ಮಾ.15ರೊಳಗೆ ಮೀಸಲಾತಿ ಘೋಷಿಸದಿದ್ದರೆ ಚುನಾವಣೆಯಲ್ಲಿ ಉತ್ತರ: ಆಡಳಿತಾರೂಢ ಪಕ್ಷಕ್ಕೆ ಪಂಚಮಸಾಲಿ ಲಿಂಗಾಯತರ ಖಡಕ್ ಸಂದೇಶ..

ಪಂಚಮಸಾಲಿ ಲಿಂಗಾಯತರ ಖಡಕ್ ಸಂದೇಶ.

ಬೆಂಗಳೂರು: ರಾಜ್ಯ ಬಿಜೆಪಿಗೆ ಪ್ರಬಲ ಪಂಚಮಸಾಲಿ ಲಿಂಗಾಯತ ಸಮುದಾಯ ಶಾಕ್ ನೀಡಿದೆ. ಬಹುಕಾಲದಿಂದ ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟಕ್ಕೆ ಕ್ಯಾರೇ ಎನ್ನದಿರುವ ಬಿಜೆಪಿ ಸರ್ಕಾರದ ನಿಲುವಿನ ವಿರುದ್ಧ ಪಂಚಮಸಾಲಿ ಲಿಂಗಾಯತರು ತೊಡೆ ತಟ್ಟಿದ್ದಾರೆ. ಮುಂಬರುವ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುವುದಾಗಿ ಆಡಳಿತಾರೂಢ ಬಿಜೆಪಿಗೆ ಕಡಕ್ ಸಂದೇಶ ರವಾನಿಸಿದ್ದಾರೆ. ಈ ಸಂಬಂಧ ಶುಕ್ರವಾರ ನಡೆದ ಪ್ರಮುಖರ ಸಭೆ ಕುತೂಹಲದ ಕೇಂದ್ರಬಿಂದುವಾಯಿತು.
ಪಂಚಮಸಾಲಿ ಸತ್ಯಾಗ್ರಹದ ರಾಜ್ಯ ಕಾರ್ಯಕಾರಿಣೀ ನಿರ್ಣಯದಂತೆ ತಮ್ಮ ಸಮುದಾಯಕ್ಕೆ 2ಎ ಮೀಸಲಾತಿ ಘೋಷಣೆಯಾಗದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಕೂಡಲಸಂಗಮದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿ ತಿಳಿಸಿದ್ದಾರೆ.


ಲಿಂಗಾಯತ ಪಂಚಮಸಾಲಿ ಗೌಡ ಮಲೆಗೌಡ ದೀಕ್ಷಾ ಸಮಾಜಕ್ಕೆ 2ಎ ಮೀಸಲಾತಿಯನ್ನು ಮಾರ್ಚ್ 15ರ ಒಳಗಾಗಿ ಅನುಷ್ಟಾನಗೊಳಿಸಬೇಕೆಂದು ಸರ್ಕಾರಕ್ಕೆ ಗಡುವು ನೀಡಲಾಗಿದೆ. ಒಂದು ವೇಳೆ ಘೋಷಣೆ ಮಾಡದಿದ್ದರೆ, ಬೆಂಗಳೂರು ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ಧಾರಣ ಸತ್ಯಾಗ್ರಹವನ್ನು ಮಾರ್ಚ್ 15ರಂದು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ತಮ್ಮ ಹೋರಾಟವನ್ನು ಮತ್ತೊಂದು ಮಜಲಿಗೆ ಕೊಂಡೊಯ್ಯುವುದಾಗಿ ತಿಳಿಸಿದ್ದಾರೆ.
ಸರ್ಕಾರವು ಯಾವ ರೀತಿಯಾಗಿ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡಲಾರದೇ ಎರಡು ವರ್ಷಗಳ ಕಾಲ ವಿಳಂಬ ನೀತಿ ಅನುಸರಿಸಿ, ಮಾಡಿದ ಮೊಸವನ್ನು ಜನತಾ ನ್ಯಾಯಲಯ ಮುಂದೆ ಕೊಂಡೊಯಲು ನಿರ್ಣಯ ಕೈಗೊಳ್ಳಲಾಗಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳೂ ಈ ಸಂಬಂಧ ಹೋರಾಟಕ್ಕೆ ಸಾಕ್ಷಿಯಾಗಲಿವೆ ಎನ್ನುವ ಮೂಲಕ ಆಡಳಿತಾರೂಢ ಬಿಜೆಪಿಗೆ ಸ್ವಾಮೀಜಿಗಳು ಶಾಕ್ ನೀಡಿದ್ದಾರೆ.
ಈ’ನಡುವೆ, ಶಿವರಾತ್ರಿಯನ್ನು ಹಬ್ಬವನ್ನಾಗಿ ಆಚರಿಸದೆ, ಹೋರಾಟದಲ್ಲೊಂದು ಕೈಂಕರ್ಯ ಎಂಬಂತೆ ಆಚರಿಸಲಾಗುತ್ತದೆ ಎಂದು ತಿಳಿಸಿರುವ ಶ್ರೀಗಳು, ಶಿವರಾತ್ರಿಯನ್ನು ರಾತ್ರಿ 8 ಗಂಟೆಯಿಂದ ತಮ್ಮ ಹೋರಾಟದ ಅಖಾಡವಾಗಿರುವ ಫ್ರೀಡಂ ಪಾರ್ಕ್ನಲ್ಲಿ ಸಾಮೂಹಿಕವಾಗಿ ಲಿಂಗಪೂಜೆ ಮೂಲಕ ನಡೆಸಲು ಕರೆಕೊಡಲಾಗಿದೆ ಎಂದವರು ತಿಳಿಸಿದ್ದಾರೆ.


ಕಾರ್ಯಕಾರಿಣಿಯಲ್ಲಿ ಖಡಕ್ ನಿರ್ಣಯ:
 ಫೆಬ್ರವರಿ 16ರಂದು ಸಂಜೆ ಬೆಂಗಳೂರು ಖಾಸಗಿ ಹೊಟೆಲ್ನಲ್ಲಿ ಕಾರ್ಯಕಾರಿಣಿ ಸಭೆ ನಡೆದಿದೆ. ಸತ್ಯಾಗ್ರಹವು 34 ದಿನ ಕಳೆದರೂ ಸರ್ಕಾರವು ಮೀಸಲಾತಿ ಘೋಷಿಸದಿರುವುದನ್ನು ಕಾರ್ಯಕಾರಿಯಲ್ಲ ಖಂಡಿಸಲಾಯಿತು. ಮುಂದಿನ ಚುನಾವಣೆಯಲ್ಲಿ ಯಾವ ನಿಲುವು ತಾಳಬೇಕೆಂಬ ಬಗ್ಗೆ ಹಾಗೂ ಹಾಗೂ ಮುಂದಿನ ಹೋರಾಟದ ಕುರಿತು ಚರ್ಚಿಸಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು ಎಂದು ಶ್ರೀಗಳು ತಿಳಿಸಿದ್ದಾರೆ.
 ಅಖಿಲ ಭಾರತ ಲಿಂಗಾಯತ ಪಂಚಮಸಾಲಿ, ಗೌಡ, ಮಲೆಗೌಡ, ದೀಕ್ಷಾ ಲಿಂಗಾಯತ ಪಂಚಮಸಾಲಿ ಮೀಸಲಾತಿ ಚಳುವಳಿ ಸಮಿತಿಯ ಸಹಯೋಗದಲ್ಲಿ ಪ್ರಥಮ ಜಗದ್ಗುರು ಬಸವಮೃತ್ಯುಂಜಯ ಸ್ವಾಮೀಜಿಯವರು ಈ ನಿರ್ಣಯವನ್ನು ಪ್ರಕಟಿಸಿದ್ದಾರೆ. ಚಳುವಳಿಯ ಸ್ವಾಗತ ಸಮಿತಿಯ ಅಧ್ಯಕ್ಷ ಬಸವನಗೌಡ ಪಾಟೀಲ್ ಯಾತ್ನಳ್ ಹಾಗೂ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್, ಶಾಸಕರಾದ ಸಿದ್ದು ಸವದಿ, ಮಹೇಶ್ ಕುಮಟಳ್ಳಿ, ಎಂ.ವೈ.ಪಾಟೀಲ್, ಮಾಜಿ ಸಚಿವರಾದ ವಿನಯ ಕುಲಕರ್ಣಿ, ಎ.ಬಿ.ಪಾಟೀಲ್ , ಶಶಿಕಾಂತ್ ನಾಯಕ, ಮಾಜಿ ಶಾಸಕರಾದ ಎಚ್.ಎಸ್.ಶಿವಶಂಕರ, ನಂದಿಹಳ್ಳಿ ಹಾಲಪ್ಪ ಮೊದಲಾದ ಜನಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!