ಲೋಕಸಭಾ ಚುನಾವಣೆ-2024, ಮುದ್ರಣ ಮಾಲೀಕರು, ಕೇಬಲ್ ಟಿ.ವಿ. ಆಪರೇಟರ್ ಜೊತೆ ಸಭೆ, ನಿಯಮ ಪಾಲನೆ ಕಡ್ಡಾಯ,

ಲೋಕಸಭಾ ಚುನಾವಣೆ-2024

ದಾವಣಗೆರೆ; ಮುಂಬರುವ ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಾದಾಗಿನಿಂದ ಮುದ್ರಕರು ಹಾಗೂ ಕೇಬಲ್ ಆಪರೇಟರ್‍ಗಳು ಚುನಾವಣಾ ನಿಯಮಗಳ ಪಾಲನೆ ಕಡ್ಡಾಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮುಂಬರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮುದ್ರಣ ಮಾಲಿಕರು, ಕೇಬಲ್ ಆಪರೇಟರ್‍ಗಳೊಂದಿಗೆ ಸಭೆ ನಡೆಸಿದರು. ಚುನಾವಣಾ ಸಂಬಂಧಿ ಕರಪತ್ರಗಳು, ಪೋಸ್ಟರ್‍ಗಳನ್ನು ಮುದ್ರಣ ಮಾಡುವ ಮುದ್ರಕರು ಕರಪತ್ರ, ಪೋಸ್ಟರ್ ಹಿಂಭಾಗದಲ್ಲಿ ಮುದ್ರಣ ಮಾಲಿಕರ ಸಂಪೂರ್ಣ ವಿವರ ಹಾಗೂ ಮುದ್ರಣ ಮಾಡುತ್ತಿರುವ ಪ್ರತಿಗಳ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಬೇಕೆಂದರು.
ಮುದ್ರಣಕ್ಕೆ ನೀಡುವವರಿಂದ ಅಪೆಂಡಿಕ್ಸ್-ಎ ರಡಿ ಅರ್ಜಿಯ ಸಂಪೂರ್ಣ ವಿವರ ಪಡೆದಿರಬೇಕು. ಮುದ್ರಣ ಮಾಡಿದ ಎರಡು ದಿನಗಳೊಳಗಾಗಿ ಮುದ್ರಕರು ಅಪೆಂಡಿಕ್ಸ್-ಬಿ ರಡಿ ಜಿಲ್ಲಾ ದಂಡಾಧಿಕಾರಿಗಳಿಗೆ ಸಲ್ಲಿಸಬೇಕು. ಪ್ಲೆಕ್ಸ್ ಸೇರಿದಂತೆ, ಪೋಸ್ಟರ್‍ಗಳನ್ನು ಮುದ್ರಣ ಮಾಡುವಾಗ ಪ್ಲಾಸ್ಟಿಕ್ ಬಳಸಬಾರದು. ಪ್ಲೆಕ್ಸ್ ಮುದ್ರಣವನ್ನು ಇಕೋಪ್ರೆಂಡ್ಲಿ ಕ್ಲಾತ್‍ನಲ್ಲಿ ಮುದ್ರಣ ಮಾಡುವ ಮೂಲಕ 2024 ರ ಲೋಕಸಭಾ ಚುನಾವಣೆಯನ್ನು ಪ್ಲಾಸ್ಟಿಕ್ ಮುಕ್ತ ಚುನಾವಣೆಯನ್ನಾಗಿ ಮಾಡೋಣ ಎಂದರು.
ಕೇಬಲ್ ಆಪರೇಟರ್‍ಗಳು ಚುನಾವಣೆಗೆ ಸಂಬಂಧಿಸಿದ ಜಾಹಿರಾತುಗಳನ್ನು ಪ್ರಸಾರ ಮಾಡುವಾಗ ಜಿಲ್ಲಾ ಎಂ.ಸಿ.ಎಂ.ಸಿ.ಯಿಂದ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು. ಯಾವುದೇ ವಿದ್ಯುನ್ಮಾನ ಮಾಧ್ಯಮದಲ್ಲಿ ಜಾಹಿರಾತು ಪ್ರಕಟಿಸುವಾಗ ಜಾಹಿರಾತು ವಿವರದ ಅನುವಾದಿತ ಯಥಾಪ್ರತಿಯೊಂದಿಗೆ ರಾಷ್ಟ್ರೀಯ ಪಕ್ಷ, ಅಭ್ಯರ್ಥಿಯಾಗಿದ್ದಲ್ಲಿ ಕನಿಷ್ಠ 3 ದಿನ ಮೊದಲು, ಇತರೆ ಪಕ್ಷ, ಪಕ್ಷೇತರ ಅಭ್ಯರ್ಥಿಯಾಗಿದ್ದಲ್ಲಿ 7 ದಿನ ಮೊದಲು ಅನುಬಂಧ-ಎ ಅರ್ಜಿ ರಡಿ ಸಲ್ಲಿಸಬೇಕು. ಅನುಬಂಧ.ಬಿ ರಡಿ ಅನುಮತಿ ನೀಡಲಾಗುತ್ತದೆ. ಈ ಸಮಿತಿಗೆ ಜಿಲ್ಲಾಧಿಕಾರಿಯವರು ಅಧ್ಯಕ್ಷರಾಗಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಜಾಹಿರಾತು ಪ್ರಸಾರ ಮಾಡಲು ಸಹ ರಾಜಕೀಯ ಸಂಬಂಧಿ ಜಾಹಿರಾತುಗಳಿಗೆ ಅನುಮತಿ ಕಡ್ಡಾಯ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್, ಅಪರ ಜಿಲ್ಲಾಧಿಕಾರಿ ಸೈಯ್ಯದಾ ಅಫ್ರೀನ್ ಭಾನು ಎಸ್.ಬಳ್ಳಾರಿ ಹಾಗೂ ಮುದ್ರಕರಾದ ಮುರುಘೇಶಪ್ಪ.ಕೆ, ಪ್ಲೆಕ್ಸ್ ಮುದ್ರಕರ ಸಂಘದ ಅಧ್ಯಕ್ಷ ಡಿ.ಸಿ.ಶ್ರೀನಿವಾಸ್, ದಾವಣಗೆರೆ ವಿಒನ್ ಚಿದಾನಂದ.ಕೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!