ಏನ್ ಗೊತ್ತಾ…! ಇದೆಲ್ಲಾ ಗೊತ್ತಿರೋದೆ ಬಿಡಿ..!  -ಸೂರಿ.. 

ಗೊತ್ತಿರೋದೆ ಬಿಡಿ

ಬೆಂಗಳೂರು: ಒಂದು ವಿಷ್ಯಾ ಗೊತ್ತಾ. ಅಂತಾ ಶುರುವಾಗೋ ಮಾತು ಕೊನೆಯಲ್ಲಿ ಅಯ್ಯೋ ಗೊತ್ತಿಲ್ದೇ ಇರೋದೆಲ್ಲಾ ನಮಗ್ಯಾಕೆ ಬಿಡ್ರೀ ಅನ್ನೋವರೆಗೂ ಮುಂದುವರೆದು ಇನ್ನೂ ನಡೀತಾ ಇದೆ ಆಂದ್ರೆ, ಗೊತ್ತಿರೋ ಇಬ್ರು ಏನೋ ಗೊತ್ತುಗುರಿ ಇಲ್ದೇ ಮಾತಾಡಿಕೊಳ್ತಾ ಇದಾರೆ ಅಂದ್ಕೊಂಡ್ರಾ,,? ಹಂಗೇನಿಲ್ಲಾರೀ ಗೊತ್ತಿರೋದನ್ನೆಲ್ಲಾ ಗೊತ್ತಿರೋರ ಮುಂದೆ ಹೇಳ್ಕೊಂಡು ಅವ್ರಿಗೂ ಒಂಚೂರು ಗೊತ್ತು ಮಾಡಿಸ್ತಾ ಇರ‍್ತಾರೆ ಅಷ್ಟೇ..

ನೀವೂ ಕೂಡಾ ಅವ್ರಿಗೆ ಗೊತ್ತಿರೋರೇ ಆದ್ರೆ ಅವ್ರ ಜೊತೆ ಸೇರ‍್ಕೊಂಡು ಒಂಚೂರು ಗೊತ್ತುಮಾಡ್ಕೊಳಿ, ಗೊತ್ತಿಲ್ದೇ ಇರೋರಾದ್ರೆ ಗೊತ್ತಿರೋ ದಾರಿ ನೋಡ್ಕೊಂಡು ಹೊರಟುಬಿಡಿ ಅಷ್ಟೇ…

ಇದೇನೋ ಗೊತ್ತಿರೋನು ಏನೋ ಹೇಳ್ತಾನೆ ಅಂದ್ಕೊಂಡು ಓದ್ತಾ ಇದೀರಾ ಅಲ್ವಾ.? ಅಸಲು ನಾನು ಏನ್ ಹೇಳೋಕೆ ಬಂದೆ ಅಂದ್ರೆ ನಂಗೆ ಗೊತ್ತಿರೋ ಒಂಚೂರು ವಿಷ್ಯಾನ ಗೊತ್ತಿರೋರ ಹತ್ರ ಹೇಳ್ಕೊಂಡ್ರೆ ನಂಗೂ ಕೂಡಾ ಇನ್ನೊಂಚೂರು ಗೊತ್ತಾಗುತ್ತೆ.. ನಿಮ್ಗೂ ಕೂಡಾ ಗೊತ್ತಿರೋದನ್ನು ಇನ್ನೊಬ್ರ ಜೊತೆ ಹಂಚ್ಕೊಂಡಂಗಾಗುತ್ತೆ ಅಂತಾ ಬಂದೆ ಅಷ್ಟೇ..

ಅಸಲಿಗೆ ಈ ಗೊತ್ತಿರೋರ ಸಹವಾಸ ಮಾಡ್ಬಾರ್ದು ಕಣ್ರೀ. ತುಂಬಾ ಗೊತ್ತಿರೋರಾದ್ರೆ ಓಕೆ. ಅಥವಾ ಏನೂ ಗೊತ್ತಿಲ್ದೇ ಇರೋರಾದ್ರೂ ಓಕೆ. ಆದ್ರೆ ಈ ಅರ್ಧಂಬರ್ಧ ಗೊತ್ತಿರೋರಾದ್ರೆ ನಿಜವಾಗ್ಲೂ ನಮ್ಗೆ ಗೊತ್ತಿರೋದೆಲ್ಲಾ ಮರೆತುಹೋಗೋ ಹಂಗೆ ಮಾಡಿಬಿಡ್ತಾರೆ ಏನಂತೀರಾ,?

ಈ ಗೊತ್ತು ಅನ್ನೋ ವಿಷಯಾ ಅದೆಷ್ಟು ಜನಕ್ಕೆ ಗೊತ್ತಿರುತ್ತೆ ಗೊತ್ತಾ. ? ಕೆಲವ್ರಂತೂ ಏನ್ ಗೊತ್ತಾ ಅಂತಲೇ ಮಾತು ಶುರು ಮಾಡ್ತಾರೆ. ನಿಮ್ಗೇನ್ ಗೊತ್ತಾಗುತ್ತೆ ಮಣ್ಣು ಅಂತಾ ಅಣಕಿಸ್ತಾರೆ. ನನಗೆ ಮೊದ್ಲೇ ಗೊತ್ತಿತ್ತು ಅಂತಾ ಮೀಸೆ ತಿರುಗಿಸ್ತಾರೆ, ಗೊತ್ತಿದ್ರೆ ಮಾತ್ರಾ ಮಾತಾಡು ಇಲ್ಲಾ ಅಂದ್ರೆ ಹೋಗ್ತಾ ಇರು ಅಂತಾ ಧಮ್ಕಿ ಹಾಕ್ತಾರೆ.

ಗೊತ್ತಿರೋರು ಇದಾರೆ ಅಂತಾ ಪಟ್ಟಣಕ್ಕೆ ಹೋದ್ರೆ , ಗೊತ್ತಿಲ್ದೇ ಇರೋ ದಾರಿನಲ್ಲೇ ಕಳೆದುಹೋಗಿಬಿಟ್ಟೀರ‍್ತೀವಿ.

ಇದ್ಯಾರೋ ಗೊತ್ತಿರೋರು ಇದ್ದಂಗೆ ಇದಾರಲ್ವಾ ಅಂತಾ ಹತ್ತಿರಕ್ಕೆ ಹೋಗಿ ನೋಡಿದಾಗಲೇ ನಮಗೆ ಗೊತ್ತಾಗೋದು ಇವ್ರು ನಮ್ಗೆ ಗೊತ್ತಿರೋರಲ್ಲ ಅಂತಾ.

ಸಂಜೆ ಮಳೆ ಶುರುವಾಗಿದ್ ತಕ್ಷಣ ಹೇಳ್ತಾರೆ, ಮಳೆ ಬರುತ್ತೆ ಅಂತಾ ನಂಗೆ ಮೊದ್ಲೇ ಗೊತ್ತಿತ್ತು ಅಂತಾ. ಈ ಸಿನಿಮಾ ಓಡಲ್ಲಾ ಅಂತಾ ಕೆಲವ್ರಿಗೆ ಗೊತ್ತಿದ್ರೆ, ಇನ್ನೂ ಕೆಲವ್ರಿಗೆ ಈ ರೋಡಲ್ಲಿ ಸಿಕ್ಕಾಪಟ್ಟೆ ಟ್ರಾಫಿಕ್ಕು, ಟೈಮಿಗೆ ರೀಚ್ ಆಗೋಕೆ ಆಗಲ್ಲಾ ಅಂತಾನೂ ಗೊತ್ತಿರುತ್ತೆ.  ಅವ್ನು ಜೀವನದಲ್ಲಿ ಯಾವತ್ತೂ ಉದ್ದಾರ ಆಗಲ್ಲ ಅಂತಾ ಮೊದ್ಲೇ ಕೆಲವ್ರಿಗೆ ಗೊತ್ತಿರುತ್ತೆ. ಇವ್ರಿಬ್ರೂ ಓಡಿಹೋಗ್ತಾರೆ ಅಂತಾ ಇನ್ಯಾರಿಗೋ ಗೊತ್ತಿರುತ್ತೆ. ಇನ್ಯಾರೋ ಜೀವನದಲ್ಲಿ ತುಂಬಾ ಎತ್ತರಕ್ಕೆ ಬೆಳೀತಾನೆ ಅಂತಾ ಗೊತ್ತಿರುತ್ತೆ. ಮೊದ್ಲು ಏನೂ ಗೊತ್ತಿಲ್ದೇ ಇರೋನ ತರಾ ಇದ್ದೋನೂ ಕೂಡಾ ಈಗೀಗ ತುಂಬಾ ಗೊತ್ತಿರೋನ ತರಾನೇ ಆಡ್ತಾ ಇದಾನೆ ಅಂದ್ರೆ ಅವನಿಗೆ ಬದುಕೋ ದಾರಿ ಗೊತ್ತಾಗಿದೆ ಅಂತಾ ಅರ್ಥ. . ಸುಮ್ನೆ ಗೊತ್ತಿಲ್ದೇ ಇರೋದನ್ನೆಲ್ಲಾ ಮಾತಾಡಿ ಪೇಚಿಗೆ ಸಿಲುಕೋರು ಕೂಡಾ ಇದಾರೆ , ಅದೇ ರೀತಿ ಗೊತ್ತಿದ್ರೂ ಸುಮ್ಮನಿದ್ದು ಬಿಡೋರೂ ಇದಾರೆ

ಪರೀಕ್ಷೆ ಬಂತು ಅಂದ್ರೆ ಸಾಕು ಮೊದ್ಲು ಗೊತ್ತಿರೊದನ್ನೆಲ್ಲಾ ಬರೆದುಬಿಡು ಅಂತಾ ಟೀಚರ್ ಹೇಳ್ತಾರೆ. ಪಾಠ ಮಾಡುವಾಗ ಗೊತ್ತಾಗ್ದೇ ಇದ್ರೆ ಮತ್ತೆ ಮತ್ತೆ ಕೇಳಿ ತಿಳ್ಕೋಬೇಕು ಅಂತಾ ಕೂಡಾ ಮೊದ್ಲೇ ಹೇಳಿರ‍್ತಾರೆ. ಎಷ್ಟು ಓದಿದ್ರೂ ಗೊತಾಗ್ದೇ ಇದ್ದಾಗ ಮಾತ್ರಾ ಗೊತ್ತಿರೋರ ಹತ್ರ ಕೇಳಿ ತಿಳ್ಕೋಬೇಕು ಅಲ್ವಾ. ಗೊತ್ತಿದ್ರೂ ಸುಮ್ನೆ ಇರೋದು, ಗೊತ್ತಿಲ್ದೇ ಇದ್ದಾಗ ಸುಮ್ನೇ ಮಾತಾಡೋದೂ ಎರಡೂ ಕೂಡಾ ಅಪಾಯಕಾರಿಯೇ.

ಎಲ್ಲಿಗಾದ್ರೂ ಹೋದಾಗ ದಾರಿ ಗೊತ್ತಾಗ್ದೇ ಇದ್ದಾಗ , ಗೊತ್ತಿರೋರನ್ನು ಕೇಳ್ತೀವಲ್ಲಾ, ಹಂಗೇ ನಮಗೆ ಗೊತ್ತಿರೋದನ್ನು ಗೊತ್ತಿಲ್ದೇ ಇರೋರಿಗೆ ಹೇಳಿಕೊಡಬೇಕು. ನಮಗೆ ಎಲ್ಲಾ ಗೊತ್ತಿದೆ ಅನ್ನೋದ್ರಿಂದ ನಿಮ್ಗೆ ಏನೂ ಗೊತ್ತಾಗಲ್ಲ ಬಿಡಿ ಅನ್ನೋವರೆಗೂ ಎಂತೆಂತಹವ್ರು ರ‍್ತಾರೆ ಅಲ್ವಾ,?

ಅಯ್ಯೋ ಇದೆಲ್ಲಾ ಏನ್ ಮಹಾ ಬಿಡಿ, ಗೊತ್ತಿದ್ರೆ ಗೊತ್ತಿದೆ ಅನ್ನಬೇಕು, ಗೊತ್ತಿಲ್ಲಾ ಅಂದ್ರೆ ಗೊತ್ತಿಲ್ಲಾ ಅನ್ನಬೇಕು. ಗೊತ್ತಿಲ್ಲಾ ಅಂದ್ರೂ ಗೊತ್ತಿದೆ ಅಂತಾ ಹೇಳಿದ್ರೆ, ಗೊತ್ತಿರೋದೂ ಕೂಡಾ ಗೊತ್ತಿಲ್ದಂಗೆ ಆಗ್ಬಿಡುತ್ತೆ ಅಲ್ವಾ.? ಅದಿಕ್ಕೇ ಗೊತ್ತಿರೋರ ಸಹವಾಸ ಮಾಡಿ ಎಲ್ಲಾ ಗೊತ್ತು ಮಾಡಿಕೊಳ್ಳೊ ಪ್ರಯತ್ನ ಮಾಡಬೇಕು. ಏನೂ ಗೊತ್ತಾಗದ ಸ್ಥಿತಿಯಿಂದ ಎಲ್ಲಾ ಗೊತ್ತು ಅನ್ನೋ ಹಂತದವರೆಗೂ ನಾವು ಬೆಳೀಬೇಕು ಕಣ್ರೀ. ಅವಾಗ್ಲೇ ನಮ್ಮ ಬೆಳವಣಿಗೆ ಇನ್ನೊಬ್ರಿಗೆ ಗೊತ್ತಾಗೊದು. ಏನಂತೀರಿ,?

ಇಷ್ಟೆಲ್ಲಾ ನಿಮ್ಗೂ ಗೊತ್ತಿರುತ್ತೆ. ಆದ್ರೂ ನಂಗೆ ಗೊತ್ತಿರೋದನ್ನು  ಹೇಳಿದೀನಿ ಅಷ್ಟೇ. ಗೊತ್ತಾಗ್ದೇ ಏನಾದ್ರೂ ತಪ್ಪು ಮಾಡಿದ್ರೆ ಗೊತ್ತಿರೋ ನೀವು ದಯವಿಟ್ಟು ಕ್ಷಮಿಸಿಬಿಡಿ  ಅಷ್ಟೇ… ಗೊತ್ತಾಯ್ತಲ್ವಾ..?

-ನಿಮ್ಮ ಸೂರಿ

Leave a Reply

Your email address will not be published. Required fields are marked *

error: Content is protected !!