ಬರಗಾಲ ಹಿನ್ನಲೆ, ಮಕ್ಕಳಲ್ಲಿನ ಪೌಷ್ಟಿಕಾಂಶ ಕುಂಠಿತವಾಗದಿರಲು ಬೇಸಿಗೆ ರಜೆಯಲ್ಲಿ 1 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಬಿಸಿಯೂಟ, ಏಪ್ರಿಲ್ 11 ರಿಂದ ಮೇ 28 ರ ವರೆಗೆ 41 ದಿನಗಳ ಊಟ

ದಾವಣಗೆರೆ : ಪಿ.ಎಂ.ಪೋಷಣ್ ಶಕ್ತಿ ನಿರ್ಮಾಣ್ ಹಾಗೂ ಅಕ್ಷರ ದಾಸೋಹ ಕಾರ್ಯಕ್ರಮದಡಿ 31 ಕಂದಾಯ ಜಿಲ್ಲೆಗಳಲ್ಲಿ ಬರ ಘೋಷಣೆಯ ಹಿನ್ನಲೆಯಲ್ಲಿ ಬರಗಾಲದಲ್ಲಿ ಮಕ್ಕಳಲ್ಲಿನ ಪೌಷ್ಟಿಕಾಂಶ ಕೊರತೆಯಾಗಬಾರದೆಂದು ಏಪ್ರಿಲ್ 11 ರಿಂದ ಮೇ 28 ರ ವರೆಗೆ ಭಾನುವಾರಗಳಂದು ಹೊರತುಪಡಿಸಿ ನಿರಂತರವಾಗಿ 41 ದಿನಗಳ ಕಾಲ ಮಧ್ಯಾಹ್ನದ ಬಿಸಿಯೂಟ ನೀಡಲು ಸಿದ್ದತೆ ನಡೆಸಿಕೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ಅವರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಅವರು ಶನಿವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಿಸಿಯೂಟವನ್ನು ಎಲ್ಲಾ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ 1 ರಿಂದ 10 ನೇ ತರಗತಿ ವ್ಯಾಸಂಗ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ಅಂದರೆ ಪ್ರಸ್ತುತ ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆದ ವಿದ್ಯಾರ್ಥಿಗಳು ಒಳಗೊಂಡಂತೆ ಎಲ್ಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನ 12 ರಿಂದ 2 ಗಂಟೆಯ ಅವಧಿಯಲ್ಲಿ ಊಟ ನೀಡಲಾಗುತ್ತದೆ. ಶಾಲೆಗಳ ಬೇಸಿಗೆ ರಜೆ ಏಪ್ರಿಲ್ 11 ರಿಂದ ಆರಂಭವಾಗಲಿದ್ದು ಅಂದಿನಿಂದಲೇ ರಜೆ ಬಿಸಿಯೂಟ ಆರಂಭವಾಗಬೇಕೆಂದರು.
ಶಾಲೆ ಆಯ್ಕೆ; ಗ್ರಾಮ, ಕೇಂದ್ರಸ್ಥಾನದಲ್ಲಿ ಒಂದಕ್ಕಿಂತ ಹೆಚ್ಚು ಶಾಲೆಗಳಿದ್ದಲ್ಲಿ ಅವುಗಳಲ್ಲಿ ಹೆಚ್ಚು ಮಕ್ಕಳಿರುವ ಶಾಲೆಯನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆ ಶಾಲೆಗೆ ಇತರೆ ಶಾಲೆ ಮಕ್ಕಳು ಬಂದು ಊಟ ಮಾಡಿ ಹೋಗಬಹುದಾಗಿದೆ. ಪ್ರತಿ ಎರಡು ಕಿ.ಮೀ ವ್ಯಾಪ್ತಿಯ ಒಳಗೆ ಈ ಕೇಂದ್ರಗಳನ್ನು ಗುರುತಿಸುವ ಕೆಲಸ ಮಾಡಬೇಕಾಗಿದೆ. 250 ಕ್ಕಿಂತ ಹೆಚ್ಚು ಮಕ್ಕಳಿದ್ದಲ್ಲಿ ನಿರ್ವಹಣೆಗೆ ಹೆಚ್ಚುವರಿಯಾಗಿ ಶಿಕ್ಷಕರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಬಹುದಾಗಿದೆ ಎಂದರು.

ಬಿಸಿಯೂಟ ನಿರ್ವಹಣೆ, ವಿತರಣೆ ನೋಡಿಕೊಳ್ಳುವ ಜವಾಬ್ದಾರಿ ಆಯಾ ಶಾಲೆ ಮುಖ್ಯ ಶಿಕ್ಷಕರ ಮೇಲಿದ್ದು ಅಗತ್ಯವಿದ್ದಲ್ಲಿ ನೋಡಲ್ ಶಿಕ್ಷಕರನ್ನು ನೇಮಕ ಮಾಡಬಹುದಾಗಿದೆ. ಮಕ್ಕಳ ಸಂಖ್ಯೆ ಹೆಚ್ಚಿದ್ದಲ್ಲಿ ಪಕ್ಕದ ಶಾಲೆಯಲ್ಲಿನ ಅಡುಗೆ ಸಿಬ್ಬಂದಿಗಳ ಸೇವೆ ಬಳಕೆ ಮಾಡಿಕೊಳ್ಳಬಹುದಾಗಿದೆ.

ಪೋಷಕರಿಂದ ಒಪ್ಪಿಗೆ ಪತ್ರ; ಬೇಸಿಗೆ ರಜೆಯಲ್ಲಿ ಶಾಲೆಗೆ ಬಂದು ಊಟ ಮಾಡುವ ವಿದ್ಯಾರ್ಥಿಗಳ ವಿವರವನ್ನು ಸಂಗ್ರಹಿಸಲು ತಿಳಿಸಿ ಯಾರು ಬಿಸಿಯೂಟ ಮಾಡಲು ತಮ್ಮ ಮಕ್ಕಳನ್ನು ಕಳುಹಿಸಲು ಒಪ್ಪಿಗೆ ನೀಡುವ ಪೋಷಕರಿಂದ ಒಪ್ಪಿಗೆ ಪತ್ರ ಸಂಗ್ರಹಿಸಬೇಕು. ಆ ಮಕ್ಕಳಿಗೆ ಮಾತ್ರ ಈ ಹಿಂದಿನ ಮೆನುವಿನಂತೆ ಊಟ ತಯಾರು ಮಾಡಿ ರಜಾ ದಿನ ಭಾನುವಾರ ಹೊರತುಪಡಿಸಿ ಉಳಿದದ ದಿನಗಳಲ್ಲಿ ಮಧ್ಯಾಹ್ನದ ಬಿಸಿಯೂಟ ವಿತರಣೆ ಮಾಡಬೇಕಾಗಿದೆ ಎಂದರು.

ಶುದ್ದ ಕುಡಿಯುವ ನೀರು ಮತ್ತು ಕಲಬೆರೆಕೆ ಆಹಾರ ತಡೆ; ಬಿಸಿಯೂಟ ಮಾಡುವ ಕೇಂದ್ರಗಳಿಗೆ ಆಯಾ ಗ್ರಾಮ ಪಂಚಾಯಿತಿಗಳು ಮತ್ತು ತಾಲ್ಲೂಕು ಕೇಂದ್ರವಾಗಿದ್ದಲ್ಲಿ ಸ್ಥಳೀಯ ಸಂಸ್ಥೆಗಳು ಶುದ್ದ ಕುಡಿಯುವ ನೀರು ಪೂರೈಕೆ ಮಾಡಬೇಕು. ಬೇಸಿಗೆ ಕಾಲವಾಗಿದ್ದಲಿಂದ ಶುದ್ದ ನೀರಿನ ಪೂರೈಕೆ ಬಹಳ ಮುಖ್ಯವಾಗಿರುತ್ತದೆ. ಮತ್ತು ಊಟದಲ್ಲಿ ಯಾವುದೇ ವ್ಯತ್ಯಾಸವಾಗದಂತೆ ಕಲಬೆರೆಕೆಯಾಗಬಾರದು. ಆಗಿಂದಾಗ್ಗೆ ಆಹಾರವನ್ನು ಸುರಕ್ಷತಾ ವಿಭಾಗದ ಅಧಿಕಾರಿಗಳು ಪರೀಕ್ಷೆ ನಡೆಸಬೇಕೆಂದು ತಿಳಿಸಿದರು.
ಅಡುಗೆ ಕೇಂದ್ರ ಗುರುತಿಸಿ ಮಾಹಿತಿ ನೀಡಲು ಸೂಚನೆ; ಬೇಸಿಗೆ ರಜೆಯಲ್ಲಿ ಬಿಸಿಯೂಟ ನೀಡಲಾಗುತ್ತಿರುವ ಶಾಲೆಗಳ ವಿವರ, ಅಂದರೆ ಯಾವ ಶಾಲೆಯ ವಿದ್ಯಾರ್ಥಿಗಳಿಗೆ ಯಾವ ಶಾಲೆ ಕೇಂದ್ರಕ್ಕೆ ಟ್ಯಾಗ್ ಮಾಡಲಾಗಿದೆ ಎಂದು ಆಯಾ ಶಾಲಾ ಸೂಚನಾ ಫಲಕದಲ್ಲಿ ಬೇಸಿಗೆ ರಜೆಗೂ ಮೊದಲೇ ಪ್ರಚುರಪಡಿಸಬೇಕೆಂದು ತಿಳಿಸಿದರು.

ಸಭೆಯಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪನಿರ್ದೇಶಕ ಕೊಟ್ರೇಶ್, ಡಯಟ್ ಪ್ರಾಂಶುಪಾಲರಾದ ಗೀತಾ, ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ದುರುಗಪ್ಪ, ಎಲ್ಲಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!