ಸಂಭಾವನೆ ಪಡೆಯದೆ ಲಿಡ್ಕರ್‌ ರಾಯಭಾರಿಯಾದ ಡಾಲಿ ಧನಂಜಯ್‌!

lidkar-ambassador-dolly-dhananjay-officially

ಬೆಂಗಳೂರು; ಡಾ. ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ (ಲಿಡ್ಕರ್)ಕ್ಕೆ ಇದೇ ಮೊದಲ ಬಾರಿಗೆ ರಾಯಭಾರಿಯನ್ನು ಆಯ್ಕೆ ಮಾಡಲಾಗಿದೆ. ʼನಟ‌ ರಾಕ್ಷಸʼ ಡಾಲಿ ಧನಂಜಯ್ ಲಿಡ್ಕರ್‌ಗೆ ರಾಯಭಾರಿಯಾಗಿದ್ದಾರೆ. ಅಂಬೇಡ್ಕರ್ ಮಹಾಪರಿ ನಿರ್ವಾಣ ದಿನದ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಡಿ.6) ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಗೌರವ ನಮನ ಸಲ್ಲಿಸಿ, ಖ್ಯಾತ ನಟ ಡಾಲಿ ಧನಂಜಯ್ ಅವರನ್ನು ಲಿಡ್ಕರ್ ಬ್ರ್ಯಾಂಡ್‌ ರಾಯಭಾರಿಯಾಗಿ ಘೋಷಣೆ ಮಾಡಿದರು. ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ಮಾಜಿ ಸಚಿವ ಹೆಚ್. ಆಂಜನೇಯ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.

ಸ್ಯಾಂಡಲ್‌ವುಡ್ ನಟ, ನಿರ್ಮಾಪಕನಾಗಿ ಡಾಲಿ ಸಿಕ್ಕಾಪಟ್ಟೆ ಬ್ಯುಸಿ ಇರುವ ಸ್ಟಾರ್. ನಟನೆ, ನಿರ್ಮಾಣದ ಜತೆಗೀಗ ಧನಂಜಯ ಜಾಹೀರಾತು ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಮೊದಲ ಬಾರಿಗೆ ಡಾಲಿ ಸರ್ಕಾರದ ಜಾಹೀರಾತಿನಲ್ಲಿ ಮಿಂಚುವ ಮೂಲಕ ಲಿಡ್ಕರ್ ಬ್ರ್ಯಾಂಡ್‌ ಪ್ರಮೋಟ್ ಮಾಡುತ್ತಿದ್ದಾರೆ. ಲಿಡ್ಕರ್‌ನಲ್ಲಿ 50 ಸಾವಿರಕ್ಕೂ ಹೆಚ್ಚು ಚರ್ಮ ಕುಶಲಕರ್ಮಿಗಳ ಕುಟುಂಬವಿದೆ. ಚರ್ಮ ಕೈಗಾರಿಕೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಮುಂದಾಗಿರುವ ಸರ್ಕಾರ ಸ್ಯಾಂಡಲ್‌ವುಡ್ ಸ್ಟಾರ್ ಧನಂಜಯ್ ಅವರನ್ನು ರಾಯಾಭಾರಿಯಾಗಿ ನೇಮಕಮಾಡಿದೆ.

ಮುಖ್ಯಮಂತ್ರಿ @siddaramaiah ಅವರು ಅಂಬೇಡ್ಕರ್ ಮಹಾಪರಿನಿರ್ವಾಣ ದಿನದ ಅಂಗವಾಗಿ ಇಂದು ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಗೌರವ ನಮನ ಸಲ್ಲಿಸಿ, ಖ್ಯಾತ ನಟ ಡಾಲಿ ಧನಂಜಯ್ ಅವರನ್ನು ಲಿಡ್ಕರ್ ಬ್ರಾಂಡ್ ರಾಯಭಾರಿಯಾಗಿ ಘೋಷಣೆ ಮಾಡಿದರು.
ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ಮಾಜಿ ಸಚಿವ ಹೆಚ್. ಆಂಜನೇಯ… pic.twitter.com/abIO7Lk3nX

— CM of Karnataka (@CMofKarnataka) December 6, 2023

ರಾಯಭಾರಿಯಾಗಿ ಆಯ್ಕೆಯಾದ ಬಳಿಕ ಮಾತನಾಡಿದ ನಟ ಧನಂಜಯ್ “ನಾನು ಮೊದಲ ಬಾರಿಗೆ ರಾಯಭಾರಿ ಆಗುತ್ತಿದ್ದೇನೆ. ಲಿಡ್ಕರ್ ವ್ಯವಸ್ಥಾಪಕ ನಿರ್ದೇಶಕಿ ಕೆ.ಎಂ.ಎಸ್ ವಸುಂಧರಾ ಅವರು ಈ ಉದ್ಯಮ ನಂಬಿಕೊಂಡು 50 ಸಾವಿರ ಕುಟುಂಬಗಳಿವೆ ಎಂದಾಗ ಖುಷಿಯಾಯಿತು. ನಮ್ಮ ಕರ್ನಾಟಕದಲ್ಲಿ ಕಲ್ಯಾಣಮ್ಮ ಮತ್ತು ಹರಳಯ್ಯರಂತಹ ಸಾವಿರಾರು ಜನ ಕುಶಲಕರ್ಮಿಗಳಿದ್ದಾರೆ. ನಮ್ಮದೇ ಆದ ಬ್ರ್ಯಾಂಡಿಗೆ ನಾವು ಸಹಾಯ ಮಾಡಬೇಕು ಎನ್ನುವ ಕಾರಣಕ್ಕೆ ಇದನ್ನು ಒಪ್ಪಿಕೊಂಡೆ. ಮೇಕ್ ಇನ್ ಇಂಡಿಯಾ ಹೇಗಿದೆಯೋ ಹಾಗೆ ʻಮೇಕ್ ಇನ್ ಕರ್ನಾಟಕʼ ಆಗಬೇಕು. ಲಿಡ್ಕರ್‌ಗೆ ಸಪೋರ್ಟ್ ಮಾಡುವುದರಿಂದ ಅದನ್ನೆ ನಂಬಿಕೊಂಡ ಕುಟುಂಬಗಳಿಗೆ ಸಹಾಯವಾಗಲಿದೆ. ಮೈಸೂರ್ ಸಿಲ್ಕ್ ಹೇಗಿದಿಯೋ ಹಾಗೆ ನಮ್ಮದೆ ಬ್ರ್ಯಾಂಡ್ ಇರಬೇಕುʼʼ ಎಂದರು.

ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿ, ‘ಖ್ಯಾತ ನಟ ಡಾಲಿ ಧನಂಜಯ ಅವರನ್ನು ಲಿಡ್ಕರ್ ರಾಯಭಾರಿಯಾಗಿ ಆಯ್ಕೆ ಮಾಡಿದ್ದೀವಿ. ಅವರು ಉಚಿತವಾಗಿ ರಾಯಭಾರಿ ಕೆಲಸ ಮಾಡುತ್ತಿದ್ದಾರೆ. ಸಾಮಾಜಿಕ ಕಳಕಳಿ ಇರುವ ನಟ, ಅವರನ್ನು ರಾಯಭಾರಿಯನ್ನಾಗಿ ಮಾಡಿದ್ದು ಅರ್ಥಪೂರ್ಣವಾಗಿದೆ. ಇದರಿಂದ ಚರ್ಮ ಉದ್ಯಮಕ್ಕೆ ಉತ್ತೇಜನ ಆಗುತ್ತೆ’ ಎಂದು ಹೇಳಿದರು. ಲಿಡ್ಕರ್‌ ಕೇಂದ್ರಕ್ಕೆ ಭೇಟಿ ನೀಡಿದ ನಟ ಧನಂಜಯ ಅವರಿಗೆ ವಿಶೇಷವಾಗಿ ತಯಾರಿಸಿದ್ದ ಲಿಡ್ಕರ್ ಚಪ್ಪಲಿಯನ್ನು ಉಡುಗೊರೆಯಾಗಿ ನೀಡಿದರು. ಧನಂಜಯವರಿಗಾಗಿಯೇ ವಿಶೇಷವಾಗಿ ಚಪ್ಪಲಿಯನ್ನು ತಯಾರಿಸಲಾಗಿತ್ತು. ಡಾಲಿ ಹೊಸ ಚಪ್ಪಲಿಯನ್ನು ಧರಿಸಿ ಅಲ್ಲಿನ ಕುಶಲಕರ್ಮಿಗಳ ಜತೆ ಮಾತನಾಡಿ ಖುಷಿಪಟ್ಟರು

ಧನಂಜಯ್‌ ಅವರು ಸದ್ಯ ಸಾಲು ಸಾಲು ಸಿನಿಮಾಗಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಧನಂಜಯ್ ತಮ್ಮದೇ ಡಾಲಿ ಸಂಸ್ಥೆ ನಿರ್ಮಾಣದ ‘ಟಗರು ಪಲ್ಯ’ ಸಿನಿಮಾ ರಿಲೀಸ್ ಮಾಡಿದ್ದರು. ಟಗರು ಪಲ್ಯ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿರ್ಮಾಣದ ಜೊತೆಗೆ ಡಾಲಿ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದ ಜೊತೆಗೆ ತೆಲುಗಿನ ಪುಷ್ಪ-2 ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ. ಈ ನಡುವೆ ಜಾಹೀರಾತು ಲೋಕಕ್ಕೆ ಡಾಲಿ ಲಗ್ಗೆ ಇಟ್ಟಿರುವುದು ಅವರ ಅಭಿಮಾನಿ ಬಳಗಕ್ಕೆ ಸಂತಸ ತಂದಿದೆ .

Leave a Reply

Your email address will not be published. Required fields are marked *

error: Content is protected !!