ಹೋಳಿ ಸಂಭ್ರಮ: ಬಣ್ಣದಲ್ಲಿ ಮಿಂದೆದ್ದ ದಾವಣಗೆರೆ

ಹೋಳಿ ಸಂಭ್ರಮ: ಬಣ್ಣದಲ್ಲಿ ಮಿಂದೆದ್ದ ದಾವಣಗೆರೆ

ದಾವಣಗೆರೆ: ನಗರದಲ್ಲಿ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಮಕ್ಕಳು, ಯುವಕರು, ಯುವತಿಯರು ಬಣ್ಣದಾಟದಲ್ಲಿ ಮಿಂದಿದ್ದರು. ಬೆಳಿಗ್ಗೆ 9 ರಿಂದ ಮಧ್ಯಾಹ್ನ 12ರವರೆಗೆ ಹೋಳಿ ಅಬ್ಬರ ಹೆಚ್ಚಾಗಿತ್ತು.

ಮಕ್ಕಳು ಮನೆಗಳ ಮುಂದೆ ಪಿಚಕಾರಿಯಲ್ಲಿ ಬಣ್ಣದಿಂದ ಮಿಶ್ರಣ ಮಾಡಿದ ನೀರಿನಿಂದ ಚಿಮ್ಮಿಸಿದರೆ, ನಗರದ ರಾಂ ಅಂಡ್ ವೃತ್ತದಲ್ಲಿ ಡಿಜೆಯ ಅಬ್ಬರಕ್ಕೆ ಕುಣಿದ ಯುವಕ–ಯುವತಿಯರು ಹುಚ್ಚೆದ್ದು ಕುಣಿದರು.

ರಾಂ ಅಂಡ್ ಕೋ ವೃತ್ತದಲ್ಲಿ ಕುಣಿತದ ಕಿಚ್ಚು ಹೆಚ್ಚಿಸಲು ಖ್ಯಾತ ನಟರ ಹಾಡುಗಳನ್ನು ಹಾಕಲಾಗಿತ್ತು. ಜನರು ಕೇಕೆ ಹಾಕಿ ಕುಣಿದು ಕುಪ್ಪಳಿಸಿದರು. ಶರ್ಟ್‌ಗಳನ್ನು ಹರಿದು ಮೇಲಕ್ಕೆ ಎಸೆಯುತ್ತಿದ್ದರು. ವಿದ್ಯುತ್‌ ತಂತಿಗೆ ಸಿಲುಕಿಕೊಂಡ ನೂರಾರು ಅಂಗಿಗಳು ತೋರಣದಂತೆ ಕಂಡುಬಂದವು.

ವಚನಾಮೃತ ಮಹಿಳಾ ಬಳಗದಿಂದ ನೈಸರ್ಗಿಕ ಹೋಳಿ: ಹೋಳಿ ಹಬ್ಬದ ಪ್ರಯುಕ್ತ ಎಸ್.ಎಸ್. ಲೇಔಟ್‌ನ ಮಹಿಳೆಯರು ವಚನಾಮೃತ ಮಹಿಳಾ ಬಳಗದಿಂದ ನೈಸರ್ಗಿಕ ಹೋಳಿ ಆಚರಿಸಲಾಯಿತು.

ಹಣ್ಣು, ತರಕಾರಿ, ಸೊಪ್ಪುಗಳಿಂದ ತಯಾರಿಸಿದ ಮಿಶ್ರಣಗಳನ್ನು ಒಬ್ಬರಿಗೊಬ್ಬರು ಹಚ್ಚಿ ಖುಷಿಪಟ್ಟರು.  ಟೊಮೆಟೊ, ಕ್ಯಾರೆಟ್, ಬೀಟ್‌ರೂಟ್‌, ಸೌತೇಕಾಯಿಗಳೇ ಬಣ್ಣಗಳನ್ನು ಬಿಂಬಿಸಿದವು. ಅಕ್ಕಿ ಹಾಗೂ ಕಡಲೆ ಹಿಟ್ಟು ಕಲ್ಲಂಗಡಿ, ಬಾಳೆಹಣ್ಣುಗಳು, ದಾಸವಾಳದ ಎಲೆ, ಎಲ್ಲವನ್ನೂ ಮಿಶ್ರಣ ಮಾಡಿ ನೀರಿನಲ್ಲಿ ಮಿಶ್ರಣ ಮಾಡಿ ಪರಸ್ಪರ ಅದ್ದಿಕೊಂಡು ಹೋಳಿ ಆಚರಿಸಿದರು.

ಸೌಮ್ಯ ಸತೀಶ್ ಅವರ ನೇತೃತ್ವದಲ್ಲಿ ಮಧು, ಶಾಂತಾ, ರತ್ನಾ, ಶ್ರೇಯಾ, ಶಿಲ್ಪಾ, ಸರಿತಾ, ಸುರೇಖಾ ಸುಧಾ, ಭಾರತಿ, ಸರೋಜಾ, ಹೇಮಾವತಿ, ಕಾತ್ಯಾಯಿನಿ, ಕವಿತಾ, ಸೌಮ್ಯ ಕಿರಣ್, ಶ್ವೇತಾ ಕಿರಣ್ ಗೀತಾ, ದೀಪಾ, ತನುಜಾ, ಸುಮಾ ಮುಂತಾದವರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!