24 ಗಂಟೆಯಲ್ಲಿ ಕೊಲೆ ಪ್ರಕರಣ ಬೇದಿಸಿದ್ದ ಬೆಣ್ಣೆ ನಗರಿ ಸೂಪರ್ ಕಾಪ್ ಟಿವಿ ದೇವರಾಜ್ ಗೆ ಕೇಂದ್ರ ಪದಕ

ದಾವಣಗೆರೆ : ದಾವಣಗೆರೆ ಸೇರಿದಂತೆ ಹೊನ್ನಾಳಿಯಲ್ಲಿ ತಮ್ಮದೇ ಶೈಲಿಯಲ್ಲಿ ಹಲವು ಕೊಲೆ ಪ್ರಕರಣ ಬೇದಿಸಿದ್ದ ಬೆಣ್ಣೆ ನಗರಿಯ ಪೊಲೀಸ್ ಟಿ.ವಿ.ದೇವರಾಜ್ ಗೆ ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಕೇಂದ್ರದ ಪದಕ ಪ್ರಧಾನ ಮಾಡಿದರು.

ತನಿಖಾ ಶ್ರೇಷ್ಠತೆಗಾಗಿ ಕೇಂದ್ರ ‘ಗೃಹ ಸಚಿವ ಪದಕ’ ಕ್ಕೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪೊಲೀಸ್ ಠಾಣೆಯ ಸರ್ಕಲ್ ಇನ್ ಸ್ಪೆಕ್ಟರ್ ಟಿ. ವಿ. ದೇವರಾಜ್ ಭಾಜನರಾಗಿದ್ದು, ಜಿಲ್ಲಾ ಪೊಲೀಸ್ ಇಲಾಖೆ ಪ್ರಶಂಸೆ ವ್ಯಕ್ತಪಡಿಸಿದೆ.ಸೂಕ್ಷ್ಮ, ಅತಿಸೂಕ್ಷ್ಮ ಪ್ರಕರಣ, ಟೆಕ್ನಿಕಲ್ ಬಳಕೆ, ಭೌತಿಕ ತನಿಖೆ, ತನಿಖೆ ಮಾಡುವ ವಿಧಾನದ ಬಳಕೆ ಹೇಗಿತ್ತು ಎಂಬ ಆಧಾರದ ಮೇಲೆ ಈ ಪದಕ ನೀಡಲಾಗುತ್ತದೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹುಣಸಘಟ್ಟದ ಮದರಸಾ ಬಳಿ ಕಳೆದ ವರ್ಷ ನಡೆದ ವೃದ್ಧನ ಕೊಲೆ ಪ್ರಕರಣವನ್ನು ರಕ್ತದ ಜಾಡು ಹಿಡಿದು ಕೇವಲ 24 ಗಂಟೆಗಳಲ್ಲಿ ಸಿಪಿಐ ಟಿ.ವಿ. ದೇವರಾಜ್‌ ಭೇದಿಸಿದ್ದರು. ಆಧುನಿಕ ತಂತ್ರಜ್ಞಾನ ವಿಧಾನ ಬಳಸಿ ಕೇಸು ಭೇದಿಸಿದ ಹಿನ್ನೆಲೆಯಲ್ಲಿ’ಅಪರಾಧ ಪ್ರಕರಣಗಳ ತನಿಖೆಯಲ್ಲಿನ ಅನನ್ಯ ಸಾಧನೆ’ ಪರಿಗಣಿಸಿ ಕೇಂದ್ರ ಸರಕಾರದ ಗೃಹ ಸಚಿವರ ಪದಕ ಅವರಿಗೆ ಲಭಿಸಿದೆ. ಈ ಪ್ರಕರಣ ಅತ್ಯಂತ ಸೂಕ್ಷ್ಮವಾಗಿದ್ದು, ಒಂದು ಕಡೆ ಚುನಾವಣೆ, ಇನ್ನೋಂದು ಕಡೆ ಕೊಲೆ, ಪ್ರತಿಭಟನೆ, ಒಂದು ಸಮುದಾಯ, ಇನ್ನೊಂದು ಸಮುದಾಯ ಮೇಲೆ ಆಕ್ರೋಶ ವ್ಯಕ್ತಪಡಿಸುತ್ತಿತ್ತು….ಕೊಲೆಗಾರನನ್ನು ಹಿಡಿಯದೇ ಹೋದರೆ ಗಲಾಟೆಗಳು ಜೋರಾಗುತ್ತಿತ್ತು..ಈ ಹಿನ್ನೆಲೆಯಲ್ಲಿ ಕೊಲೆಗಾರನನ್ನು ಹಿಡಿಯುವುದು ಅಷ್ಟೊಂದು ಸುಲಭವಾಗಿರಲಿಲ್ಲ. ಆಗ ಆಗಿನ ಎಸ್ಪಿ ಹನುಮಂತರಾಯ ಪ್ರಕರಣವನ್ನು ಸೂಪರ್ ಕಾಪ್ ದೇವರಾಜ್ ಗೆ ವಹಿಸಿದ್ದರು..

ಯಾವ ತನಿಖೆಗೆ ಪ್ರಶಸ್ತಿ :
ಕೆಲ ವರ್ಷಗಳ ಹಿಂದೆ ಚುನಾವಣೆಯ ಕಾವು ಗ್ರಾಮಗಳಲ್ಲಿ ಜೋರಾಗಿತ್ತು. ಹುಣಸಘಟ್ಟ ಗ್ರಾಮದ ಮದರಸ ಆವರಣದಲ್ಲಿ ಡಿ.20, 2020ರಂದು ವೃದ್ಧ ನಜೀರ್‌ ಅಹಮದ್‌ (50) ಎಂಬುವರ ಕೊಲೆ ನಡೆದು ಹೋಗಿತ್ತು. ಚುನಾವಣೆ ವೇಳೆ ನಡೆದ ಕೊಲೆ ಹಿನ್ನೆಲೆಯಲ್ಲಿ ಪ್ರತಿಭಟನೆಗಳು ಜೋರಾಗಿದ್ದವು. ಬಳಿಕ ಸಿಪಿಐ ಟಿ.ವಿ. ದೇವರಾಜ್‌ ನೇತೃತ್ವದ ತಂಡ ಕೇಸ್‌ನ ತನಿಖೆ ಕೈಗೆತ್ತಿಕೊಂಡಿತ್ತು.

ಸತ್ಯಾಸತ್ಯತೆ ತಿಳಿಯಲು ಸಿಪಿಐ ದೇವರಾಜ್‌ ಅವರು ಕೊಲೆಯಾದ ಸ್ಥಳವಾದ ಮದರಸದ ಸುತ್ತ ಪರಿಶೀಲನೆ ನಡೆಸಿದರು. ಕೊಲೆಯಾದ ದೇಹವನ್ನು ತೋಟದತ್ತ ಎಳೆದುಕೊಂಡು ಹೋಗುವ ವೇಳೆ ರಕ್ತದ ಹನಿಗಳು ಬಿದ್ದಿರುವುದನ್ನು ಗಮನಿಸಿದರು. ಆಗ ಕೊಲೆ ಮಾಡಿದ ವ್ಯಕ್ತಿಯ ಕೈಗೆ ಗಾಯವಾಗಿರುವ ಬಗ್ಗೆ ಅನುಮಾನ ಬಂದು, ಪೊಲೀಸ್‌ ನಾಯಿ ‘ತುಂಗಾ’ಳನ್ನು ಕರೆದುಕೊಂಡು ಬಂದು ಶೋಧಿಸಲಾಯಿತು. ಸಮೀಪ ಇರುವ ಆಸ್ಪತ್ರೆಯ ವೈದ್ಯ-ರನ್ನು ವಿಚಾರಿಸಲಾಯಿತು. ಆಗ ಇದೇ ಗ್ರಾಮದ ಶೊಯಿಬ್‌ ಅಕ್ತರ್‌ ಎಂಬಾತನ ಕೈಗೆ ಪೆಟ್ಟಾಗಿದ್ದು, ಅವನು ಬ್ಯಾಂಡೇಜ್‌ ಹಾಕಿಸಿಕೊಂಡ ಬಗ್ಗೆ ಮಾಹಿತಿ ತಿಳಿಯಿತು. ಗಾಯಗೊಂಡವನ ಮನೆಯಲ್ಲಿ ಹುಡುಕಾಟ ನಡೆಸಿದಾಗ ರಕ್ತ ಮೆತ್ತಿಕೊಂಡಿರುವ ನೋಟುಗಳು ಪತ್ತೆಯಾದವು. ಹೆಚ್ಚಿನ ವಿಚಾರಣೆ ನಡೆಸಿದಾಗ ಸ್ನೇಹಿತ ಮುಮ್ತಕಿಂ ಜತೆಗೂಡಿ ಕೊಲೆ ಮಾಡಿರುವುದಾಗಿ ಆರೋಪಿ ಬಾಯಿ ಬಿಟ್ಟ.

ರಕ್ತದ ಜಾಡು ಹಿಡಿದು ಪತ್ತೆ :

ಮದರಸಾದ ಆವರಣದ ಬಳಿ ಬಿದ್ದ ರಕ್ತದ ಹನಿ, ಗೋಡೆಗೆ ಅಂಟಿಕೊಂಡಿದ್ದ ರಕ್ತದ ಫಿಂಗರ್‌ ಪ್ರಿಂಟ್ಸ್‌ , ಚಪ್ಪಲಿಯ ಗುರುತು, ಕೊಲೆ ಮಾಡಿದ ರಕ್ತಸಹಿತ ಬಟ್ಟೆ ಪ್ರಮುಖ ಸಾಕ್ಷಿಯಾಯಿತು. ಆರೋಪಿಯ ಮೊಬೈಲ್‌ ಸೀಜ್‌ ಮಾಡಿದಾಗ ಡಿ.5ಕ್ಕೆ ಫ್ಲಿಫ್‌ಕಾರ್ಟ್‌ನಲ್ಲಿ ಡ್ರ್ಯಾಗರ್‌ ಬುಕ್‌ ಮಾಡಿರುವುದು ಗೊತ್ತಾಯಿತು. ಮೊಬೈಲ್‌ನಲ್ಲಿದ್ದ ಡ್ರ್ಯಾಗರ್‌ ಚಿತ್ರ ಮತ್ತು ಕೊಲೆ ಮಾಡಿದ್ದ ಡ್ರ್ಯಾಗರ್‌ ಎರಡೂ ಒಂದೇ ಆಗಿತ್ತು. ಇವಿಷ್ಟೂ ಮಾಹಿತಿಗಳನ್ನು ಹಿಡಿದುಕೊಂಡು ಆರೋಪಿಗಳನ್ನು ಜೈಲಿಗೆ ಅಟ್ಟಲಾಯಿತು. ಇವರಿಬ್ಬರ ಜತೆಗೆ ಸಾಕ್ಷಿಗಳನ್ನು ನಾಶಪಡಿಸಿದ ಮೂವರನ್ನು ಬಂಧಿಸಲಾಗಿತ್ತು.

ಕೊಲೆ ಮಾಡಿದ್ದು ಏಕೆ?
ಕೊಲೆಯಾದ ನಜೀರ್‌ ಅಹಮದ್‌ ಒಬ್ಬಂಟಿಯಾಗಿದ್ದ. ಮದುವೆಯೂ ಆಗಿರಲಿಲ್ಲ. ತಾನು ದುಡಿದ ಹಣವನ್ನು ಜೇಬಿನಲ್ಲಿ ಕೂಡಿಟ್ಟುಕೊಂಡು ಮದರಸದ ಆವರಣದಲ್ಲಿ ಮಲಗುತ್ತಿದ್ದ. ಆತನ ಬಳಿ 1.11 ಲಕ್ಷ ರೂ. ಇತ್ತು. ಆರೋಪಿಗಳು ಇದರ ಮೇಲೆ ಕಣ್ಣಿಟ್ಟು ಕೊಲೆ ಮಾಡಿದ್ದರು.ಈ ಹಿನ್ನೆಲೆಯಲ್ಲಿ ಕೇಂದ್ರದ ಪ್ರಶಸ್ತಿ ನೀಡಲಾಗಿದೆ.

Leave a Reply

Your email address will not be published. Required fields are marked *

error: Content is protected !!