ಡಾ.ಅಂಬೇಡ್ಕರ್ ಆಶಯ ಸಾಕಾರಗೊಳಿಸಿ: ಪ್ರೊ.ಕುಂಬಾರ
ದಾವಣಗೆರೆ: ಸಂವಿಧಾನದ ಮೂಲ ಉದ್ದೇಶಗಳನ್ನು ಅರ್ಥ ಮಾಡಿಕೊಂಡು ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯಗಳನ್ನು ಸಾಕಾರಗೊಳಿಸಲು ದೇಶದ ಪ್ರತಿಯೊಬ್ಬರೂ ಮೊದಲ ಆದ್ಯತೆ ನೀಡಬೇಕು ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಸಲಹೆ ನೀಡಿದರು.
ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಭಾನುವಾರ ಏರ್ಪಡಿಸಿದ್ದ ಡಾ.ಬಿ.ಆರ್ ಅಂಬೇಡ್ಕರ್ ಅವರ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿ ಮಾತನಾಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಶೋಷಿತ ಸಮುದಾಯಗಳಿಗೆ ಮೀಸಲಾತಿ, ಸಾಮಾಜಿಕ ನ್ಯಾಯ, ಮಹಿಳೆಯರಿಗೆ ಸಮಾನತೆ, ದುರ್ಬಲ ವರ್ಗದವರಿಗೆ ಶೈಕ್ಷಣಿಕ, ಆರ್ಥಿಕ ಬಲ ನೀಡಲು ಕಾರಣರಾಗಿದ್ದಾರೆ ಎಂದು ಹೇಳಿದರು.
ವೈಚಾರಿಕ ಪ್ರಜ್ಞೆ, ಸಾಮಾಜಿಕ ಮೌಲ್ಯಗಳ ಸಂವಿಧಾನದಲ್ಲಿ ಮೀಸಲಾತಿ ರೂಪಿಸಿ, ಸಮಾಜದ ಏಳ್ಗೆಗೆ ಕಾರಣರಾಗಿರುವ ಡಾ.ಅಂಬೇಡ್ಕರ್ ಅವರ ಕನಸಿನ ಸದೃಢ ಸಮ ಸಮಾಜ ನಿರ್ಮಾಣ ಪರಿಕಲ್ಪನೆಗೆ ನಮ್ಮ ಕೊಡುಗೆ ಏನು ಎಂಬುದನ್ನು ಅವಲೋಕನ ಮಾಡಿಕೊಳ್ಳಬೇಕು ಎಂದರು.
ಸಮಾಜಕ್ಕೆ ಡಾ.ಅಂಬೇಡ್ಕರ್ ಅವರ ಆದರ್ಶಗಳನ್ನು ತಿಳಿಸಬೇಕು. ನೋವು, ಅನ್ಯಾಯಕ್ಕೆ ಒಳಗಾದ ಜನರಿಗೆ ಸ್ಪಂದಿಸಿ, ಪರಿಹಾರಕ್ಕೆ ಸಂವಿಧಾನಬದ್ಧವಾಗಿ ನ್ಯಾಯ ಒದಗಿಸಬೇಕು. ಜಾಗೃತ ಸಮಾಜ ನಿರ್ಮಾಣದ ಸಂಕಲ್ಪ ಮಾಡಬೇಕು ಎಂದು ಸಲಹೆ ನೀಡಿದರು.
ಕುಲಸಚಿವ ಪ್ರೊ.ಯು.ಎಸ್.ಮಹಾಬಲೇಶ್ವರ ಮಾತನಾಡಿ,ಸಾಕಷ್ಟು ಕಷ್ಟ, ನೋವುಗಳನ್ನು ಅನುಭವಿಸಿದ್ದ ಅಂಬೇಡ್ಕರ್ ಅವರು ತಮ್ಮ ಛಲ ಸಾಧನೆಯ ಮೂಲಕ ಭವ್ಯ ಭಾರತದ ಕನಸನ್ನು ನನಸಾಗಲು ಯತ್ನಿಸಿದ ದೇಶದ ಪ್ರಮುಖ ನಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಅಂಬೇಡ್ಕರ್ ಅವರ ಸಾಧನೆ ಮತ್ತು ಅವರು ದೇಶಕ್ಕೆ ಕೊಟ್ಟ ಕೊಡುಗೆಯನ್ನು ಸ್ಮರಿಸಲು ಪ್ರತಿವರ್ಷ ಏಪ್ರಿಲ್ 14ರಂದು ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಗುತ್ತದೆ ಎಂದು ಹೇಳಿದರು.
ಪರೀಕ್ಷಾಂಗ ಕುಲಸಚಿವ ಪ್ರೊ.ರಮೇಶ್, ಪ್ರೊ.ರಾಮಲಿಂಗಪ್ಪ, ಪ್ರೊ.ಲಕ್ಷ್ಮಣ, ಪ್ರಾಧ್ಯಾಪಕರಾದ ಪ್ರೊ.ವೆಂಕಟರಾವ್ ಪಲಾಟೆ, ಪ್ರೊ.ಬಿ.ಶಶಿಧರ್, ಪ್ರೊ.ಕೆ.ವೆಂಕಟೇಶ ಉಪಸ್ಥಿತರಿದ್ದರು. ಡಾ.ನಿರಂಜನ ಸ್ವಾಗತಿಸಿದರು. ಡಾ.ಸಿದ್ದಪ್ಪ ಕಕ್ಕಳಮೇಲಿ ಕಾರ್ಯಕ್ರಮ ನಿರೂಪಿಸಿದರು.