ಶೋಷಣೆ ವಿರುದ್ದ ಹೋರಾಡಲು ಕಾನೂನು ಸಾಕ್ಷರತೆ ಅತ್ತುತ್ತಮ ಸಾಧನ: ಎಲ್.ಎಚ್.ಅರುಣ್‌ಕುಮಾರ್
ದಾವಣಗೆರೆ: ಕಾನೂನು ಸಾಕ್ಷರತೆಯು ಜನಸಾಮಾನ್ಯರನ್ನು ಅದರಲ್ಲೂ ಮಹಿಳೆಯರು, ಹಿಂದುಳಿದ ವರ್ಗಗಳಿಗೆ ಸೇರಿದ ಜನರನ್ನು ಶೋಷಣೆ ವಿರುದ್ದ ಹೋರಾಡಲು ಶಕ್ತರಾಗುವಂತೆ ಮಾಡಲು ಇರುವ ಅತ್ಯುತ್ತಮ ಸಾಧನವಾಗಿದೆ ಎಂದು ಹಿರಿಯ ನ್ಯಾಯವಾದಿ ಎಲ್.ಹೆಚ್.ಅರುಣ್‌ಕುಮಾರ್ ಅಭಿಪ್ರಾಯ ಪಟ್ಟರು.
ನೆರಳು ಬೀಡಿ ಕಾರ್ಮಿಕರ ಯೂನಿಯನ್, ದಲಿತ-ಮುಸ್ಲಿಂ ಮಹಿಳಾ ಒಕ್ಕೂಟ, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿ, ಸಖಿ ಒನ್ ಸ್ಟಾಪ್ ಸೆಂಟರ್, ದಾವಣಗೆರೆ ಇವರ ಸಹಯೊಗದೊಂದಿಗೆ ನಗರದ ದೇವರಾಜು ಅರಸು ಬಡಾವಣೆಯಲ್ಲಿನ ನೆರಳು ಬೀಡಿ ಕಾರ್ಮಿಕರ ಯೂನಿಯನ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕೌಟುಂಬಿಕ ದೌಜನ್ಯ ತಡೆ ಕಾಯಿದೆ ಮತ್ತು ಮಹಿಳೆಯರಿಗೆ ರಕ್ಷಣೆಯ ಕಾನೂನುಗಳು ಹಾಗೂ ಜೀವನಾಂಶ ಕುರಿತು ಕಾರ್ಯಕ್ರಮದಲ್ಲಿ ಗೃಹ ಹಿಂಸೆ ಕಾಯಿದೆ ಏನು, ಎತ್ತ ಎನ್ನುವ ಪುಸ್ತಕ ಬಿಡುಗಡೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂವಿಧಾನವು ಪ್ರತಿ ಪ್ರಜೆಯು ಅನ್ಯಾಯಕ್ಕೆ ಒಳಗಾದಾಗ ನ್ಯಾಯ ದೊರಕಿಸಿಕೊಳ್ಳುವ ಸಮಾನ ಅವಕಾಶ ಕೊಟ್ಟಿದೆ. ಆದರೆ, ಕಾನೂನು ಸಾಕ್ಷರತೆ ತೀರಾ ಕಡಿಮೆ ಇರುವ ನಮ್ಮ ದೇಶದಲ್ಲಿ ಹಕ್ಕುಗಳ ಬಗೆಗಿನ ಸರಿಯಾದ ತಿಳುವಳಿಕೆಯ ಕೊರತೆಯಿಂದ ಮಹಿಳೆಯರು ನ್ಯಾಯ ದೊರಕಿಸಿಕೊಳ್ಳುವಲ್ಲಿ ವಿಫಲರಾಗುತ್ತಿದ್ದಾರೆ ಎಂದರು.
ಮಹಿಳೆಯರ ಕಾನೂನುಗಳೆಂದರೆ ಅವು ಮಹಿಳಾ ಸಮಸ್ಯೆಗಳ ಪ್ರಸ್ತಾಪವೇ ಅಗಿದೆ. ವರದಕ್ಷಿಣೆ, ಕಿರುಕುಳ, ವರದಕ್ಷಿಣೆ ಸಾವು, ವಿಚ್ಛೇಧನ, ಮರ್ಯಾದ ಹತ್ಯೆ, ಕೌಟುಂಬಿಕ ದೌರ್ಜನ್ಯ, ಹೆಣ್ಣು ಭ್ರೂಣ ಹತ್ಯೆ, ಅತ್ಯಾಚಾರ ಇವುಗಳಿಗೆ ಸಂಬAಧಿಸಿದ ಕಾನೂನು ಸ್ವರೂಪವೇ ಈ ಸಮಸ್ಯೆಗಳು ಸಮಾಜವನ್ನು ಆವರಿಸಿಕೊಂಡಿರುವ ಬಗೆಯನ್ನು ಅನಾವರಣಗೊಳಿಸುತ್ತವೆ ಎಂದು ಹೇಳಿದರು.
12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಪುರುಷರಿಗೆ ಸರಿಸಮಾನವಾದ ಪ್ರಾತಿನಿಧ್ಯ ಕೊಡಲಾಗಿತ್ತು. ಆದರೆ, ಭಾರತದಲ್ಲಿ ಪ್ರಜಾಪ್ರಭುತ್ವ ಬಂದು 7 ದಶಕಗಳೇ ಕಳೆದರೂ ಶಾಸನ ಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯದ ಕೊರತೆ ಎದ್ದು ಕಾಣುತ್ತಿದೆ. ಮಹಿಳೆಯರ ಪರ ಕಾನೂನುಗಳು, ಯೋಜನೆಗಳು ಅನುಷ್ಠಾನಗೊಳ್ಳಲು ಎಲ್ಲಾ ರಾಜಕೀಯ ಪಕ್ಷಗಳಲ್ಲಿನ ಮಹಿಳೆಯರು ತಮ್ಮ ಪ್ರಾತಿನಿಧ್ಯಕ್ಕಾಗಿ ಹೋರಾಟ ಮಾಡಬೇಕೆಂದು ಕರೆ ನೀಡಿದ ಅವರು, ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ ವರದಿ ಪ್ರಕಾರ ಭಾರತೀಯ ಕುಟುಂಬಗಳಲ್ಲಿ 70ರಷ್ಟು ಮಹಿಳೆಯರು ಗೃಹ ಹಿಂಸೆಗಳಿಗೆ ತುತ್ತಾಗುತ್ತಿರುವುದು ವಿಷಾಧನೀಯ ಸಂಗತಿ ಎಂದು ತಿಳಿಸಿದರು.
ನೆರಳು ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷೆ ಜಬೀನಾ ಖಾನಂ ಅಧ್ಯಕ್ಷತೆ ವಹಿಸುವರು. ಕಾರ್ಯದರ್ಶಿ ಎಂ.ಕರಿಬಸಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಯ ಅಧಿಕಾರಿ ಪೂರ್ಣಿಮಾ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಪ್ಯಾನಲ್ ವಕೀಲರಾದ ಅನ್ನಪೂರ್ಣ, ಬಾಲ ನ್ಯಾಯ ಮಂಡಳಿಯ ಸದಸ್ಯೆ ವಿಜಯಮಾಲ ಮುಂಡಾಸದ, ಸಖಿ ಒನ್ ಸ್ಟಾಪ್ ಸೆಂಟರ್‌ನ ವಕೀಲರಾದ ತಂಜಿಮಾ ಕೌಸರ್ ಇವರೆಲ್ಲರೂ ಮಹಿಳಾ ಪರ ಇರುವ ಕಾನೂನು ಕುರಿತು ಉಪನ್ಯಾಸ ನೀಡಿದರು. ಈ ವೇಳೆ ಮೇಘಾ, ನೆರಳು ಬೀಡಿ ಕಾರ್ಮಿಕರ ಯೂನಿಯನ್‌ನ ಹಸಿನಾಬಾನು ಇತತರು ಇದ್ದರು.