ಲೋಕಲ್ ಸುದ್ದಿ

ನಗರವನ್ನು ವಿಶಿಷ್ಟ ಜೀವ ವೈವಿಧ್ಯದ ಹಸಿರು ನಗರವನ್ನಾಗಿಸಲು ಸಹಕರಿಸಿ : ಡಾ. ವೆಂಕಟೇಶ್ ಎಂ.ವಿ

ನಗರವನ್ನು ವಿಶಿಷ್ಟ ಜೀವ ವೈವಿಧ್ಯದ ಹಸಿರು ನಗರವನ್ನಾಗಿಸಲು ಸಹಕರಿಸಿ : ಡಾ. ವೆಂಕಟೇಶ್ ಎಂ.ವಿ

ದಾವಣಗೆರೆ : ಧೂಳು ಮುಕ್ತ ನಗರ ಎಂಬ ಕಳಂಕವನ್ನು ತೊಡೆದುಹಾಕಲು ನಾವು ಹೆಚ್ಚು ಮರ ಗಿಡಗಳನ್ನು ಬೆಳೆಸಬೇಕು ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ತಿಳಿಸಿದರು.
ಶುಕ್ರವಾರ ನಗರದ ಕೆ.ಎಚ್.ಬಿ ತುಂಗಾಭದ್ರ  ಬಡಾವಣೆಯಲ್ಲಿ ಜರುಗಿದ ವನಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ವಿಶಿಷ್ಟ  ಜೀವ ವೈವಿಧ್ಯದ ಹಸಿರು ನಗರವನ್ನಾಗಿ ಮಾಡಲು ಪಣ ತೊಡಲು ಹಾಗೂ ಮಾಲಿನ್ಯ ಮುಕ್ತ ನಗರ ಮಾಡಲು  ಎಲ್ಲರ ಸಹಕಾರ ಅಗತ್ಯವಾಗಿದೆ.

ನಾಗರಿಕ ಸಮಾಜದ ಪ್ರತಿಯೊಬ್ಬರು ಸಹ ಗಿಡಗಳನ್ನು ಮಕ್ಕಳಂತೆ ಪೋಷಿಸಿ ಬೆಳೆಸಬೇಕಾಗಿದೆ. ಉತ್ತಮ ಪರಿಸರದಿಂದ ಜನರ ಆರೋಗ್ಯ ರಕ್ಷಣೆ ಸಾಧ್ಯವಾಗಲಿದ್ದು ಈ ನಿಟ್ಟಿನಲ್ಲಿ ಪ್ರತಿಯೊಬ್ಬ ನಾಗರೀಕರು ಗಿಡ, ಮರಗಳನ್ನು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆ ಮಾಡಲು ಮುಂದಾಗಬೇಕೆಂದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಮಾತನಾಡಿ ಮನುಷ್ಯ ಬದುಕಲು ಮಣ್ಣು, ನೀರು ಮತ್ತು  ಗಾಳಿ ಬಹಳ ಮುಖ್ಯ, ಮನುಷ್ಯನಿಗೆ ಅರಿವಿಲ್ಲದೆಯೇ ಕಾಡು ಕಡಿಯುತ್ತಾ ತನ್ನ ಅವಸಾನವನ್ನು ತಾನೇ ತಂದುಕೊಳ್ಳುತ್ತಿದ್ದಾನೆ.

ಈಗಾಗಲೇ ಸ್ಮಾರ್ಟ್ ಸಿಟಿ ಎಂದು ಹೆಸರಾದ ದಾವಣಗೆರೆ ನಗರ  ಇಂದು ಮಾಲಿನ್ಯ ನಗರದ ಪಟ್ಟಿಗೆ ಸೇರಿದೆ. ದೇಶದ ಮಾಲಿನ್ಯ ಮುಕ್ತ ನಗರದ ಶ್ರೇಯಾಂಕದಲ್ಲಿ 136 ನೇ ಸ್ಥಾನದಲ್ಲಿರುವುದು ವಿಷಾದದ ಸಂಗತಿ. ನಮ್ಮ ನಾಳೆಗಳನ್ನು ನಾವು ಮುಂದಿನ ಪೀಳಿಗೆಗೆ ಉಳಿಸಬೇಕಿದೆ. ಈ ದಿಸೆಯಲ್ಲಿ ಗ್ರಾಸಿಂ ಇಂಡಸ್ಟ್ರೀಸ್ ರವರು ಪರಿಸರ ಉಳಿಸುವಲ್ಲಿ ಸಾಮಾಜಿಕ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯವಾದುದು ಎಂದರು.ವನಮಹೋತ್ಸವ ಅಂಗವಾಗಿ ಕೆ.ಎಚ್.ಬಿ. ತುಂಗಾಭದ್ರ  ಬಡಾವಣೆಯಲ್ಲಿ ನಾಲ್ಕೂವರೆ ಎಕರೆ ವಿಸ್ತಾರದ ಜಾಗದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡಲಾಯಿತು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಕರಣ್ಣನವರ, ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಅರುಣಕುಮಾರ್ ಎಲ್. ಹೆಚ್, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಡಾ.ಲಕ್ಷ್ಮಿಕಾಂತ, ಡಾ.ಮಂಜುನಾಥ, ಪೊಲೀಸ್ ಅಧಿಕಾರಿ ಯಶವಂತ್, ಗ್ರಾಸಿಂ ಇಂಡಸ್ಟ್ರೀಸ್ ನ ಮುಖ್ಯಸ್ಥ ಡಾ.ಅಜಯ್ ಗುಪ್ತಾ ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

Most Popular

To Top