ಶಿಗ್ಗಾಂವ್ ನಲ್ಲಿನ ಮುಖ್ಯಮಂತ್ರಿ ಮನೆಯ ಮುಂದೆ ಜಯ ಮೃತ್ಯುಂಜಯ ಸ್ವಾಮೀಜಿ ಧರಣಿ

ದಾವಣಗೆರೆ: ಜ.13ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಶಿಗ್ಗಾಂವ ನಿವಾಸದ ಮುಂದೇ ಧರಣಿ ಮಾಡಿ‌, ಮೀಸಲಾತಿಗೆ ಆಗ್ರಹಿಸುತ್ತೇವೆ ಎಂದು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಗುಡುಗಿದ್ದರು. ಇಂದು ಶಿಗ್ಗಾಂವ್ ನಲ್ಲಿ ಸಿಎಂ ಮನೆ ಮುಂದೆ ಧರಣಿ ನಡೆಸಲಿದ್ದಾರೆ.
ಕಳೆದ‌ ವರ್ಷ ಡಿ.12ರಂದೇ ಹೋರಾಟಕ್ಕೆ ಮುಂದಾದವರನ್ನು ತಡೆದ ಮುಖ್ಯಮಂತ್ರಿ ಬೊಮ್ಮಾಯಿ ಅವರು ಡಿ.19ರಂದು ಬೆಳಗಾವಿ ಅಧಿವೇಶನದಲ್ಲಿ ಮೀಸಲಾತಿ ಘೋಷಿಸುವೆ ಎಂದು ಮಾತುಕೊಟ್ಟಿದ್ದರು. ಡಿ.22 ರಂದು ಬಹುದೊಡ್ಡ ಸಮಾವೇಶ ಆಯೊಜಿಸಲಾಯಿತು. ಪಾದಯಾತ್ರೆ ಮೂಲಕ ಸಮಾವೇಶ ತಲುಪುತಿದ್ದಂತೆ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ವರದಿ ಪಡೆಯಿತು.
ಮಾತುಕತೆಗೆ ತೆರಳಿದ ಯತ್ನಾಳ್, ಕಾಶಪ್ಪ ಮತ್ತಿತರರಿಗೆ ಡಿ.29ರಂದು ಮೀಸಲಾತಿ ನೀಡಿಯೇ ತೀರುವುದಾಗಿ ಜನ್ಮಕೊಟ್ಟ ತಾಯಿಯ ಆಣೆ ಮಾಡಿ ನಂಬಿಸಿದಾಗ ನಾವೂ ಸೇರಿ ಎಲ್ಲರೂ ನಂಬಿದೆವು. ಹೀಗೆ ಸರ್ಕಾರ ಹಂತಹಂತವಾಗಿ ಮೀಸಲಾತಿ ಹೋರಾಟ ಹತ್ತಿಕ್ಕುವ ಯತ್ನ‌ ನಡೆಸಿತು ಎಂದು ಕಿಡಿಕಾರಿದರು.
ಡಿ.29ರಂದು ಸರ್ಕಾರ ಅರೆಬರೆ ತೀರ್ಮಾನ ತೆಗೆದುಕೊಂಡು, 2ಸಿ ಮತ್ತು 2ಡಿ ಘೋಷಿಸಿತು. ಕಾನೂನು ತಜ್ಣರ ಅಭಿಪ್ರಾಯ ಪಡೆದು ಅದನ್ನು ತಿರಸ್ಕರಿಸಲಾಗಿದೆ. ಎರಡು ವರ್ಷ ಹೋರಾಟದಿಂದ ರೂಪಿಸಿದ ಜನಶಕ್ತಿಯನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ. ಹೋರಾಟ ಮಾಡದೇ ಇದ್ದವರಿಗೂ ಮೀಸಲಾತಿ ನೀಡಿದ ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಮಾಡಿದೆ ಎಂದು ಕಿಡಿಕಾರಿದರು. ಮೀಸಲಾತಿ ಸಿಗದಿದ್ದರೆ ಸಂಘಟನೆಯನ್ನೇ ರಾಷ್ಟ್ರೀಯ ಶಕ್ತಿಯನ್ನಾಗಿಸಿ ಹೋರಾಟ ಮಾಡೋಣ ಎಂದರು.
ಸಮಾಜದ ಕಾನೂನು ಸಲಹೆಗಾರ ನ್ಯಾಯವಾದಿ ಎಸ್. ವಿ. ಪಾಟೀಲ್, ಮಹಾನಗರ ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್, ಮುಖಂಡರಾದ ಪರಮೇಶ್ವರ ಗೌಡರು, ಮಾಜಿ ಶಾಸಕ ಹೆಚ್. ಎಸ್. ಶಿವಶಂಕರ್, ದೂಡಾ ಮಾಜಿ ಅಧ್ಯಕ್ಷ ಶಂಕರಪ್ಪ, ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಗೋಪನಾಳ್, ಮುಖಂಡರಾದ ಕಾರಿಗನೂರು ಕಲ್ಲೇಶಪ್ಪ, ನಾಗರಸನಹಳ್ಕಿ ವಿರೂಪಾಕ್ಷಪ್ಪ, ಶಂಭಣ್ಣ, ಜಯಮ್ಮ, ಮಾಜಿ ಯೋಧ ಚನ್ನಬಸವನ ಗೌಡ, ಹಿರೇ ಮ್ಯಾಗಳಗೇರಿ ಚನ್ನಬಸಪ್ಪ ಕೊಳೇನಹಳ್ಳಿ, ಬಿಸಲೇರಿ, ನಾಗರಸನಹಳ್ಳಿ, ಹರಿಹರ ಮತ್ತಿತರ ಭಾಗದ ಮುಖಂಡರು ಇದ್ದರು. ಪೈಲ್ವಾನ್ ಮಂಜುನಾಥ ಸ್ವಾಗತಿಸಿದರು.

Leave a Reply

Your email address will not be published. Required fields are marked *

error: Content is protected !!