ಕುಂದುವಾಡದಲ್ಲಿ ಜಮೀನು ನೀಡಲು ರೈತರ ಆಕ್ಷೇಪ: ದೂಡಾಕ್ಕೆ ಮುತ್ತಿಗೆ ಹಾಕಿದ ರೈತರು

ದಾವಣಗೆರೆ: ದೂಡಾದಿಂದ ವಸತಿ ಯೋಜನೆಗೆ ಕುಂದುವಾಡದಲ್ಲಿ 53 ಎಕರೆ ಭೂಮಿ ನೀಡುವ ಬಗ್ಗೆ ರೈತರು ಜಮೀನು ಕೊಡಲು ಒಪ್ಪಿಕೊಂಡಿದ್ದಾರೆಂದು ದೂಡಾ ಅಧ್ಯಕ್ಷರು ನೀಡಿರುವ ಹೇಳಿಕೆಗೆ ಅಲ್ಲಿನ ರೈತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ರೈತರ ಒಪ್ಪಿಗೆ ಪಡೆಯದೆ ದೂಡಾ ಇಲಾಖೆ ದರ ನಿಗದಿ ಮಾಡಿರುವುದನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಹಳೇಕುಂದವಾಡ ಗ್ರಾಮದ ರೈತರು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ದೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ್, ಎಸಿ ಮಮತಾ ಹೊಸ ಗೌಡರ್ ಅವರಿಗೆ ಇಂದು ಬೆಳಗ್ಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ರೈತರು,
ಹಳೇ ಕುಂದವಾಡದ ಗ್ರಾಮಸ್ಥರು, ಕೃಷಿಯನ್ನೇ ನಂಬಿಕೊಂಡು ಜೀವನ ನಡೆಸುವವವರೇ ಹೆಚ್ಚಾಗಿದ್ದೇವೆ.. ನಾವುಗಳು ಈ ಹಿಂದೆ 2018-19 ರಲ್ಲಿ ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದವರು ನಮ್ಮ ಗ್ರಾಮದಲ್ಲಿ ನಗರಾಭಿವೃದ್ಧಿ ಯೋಜನೆಯಡಿಯಲ್ಲಿ ಹಳೇಕುಂದುವಾಡ ಗ್ರಾಮದ ಸರ್ವೆ ನಂ, 125 ರಿಂದ 139/7 ರ ತನಕ ಒಟ್ಟು 59,19 ಎಕರೆ ಜಮೀನಿನಲ್ಲಿ ನಾಗರಿಕರ ವಾಸಕ್ಕೆ ಹೊಸ ಲೇಔಟ್ ನಿರ್ಮಾಣ ಮಾಡುವುದಾಗಿ ಹೇಳಿ ನಮ್ಮಗಳ ಜಮೀನುಗಳನ್ನು ಒಳ್ಳೆಯ ಬೆಲೆ ಕೊಟ್ಟು ಖರೀದಿ ಮಾಡಿಕೊಳ್ಳುತ್ತೇವೆ ಎಂದು  ಒಪ್ಪಿಗೆ ಪತ್ರವನ್ನು ಬರೆಯಿಸಿಕೊಂಡಿದ್ದರು.

ಇದರಲ್ಲಿ, ಕೆಲವು ರೈತರು ಕೋರ್ಟ್ ಗೆ ಹೋಗಿ ಶಾಶ್ವತ ನಿರ್ಬಂಧಕಾಜ್ಞೆಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಆಗಸ್ಟ್ ತಿಂಗಳ ಮೊದಲನೇ ವಾರದಲ್ಲಿ ನಮ್ಮ ಜಮೀನುಗಳಿಗೆ ಏಕಾಏಕಿ ಬಂದು ಅಳತೆ ಮಾಡಿ ಕಂಬಗಳನ್ನು ಹಾಜಲಾಗಿದೆ. ಅಲ್ಲದೇ “ದರ ನಿರ್ಧರಣಾ ಸಲಹಾ ಸಮಿತಿ ಸಭೆಯನ್ನು  ಕರೆದಾಗ ಸಭೆಯಲ್ಲಿ ಒತ್ತಾಯ ಪೂರ್ವಕವಾಗಿ ಯಾವ ರೈತರ ಜಮೀನುಗಳನ್ನು ಪಡೆದುಕೊಳ್ಳುವುದಿಲ್ಲ. ನಿಮಗೆ ಕೊಡಬೇಕೆನಿಸಿದರೆ ಮಾತ್ರ ಖರೀದಿ ಮಾಡಿಕೋಳ್ಳುತ್ತೇವೆ ಎಂದು ಹೇಳಲಾಗಿತ್ತು. ಅಂದು ಸಭೆಯಲ್ಲಿ ಜಮೀನು ದರ ನಿಗದಿಯಾಗದೇ ಸಭೆ ಅಂತ್ಯ ಗೊಂಡಿತ್ತು. ಆದರೆ ಇದೀಗ ಕುಂದುವಾಡ ರೈತರು ವಸತಿ ಯೋಜನೆಗೆ ಸಮ್ಮತಿ ಸೂಚಿಸಿದ ಬಗ್ಗೆ ಹಾಗೂ ಎಕರೆಗೆ ರೂ .1.18 ಕೋಟಿ ಜಮೀನಿನ ಬೆಲೆ ನಿಗದಿಯಾಗಿರುತ್ತದೆ ಎಂದು ಹೇಳಿರುವುದು ಸತ್ಯಕ್ಕೆ ದೂರ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯಾವಾಗ ದರ ನಿಗದಿ ಸಭೆ ಮಾಡಿದ್ದಾರೆ ಎಂಬುದು ರೈತರಿಗೆ ಗೊತ್ತಿಲ್ಲ, ದರ ನಿಗದಿ ಎರಡನೇ ಸಭೆಗೆ ಬಹುತೇಕ ರೈತರನ್ನ ಆಹ್ವಾನಿಸದೇ, ಕೇವಲ ನಾಲ್ಕೈದು ಮಂದಿ ರೈತರ ಒಪ್ಪಿಗೆ ಪಡೆದು ಎಲ್ಲಾ ರೈತರ ಒಪ್ಪಿಗೆ ಪಡೆಯಲಾಗಿದೆ, 53 ಎಕರೆ ಲೇ ಔಟ್ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ದೂಡಾ ಅಧ್ಯಕ್ಷರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಇದು ರೈತರನ್ನು ಒಕ್ಕಲೆಬ್ಬಿಸುವ ಕುತಂತ್ರ ಅಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲಾ ರೈತರ ಅಭಿಪ್ರಾಯ ಪಡೆದು ಸಭೆಯಲ್ಲಿ ತಿರ್ಮಾನಿಸಬೇಕಾಗಿತ್ತು, ಆದರೆ  ನಮ್ಮನ್ನು ಕರೆಯಿಸದೆ ತಾವೇ ಜಮೀನು ದರ ನಿಗದಿ ಮಾಡಿರುವುದನ್ನು ನಾವುಗಳು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಯಾವುದೇ ರೈತರನ್ನು ಸಭೆಗೆ ಕರೆಯಿಸದೆ  ಸಭೆ ಮಾಡಿ, ಪತ್ರಿಕಾ ಪ್ರಕಟಣೆ ನೀಡಿರುವುದು ಅಕ್ಷಮ್ಯ ಅಪರಾಧವಾಗಿರುತ್ತದೆ. ಆದ್ದರಿಂದ ನೀಡಿರುವ ಪತ್ರಿಕಾ ಪ್ರಕಟಣೆಯನ್ನು ತಕ್ಷಣವೇ ವಾಪಸ್ಸು ಪಡೆಯಬೇಕು. ಇಲ್ಲದಿದ್ದಲ್ಲಿ ರೈತರ ಜಮೀನುಗಳನ್ನು ಅಕ್ರಮವಾಗಿ ಸ್ವಾಧೀನ ಪಡೆಯಲು ಪ್ರಯತ್ನಿಸುತ್ತಿರುವವರ ವಿರುದ್ಧ ಉಗ್ರ ಹೋರಾಟ ಮಾಡುವುದಾಗಿ ರೈತರು ಎಚ್ಚರಿಕೆ ನೀಡಿದರು.

ಇದೇ ವೇಳೆ ಮಾತನಾಡಿದ ಡಿಸಿ ಮಹಾಂತೇಶ್ ಬೀಳಗಿ, ಜಮೀನು ಮಾರಾಟ ಮಾಡುವವರು ಮಾಡಲಿ, ಆದರೆ ಯಾವುದೇ ಕಾರಣಕ್ಕೂ ರೈತರ ಒಪ್ಪಿಗೆ ಇಲ್ಲದೇ ಸ್ವಾಧೀನ ಮಾಡಿಕೊಳ್ಳುವುದಿಲ್ಲ ಎಂದು ರೈತರಿಗೆ ಭರವಸೆ ನೀಡಿದರು.

ಈ ವೇಳೆ ಹಳೇ ಕುಂದವಾಡದ ಸುಮಾರು ೫೦ಕ್ಕೂ ಹೆಚ್ಚು ರೈತರು ಇದ್ದರು.

Leave a Reply

Your email address will not be published. Required fields are marked *

error: Content is protected !!