ಬಿಸಿಲಿನ ತಾಪ ಹೆಚ್ಚಳ, ಕುಡಿಯುವ ನೀರಿನ ಸಮಸ್ಯೆ ಉಲ್ಬಣ ನಿರೀಕ್ಷೆ, ಖಾಸಗಿ ಕೊಳವೆಬಾವಿ ಬಾಡಿಗೆ ಪಡೆಯಲು ಮುಂದಾಗಿ – ಡಿಸಿ ವೆಂಕಟೇಶ್

ದಾವಣಗೆರೆ: ಬೇಸಿಗೆ ತಾಪಮಾನ ಹೆಚ್ಚಳವಾಗಿದ್ದು ಎಲ್ಲ ಕಡೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗುವ ನಿರೀಕ್ಷೆ ಇದ್ದು ತಕ್ಷಣ ಕುಡಿಯುವ ನೀರಿನ ಪೂರೈಕೆಗಾಗಿ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಿಟ್ಟುಕೊಂಡು ಸಮಸ್ಯೆಯಾದ ಕಡೆ ತಕ್ಷಣವೇ ಅಧಿಕಾರಿಗಳು ಸ್ಪಂದಿಸುವ ಕೆಲಸ ಮಾಡಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ಅಧ್ಯಕ್ಷರಾದ ಡಾ: ವೆಂಕಟೇಶ್ ಎಂ.ವಿ ತಿಳಿಸಿದರು.


ಅವರು ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕುಡಿಯುವ ನೀರು ಸರಬರಾಜು ಕುರಿತಂತೆ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿ ತಿಳಿಸಿದರು. ಜಿಲ್ಲೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಮೂಲಕ ಸಾಕಷ್ಟು ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಕಾಲುವೆ ಮತ್ತು ನದಿಯಲ್ಲಿನ ನೀರು ಹರಿವು ಕಡಿಮೆಯಾಗಿದ್ದರಿಂದ ಸಮಸ್ಯೆಯಾಗಿದೆ. ಆದರೂ ಸಹ ನದಿಗೆ ಹಾಗೂ ಕಾಲುವೆಗೆ ನೀರು ಹರಿಸುವ ಮೂಲಕ ಮುಂದಿನ 1 ತಿಂಗಳ ಕಾಲ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.


ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಜೊತೆಗೆ ಕೊಳವೆಬಾವಿಗಳ ಮೂಲಕವೂ ನೀರು ಪೂರೈಕೆ ಮಾಡಲಾಗುತ್ತದೆ. ಕೆಲವು ಕಡೆ ಕೊಳವೆಬಾವಿಗಳು ಬತ್ತಿ ಹೋಗಿವೆ, ಇನ್ನೂ ಕೆಲವು ಕಡೆ ನೀರಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ. ಇಳಿಕೆಯಾದ ಕೊಳವೆಬಾವಿಗೆ ಸಿಂಗಲ್‍ಫೇಜ್ ಮೋಟಾರ್ ಪಂಪ್ ಅಳವಡಿಸುವ ಮೂಲಕ ನೀರನ್ನು ಪೂರೈಕೆ ಮಾಡಲು ತಿಳಿಸಿ ಗ್ರಾಮ ಪಂಚಾಯಿತಿಗಳಲ್ಲಿನ 15 ನೇ ಹಣಕಾಸು ಯೋಜನೆಯಡಿ ಹೊಸ ಸಿಂಗಲ್‍ಫೇಜ್ ಮೋಟಾರ್ ಖರೀದಿಸಲು ತಿಳಿಸಿದರು.
ಖಾಸಗಿ ಕೊಳಬೆಬಾವಿ ಗುರುತಿಸಲು ಸೂಚನೆ; ಎಲ್ಲೆಲ್ಲಿ ನೀರಿನ ಸಮಸ್ಯೆ ಎದುರಾಗಿದೆ, ಅಂತಹ ಕಡೆ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಿ ಬಾಡಿಗೆ ಆಧಾರದ ಮೇಲೆ ಪಡೆಯಲು ಮುಂದಾಗಬೇಕು. ಆದರೆ ಹೆಚ್ಚು ಟ್ಯಾಂಕರ್‍ಗಳ ಮೇಲೆ ಅವಲಂಭಿತವಾಗಬಾರದು ಎಂದು ಎಚ್ಚರಿಕೆ ನೀಡಿದರು. ಪ್ರತಿ ದಿನ ಒಬ್ಬರಿಗೆ ಕನಿಷ್ಠ 55 ಲೀಟರ್ ನೀರು ಪೂರೈಕೆ ಮಾಡಬೇಕಾಗಿದೆ ಮತ್ತು ಜಾನುವಾರುಗಳಿಗೂ ನೀರು ಪೂರೈಕೆ ಮಾಡುವುದರಿಂದ ಬಾಡಿಗೆ ಕೊಳವೆಬಾವಿಗಳಿಂದ ನಿರ್ವಹಣೆ ಸುಲಭವಾಗಲಿದೆ ಎಂದರು.
ಕೊಳಬೆವಾವಿ ಪುನಃಶ್ಚೇತನಕ್ಕೆ ಅನುದಾನ; ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾದಲ್ಲಿ ಇದನ್ನು ಫ್ಲೆಶಿಂಗ್ ಮತ್ತು ಆಳಕ್ಕೆ ಕೊರತೆಯಲು ಯೋಜನೆ ರೂಪಿಸಬೇಕು. ಕೊಳವೆಬಾವಿಗಳ ಕೊರೆಯಲು ಜಿಲ್ಲೆಯಲ್ಲಿ 7 ರಿಗ್‍ಗಳನ್ನು ವಶಕ್ಕೆ ಪಡೆದು ನೀಡಲು ಸಾರಿಗೆ ಅಧಿಕಾರಿಗೆ ಆದೇಶ ನೀಡಲಾಗಿದೆ. ಎಲ್ಲಲ್ಲಿ ಅಗತ್ಯವಿದೆ, ಅಂತಹ ಕಡೆ ಮಾತ್ರ ಹಾಲಿ ಇದ್ದ ಕೊಳವೆಬಾವಿ ಆಳ ಮತ್ತು ಫ್ಲೆಶಿಂಗ್ ಮಾಡುವ ಕೆಲಸ ಮಾಡಬೇಕೆಂದರು.
ಸಾರ್ವಜನಿಕ ಬಳಕೆ ಬೋರ್ ಪಕ್ಕ ಕೊಳವೆಬಾವಿ ಕೊರೆಸುವಂತಿಲ್ಲ; ಸಾರ್ವಜನಿಕ ಉದ್ದೇಶಕ್ಕಾಗಿ ಕೊಳವೆಬಾವಿ ಕೊರೆಯಿಸಿದ್ದಲ್ಲಿ ಖಾಸಗಿಯವರು ಪಕ್ಕದಲ್ಲಿಯೇ ಬಂದು ಕೊಳವೆಬಾವಿ ಕೊರೆಯಲು ಅವಕಾಶ ಇರುವುದಿಲ್ಲ. ಒಂದು ವೇಳೆ ಸಾರ್ವಜನಿಕರು ಕೊರೆಯಿಸಿದಲ್ಲಿ ಪ್ರಕೃತಿ ವಿಕೋಪ ನಿರ್ವಹಣಾ ಕಾಯಿದೆಯಡಿ ವಶಕ್ಕೆ ಪಡೆದುಕೊಳ್ಳಲು ಅವಕಾಶ ಇದ್ದು ತಹಶೀಲ್ದಾರರು ಕ್ರಮ ಕೈಗೊಳ್ಳಬಹುದಾಗಿದೆ ಎಂದರು.
ಜಿಲ್ಲೆಯಲ್ಲಿ 31 ಗ್ರಾಮ ಪಂಚಾಯಿತಿ ವ್ಯಾಪ್ತಿಯ 47 ಗ್ರಾಮಗಳಲ್ಲಿ 52 ಖಾಸಗಿ ಬೋರ್‍ವೆಲ್ ಬಾಡಿಗೆ ಪಡೆದು ನೀರು ಪೂರೈಕೆ ಮಾಡಲಾಗುತ್ತಿದೆ. ಇನ್ನೂ 17 ಬೋರ್‍ವೆಲ್ ಬಾಡಿಗೆ ಪಡೆಯಲು ಒಪ್ಪಂದ ಮಾಡಿಕೊಳ್ಳಲಾಗಿದೆ. ದಾವಣಗೆರೆ ತಾ; 4 ಕೊಳವೆಬಾವಿ ಬಾಡಿಗೆ, ಜಗಳೂರು ತಾ; 11 ಖಾಸಗಿ ಬಾಡಿಗೆ, ಉಚ್ಚಂಗಿ ದುರ್ಗದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಖಾಸಗಿ ಬೋರ್‍ವೆಲ್ ಪಡೆಯಲು ನಿರ್ದೇಶನ ನೀಡಲಾಯಿತು. ಚನ್ನಗಿರಿ ತಾ; 12 ಖಾಸಗಿ ಬೋರ್‍ವೆಲ್ ಪಡೆದು ಇನ್ನೂ 54 ಗುರುತಿಸಲಾಗಿದೆ. ಸೂಳೆಕೆರೆಗೆ ಭದ್ರಾ ನೀರು ಬಿಡಿಸಿದರೆ ಶೇ 50 ರಷ್ಟು ಸಮಸ್ಯೆ ಬಗೆಹರಿಯಲಿದೆ. ಹರಿಹರ ತಾ; 20 ಬಾಡಿಗೆ ಬೋರ್‍ವೆಲ್ ಪಡೆದಿದ್ದು ಬಾನಳ್ಳಿಯಲ್ಲಿನ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ವಹಿಸಲು ಸೂಚನೆ, ತಾಲ್ಲೂಕಿನಲ್ಲಿ 28 ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಿದೆ. ಹೊನ್ನಾಳಿ ತಾ; 6 ಖಾಸಗಿ ಬೋರ್‍ವೆಲ್ ಪಡೆದಿದ್ದು ಹೊನ್ನಾಳಿ 12, ನ್ಯಾಮತಿ ತಾಲ್ಲೂಕಿನ 7 ಗ್ರಾಮಗಳನ್ನು ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ದಾವಣಗೆರೆ ಮಹಾನಗರ ಪಾಲಿಕೆ; ಪಾಲಿಕೆ ವ್ಯಾಪ್ತಿಯಲ್ಲಿ 1089 ಕೊಳವೆಬಾವಿಗಳಿವೆ, ಕುಂದುವಾಡ ಕೆರೆಯಿಂದ 8-10 ದಿನಗಳಿಗೊಮ್ಮೆ ಹಳೆ ದಾವಣಗೆರೆಗೆ ನೀರು ನೀಡಲಾಗುತ್ತಿದೆ. ಟಿ.ವಿ.ಸೇಷನ್ ಕೆರೆಯಿಂದ 4-5 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಮತ್ತು ರಾಜನಹಳ್ಳಿ ಜಾಕ್‍ವೆಲ್‍ನಿಂದ 60 ಎಂಎಲ್‍ಡಿ ನೀರು ಪೂರೈಕೆ ಮಾಡುತ್ತಿದ್ದು ಇದರಲ್ಲಿ 20 ಎಂಎಲ್‍ಡಿ ನೀರು ಕುಂದುವಾಡ ಕೆರೆಗೆ ಸಂಗ್ರಹಿಸಲಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದಾಗ ಬೇಸಿಗೆ ಮುಗಿಯುವವರೆಗೆ ಕುಡಿಯುವ ನೀರಿನ ಹೊರತಾಗಿ ವಾಹನಗಳ ವಾಷಿಂಗ್, ಸಸಿಗಳಿಗೆ ಹಾಗೂ ಇನ್ನಿತರೆ ಉದ್ದೇಶಕ್ಕಾಗಿ ನೀರು ಬಳಸಬಾರದೆಂದು ಕಠಿಣ ಕ್ರಮ ಕೈಗೊಳ್ಳಲು ಪಾಲಿಕೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಟ್ಯಾಂಕರ್ ಮಾಲಿಕರ ಎಂಪ್ಯಾನಲ್ ಮಾಡಲು ಸೂಚನೆ; ಕುಡಿಯುವ ನೀರಿನ ಸರಬರಾಜು ಮಾಡುವ ಉದ್ದೇಶದಿಂದ ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಟ್ಯಾಂಕರ್ ಮಾಲಿಕರಿಂದ ದರಪಟ್ಟಿಯನ್ನು ಪಡೆದು ಅವರೊಂದಿಗೆ ಸಭೆ ಮಾಡಿ ಏಕರೂಪದ ದರ ನಿಗದಿ ಮಾಡಲು ಕ್ರಮ ವಹಿಸಬೇಕು. ಮಾಲಿಕರು ಟ್ಯಾಂಕರ್ ನೊಂದಣಿ, ಆರ್.ಸಿ, ಟ್ಯಾಂಕರ್ ಸ್ವಚ್ಚತೆ, ಜಿಪಿಎಸ್ ಅಳವಡಿಕೆ ಹೊಂದಿರುವ ಷರತ್ತುಗಳಿಗನುಗುಣವಾಗಿ ಎಂಪ್ಯಾನಲ್ ಮಾಡಿಕೊಳ್ಳಬೇಕು. ಇದರಿಂದ ಸಮಸ್ಯೆ ಉದ್ಬವಿಸಿದಾಗ ಟ್ಯಾಂಕರ್ ಮೂಲಕ ನೀರು ನೀಡಲು ತಕ್ಷಣ ಕ್ರಮ ವಹಿಸಲು ಅನುಕೂಲವಾಗುತ್ತದೆ ಎಂದರು.
ಖಾತರಿಯಡಿ ಕೆರೆಕಟ್ಟೆ ಹೂಳೆತ್ತಲು, ಮಳೆ ಕೊಯ್ಲು ಯೋಜನೆ ರೂಪಿಸಲು ಸೂಚನೆ; ಜಿಲ್ಲೆಯಲ್ಲಿ ಜಲಸಂಪನ್ಮೂಲ, ಸಣ್ಣ ನೀರಾವರಿ, ಜಿಲ್ಲಾ ಪಂಚಾಯತ್ ಕೆರೆಗಳು ಸೇರಿದಂತೆ ಒಟ್ಟು 522 ಕೆರೆಗಳು ಜಿಲ್ಲೆಯಲ್ಲಿವೆ, ಆದರೆ ಇರುವ ಕೊಳವೆಬಾವಿಗಳ ಸಂಖ್ಯೆ ಜಾಸ್ತಿ ಇದ್ದು ಅಂತರ್ಜಲ ಮಟ್ಟ ಕುಸಿಯಲು ಕಾರಣವಾಗಿದೆ. ಆದ್ದರಿಂದ ಈಗಿರುವ ಕೆರೆಗಳಲ್ಲಿನ ಹೂಳೆತ್ತಲು, ಏರಿ ಭದ್ರಪಡಿಸಲು ಮತ್ತು ರಿಪೇರಿ ಇದ್ದಲ್ಲಿ ದುರಸ್ಥಿ ಕೆಲಸ ಮಾಡಲು ಮುಂದಾಗಬೇಕು. ಮತ್ತು ಸಾರ್ವಜನಿಕ ಕೊಳವೆಬಾವಿಗಳ ಸುತ್ತಮುತ್ತ ಮಳೆನೀರು ಮರುಪೂರಣ ಮಾಡಲು ಮಳೆಕೊಯ್ಲು ಯೋಜನೆ ರೂಪಿಸಲು ಜಿಲ್ಲಾಧಿಕಾರಿಯರು ಸೂಚನೆ ನೀಡಿ ದಾವಣಗೆರೆ ಜಿಲ್ಲೆ ಅಂತರ್ಜಲ ಕುಸಿದ ಜಿಲ್ಲೆಯ ಪಟ್ಟಿಯಲ್ಲಿದ್ದು ಕೊಳವೆಬಾವಿ ಕೊರೆಯಲು ಫಾರಂ 7 ರಡಿ ಅರ್ಜಿ ಸಲ್ಲಿಸಿ ಜಿಲ್ಲಾಧಿಕಾರಿಯಿಂದ ಅನುಮತಿ ಪಡೆಯಬೇಕು. ಆದರೆ ಇದುವರೆಗೂ ಯಾವುದೇ ಅರ್ಜಿ ನನ್ನ ಬಳಿ ಬಂದಿರುವುದಿಲ್ಲ, ಇದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್ ಮಾತನಾಡಿ ಕುಡಿಯುವ ನೀರಿನ ವಿದ್ಯುತ್ ಸಂಪರ್ಕಕ್ಕೆ ಯಾವುದೇ ಅಡಚಣೆಯನ್ನು ಬೆಸ್ಕಾಂನಿಂದ ಮಾಡಬಾರದು. ಮತ್ತು ತಕ್ಷಣವೇ ಸಂಪರ್ಕ ಕಲ್ಪಿಸಲು ಕ್ರಮ ವಹಿಸುವ ಜೊತೆಗೆ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಟಿ.ಸಿ. ಸುಟ್ಟು ಹೋದಾಗ ತಕ್ಷಣವೇ ರಿಪೇರಿ ಮಾಡಿ ಅಳವಡಿಸುವ ಕೆಲಸ ಮಾಡಬೇಕು ಎಂದ ಅವರು ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಗ್ರಾಮಗಳಲ್ಲಿ ಕುಡಿಯುವ ನೀರಿನ ಮೋಟಾರ್ ಸುಟ್ಟಲ್ಲಿ ತಕ್ಷಣವೇ ರಿಪೇರಿ ಮಾಡಿಸುವ ಕೆಲಸ ಮಾಡಬೇಕು. ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ರಿಪೇರಿ ಮಾಡಿಸಲು ವಿಳಂಬ ಮಾಡುತ್ತಾರೆ ಎಂಬ ದೂರುಗಳಿದ್ದು ಕಾರ್ಯನಿರ್ವಾಹಕ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಎನ್.ದುಗಶ್ರೀ, ಅಭಿಷೇಕ್ ಹಾಗೂ ಎಲ್ಲಾ ತಾಲ್ಲೂಕುಗಳ ತಹಶೀಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿಗಳು, ಮುಖ್ಯಾಧಿಕಾರಿಗಳು, ಗ್ರಾಮೀಣ ನೀರು ಸರಬರಾಜು ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!