ ಖಜಾಂಚಿ ಎನ್.ವಿ. ಬದರೀನಾಥ್ ಅಭಿನಂದಿಸಿದ್ದಾರೆ.