ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ರೈತ ಭವನ ಪುಷ್ಕರಣಿ ನಿರ್ಮಾಣಕ್ಕೆ ಶಂಕು ಸ್ಥಾಪನೆ

ಬಾಳೆಹೊನ್ನೂರು: ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದ ಪರಿಸರದಲ್ಲಿ ಕರ್ನಾಟಕ ನೀರಾವರಿ ನಿಗಮದಿಂದ 4 ಅಂತಸ್ತಿನ ರೈತ ಭವನ ಹಾಗೂ ಸಣ್ಣ ನೀರಾವರಿ ಇಲಾಖೆಯಿಂದ ಪುಷ್ಕರಣಿ ನಿರ್ಮಾಣ ಕಾರ್ಯಕ್ಕೆ ಸೋಮವಾರ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಶಂಕು ಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ರಂಭಾಪುರಿ ಜಗದ್ಗುರುಗಳು, ಶ್ರೀ ಪೀಠಕ್ಕೆ ಆಗಮಿಸುವ ಯಾತ್ರಾರ್ಥಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು ಅವರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಸರ್ಕಾರದ ನೆರವಿನಿಂದ ಈ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಸಣ್ಣ ನೀರಾವರಿ ಇಲಾಖೆಯಿಂದ 3 ಕೋಟಿ ರೂ. ವೆಚ್ಚದಲ್ಲಿ 100×80 ಅಗಲ, 12 ಅಡಿ ಆಳದ ಪುಷ್ಕರಣಿ ನಿರ್ಮಾಣವಾಗಲಿದ್ದು, ಇದರಿಂದ ಶ್ರೀ ಪೀಠಕ್ಕೆ ಆಗಮಿಸುವ ಭಕ್ತರಿಗೆ ಸ್ನಾನಕ್ಕೆ ಅನುಕೂಲವಾದರೆ ಅಂತರ್ಜಲವೂ ಹೆಚ್ಚಾಗಲಿದೆ. ಕರ್ನಾಟಕ ನೀರಾವರಿ ನಿಗಮದಿಂದ ರೈತ ಭವನದ ಹೆಸರಿನಲ್ಲಿ 4 ಕೋಟಿ ರೂ.ವೆಚ್ಚದಿಂದ ನಿರ್ಮಾಣವಾಗಲಿರುವ 4 ಅಂತಸ್ತಿನ ಯಾತ್ರಿ ನಿವಾಸದ ಮೊದಲ ಹಂತದಲ್ಲಿ 2 ಅಂತಸ್ತು ಪೂರ್ಣಗೊಳಿಸುವ ಯೋಜನೆ ಇದೆ. ಪ್ರತಿ ಅಂತಸ್ತಿನಲ್ಲಿ 22 ರೂಮುಗಳು ಇರುತ್ತವೆ.
ಇದರಿಂದ ವಿಶೇಷವಾಗಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಶ್ರಾವಣ ಮಾಸದಲ್ಲಿ ಭಕ್ತರಿಗೆ ವಾಸ್ತವ್ಯದ ತೊಂದರೆ ನಿವಾರಿಸಲು ಸಹಕಾರಿಯಾಗಲಿವೆ. ಯಾತ್ರಾರ್ಥಿಗಳಿಗೆ ಮೂಲ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಈ ಎಲ್ಲ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ನೀರಾವರಿ ನಿಗಮದ ಇಇ ಜಗದೀಶ್, ಎಇಇ ರವಿಕುಮಾರ್, ಗುತ್ತಿಗೆದಾರ ಋಷ್ಯಶೃಂಗ, ಗೌರೀಶ, ಸಣ್ಣ ನೀರಾವರಿ ಇಲಾಖೆ ಇಇ ದಕ್ಷಿಣಾಮೂರ್ತಿ, ಎಇಇ ಭರತ್, ಮೂಡ್ಲಗಿರಿಯಪ್ಪ, ಶ್ರೀ ಪೀಠದ ಸಿಬ್ಬಂದಿ ರೇಣುಕ ಶಾಸ್ತ್ರಿ, ಪ್ರಕಾಶ ಶಾಸ್ತ್ರಿ, ಚಂದ್ರಶೇಖರಯ್ಯ, ಗದಿಗೆಯ್ಯ ಹಿರೇಮಠ, ಅಭಿನವ ಘನಲಿಂಗ ದೇವರು, ವಿಶ್ವನಾಥ ಹಿರೇಮಠ ಮುಂತಾದವರು ಇದ್ದರು.

Leave a Reply

Your email address will not be published. Required fields are marked *

error: Content is protected !!