ಪಾಕಿಸ್ತಾನದ ಮೃಗಾಲಯದಲ್ಲಿ ಹುಲಿಗೆ ಆಹಾರವಾದ ಪ್ರವಾಸಿಗ!

ಇಸ್ಲಾಮಾಬಾದ್: ಪಾಕಿಸ್ತಾನದ ಮೃಗಾಲಯದಲ್ಲಿ ಹುಲಿ ಇರುವ ಆವರಣಕ್ಕೆ ವ್ಯಕ್ತಿಯೊಬ್ಬ ಬಿದ್ದು ಹುಲಿಗೆ ಆಹಾರವಾಗಿರುವ ಘಟನೆ ನಡೆದಿದೆ.
ಪಾಕಿಸ್ತಾನದ ಪಂಜಾಬ್‌ನ ಪೂರ್ವ ಪ್ರಾಂತ್ಯದ ಬಹವಾಲ್‌ಪುರದ ಶೇರ್‌ಬಾಗ್ ಮೃಗಾಲಯದಲ್ಲಿ ಬುಧವಾರದಂದು ಎಂದಿನಂತೆ ಸಿಬ್ಬಂದಿ ಶುಚಿಗೊಳಿಸುತ್ತಿದ್ದ ಸಂದರ್ಭ ಹುಲಿಯ ಬಾಯಲ್ಲಿ ಶೂ ಕಾಣಿಸಿಕೊಂಡಿತ್ತು. ಈ ಶೂ ಎಲ್ಲಿಂದ ಬಂತು ಎಂದು ಪರಿಶೀಲಿಸಿದಾಗ ಹುಲಿ ಇರುವ ಆವರಣದ ಒಳಗಡೆಯೇ ವ್ಯಕ್ತಿಯ ಶವ ಪತ್ತೆಯಾಗಿದೆ.
ಹುಲಿಯ ಬಾಯಲ್ಲಿ ಶೂ ಕಾಣಿಸಿಕೊಳ್ಳುತ್ತಲೇ ಅನುಮಾನಗೊಂಡ ಸಿಬ್ಬಂದಿ ಗುಹೆಯೊಳಗೆ ಪರಿಶೀಲಿಸಿದಾಗ ವ್ಯಕ್ತಿಯ ಶವ ಕಂಡುಬಂದಿದೆ. ಆದರೆ ಪ್ರವಾಸಿಗರು ಆಕಸ್ಮಿಕವಾಗಿ ಹುಲಿ ಇರುವ ಆವರಣದೊಳಗೆ ಬೀಳಲು ಸಾಧ್ಯವೇ ಇಲ್ಲ. ಅದರ ಗೇಟ್‌ಗಳು ಭದ್ರವಾಗಿದೆ. ಹೀಗಾಗಿ ವ್ಯಕ್ತಿ ತಾನಾಗಿಯೇ ಹುಲಿಯ ಆವರಣದೊಳಗೆ ಹೋಗಿರುವ ಶಂಕೆ ವ್ಯಕ್ತಗಿರುವುದಾಗಿ ಬಹವಾಲ್ಪುರದ ಹಿರಿಯ ಸರ್ಕಾರಿ ಅಧಿಕಾರಿ ಜಹೀರ್ ಅನ್ವರ್ ತಿಳಿಸಿದ್ದಾರೆ.
ಹುಲಿ ಇರುವ ಆವರಣ ಭದ್ರವಾಗಿದೆ. ಗುಹೆಯ ಹಿಂದೆ ಮೆಟ್ಟಿಲುಗಳಿವೆ. ಬಹುಶಃ ವ್ಯಕ್ತಿ ಅಲ್ಲಿಂದ ಜಿಗಿದಿರಬಹುದು. ಆದರೆ ಆತ ಯಾರು ಹಾಗೂ ಹೇಗೆ ಬಂದ ಎಂಬುದು ಇನ್ನೂ ನಿಖರವಾಗಿ ತಿಳಿದು ಬಂದಿಲ್ಲ. ಆತನ ಕಾಲು ಛಿದ್ರವಾಗಿದೆ. ಆತ ಸಾವನ್ನಪ್ಪಿ ಹಲವು ಗಂಟೆಗಳೇ ಆಗಿವೆ. ವಿಧಿವಿಜ್ಞಾನ ತಜ್ಞರು ಮೃತದೇಹವನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ವರದಿಗಳ ಪ್ರಕಾರ ಪಂಜಾಬ್‌ನ ವನ್ಯಜೀವಿ ವಿಭಾಗವು ಮೃಗಾಲಯವನ್ನು ನಡೆಸುತ್ತಿದೆ. ಒಬ್ಬ ವ್ಯಕ್ತಿ ಮೃಗಾಲಯದೊಳಗೆ ಪ್ರವೇಶಿಸಲು 50 ರೂ. ಟಿಕೆಟ್ ಖರೀದಿಸಬೇಕು. ಆದರೆ ಪಾಕಿಸ್ತಾನದ ಮೃಗಾಲಯಗಳಲ್ಲಿ ಪ್ರಾಣಿಗಳ ಕ್ಷೇಮವನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪ ಆಗಾಗ ಕೇಳಿಬಂದಿದೆ.