ಹನುಮಂತಾಪುರ ಗೊಲ್ಲರಹಟ್ಟಿ, ಉರ್ದು ಶಾಲೆ ಶಿಕ್ಷಕ ಹಲವು ಪ್ರಕರಣಗಳಲ್ಲಿ ಭಾಗಿ, ಅಮಾನತು
ದಾವಣಗೆರೆ: ಜಗಳೂರು ತಾಲ್ಲೂಕಿನ ಹನುಮಂತಾಪುರ ಗೊಲ್ಲರಹಟ್ಟಿ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ ಸಹ ಶಿಕ್ಷಕ ಆಂಜನೇಯನಾಯ್ಕ ಇವರನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ವೆಂಕಟೇಶ್ ಎಂ.ವಿ ಆದೇಶಿಸಿದ್ದಾರೆ.
ಶಿಕ್ಷಕರಾಗಿದ್ದ ಇವರು ಜಾತಿ, ಜಾತಿಗಳ ಮಧ್ಯೆ ವೈಷಮ್ಯ ಮೂಡಿಸುವುದು, ಶಾಲೆಗೆ ಗೈರು ಹಾಜರಾಗುವುದು ಮತ್ತು ರಾಜಕೀಯ ಪಕ್ಷಗಳ ಜೊತೆ ಗುರುತಿಸಿಕೊಳ್ಳುವುದು ಹಾಗೂ ಬೇರೆ ಶಿಕ್ಷಕರ ಮೇಲೆ ಒತ್ತಡ ಹೇರುವುದು, ಇವರ ಪ್ರವೃತ್ತಿಯಾಗಿರುತ್ತದೆ. ಈ ಬಗ್ಗೆ ಇವರ ಮೇಲೆ ಸಾರ್ವಜನಿಕರು ದೂರು ನೀಡಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಬೇರೆ ತಾಲ್ಲೂಕುಗಳಿಗೆ ವರ್ಗಾವಣೆ ಮಾಡುವಂತೆ ದೂರು ಸಲ್ಲಿಕೆಯಾಗಿರುತ್ತದೆ.
ಮತ್ತು ಈ ಶಿಕ್ಷಕರ ಮೇಲೆ ಜಗಳೂರು ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿರುತ್ತದೆ.
ಇವರ ನಡತೆ ಕುರಿತಂತೆ ಪೊಲೀಸ್ ಅಧೀಕ್ಷಕರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ವರದಿ ಸಲ್ಲಿಕೆಯಾಗಿರುತ್ತದೆ. ಇವರು ಕರ್ನಾಟಕ ನಾಗರಿಕ ಸೇವಾ ನಡತೆ ನಿಯಮಾವಳಿಗೆ ವಿರುದ್ದವಾಗಿ ನಡೆದುಕೊಂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಸೇವೆಯಿಂದ ಅಮಾನತು ಮಾಡಿ ಆದೇಶಿಸಲಾಗಿದೆ.