1008 ದಂಪತಿಗಳಿಂದ ನೆರವೇರಿದ ಸಾಮೂಹಿಕ ಲಿಂಗ ಪೂಜೆ

1008 ದಂಪತಿಗಳಿಂದ ನೆರವೇರಿದ ಸಾಮೂಹಿಕ ಲಿಂಗ ಪೂಜೆ

ದಾವಣಗೆರೆ: ಶಿವರಾತ್ರಿ ಅಂಗವಾಗಿ ನಗರದ ನಗರದ ಹೈಸ್ಕೂಲ್ ಮೈದಾನದಲ್ಲಿ ವಿವಿಧ 18 ಸಂಘಟನೆಗಳ ಸಹಯೋಗದೊಂದಿಗೆ ನಡೆದ 1008 ದಂಪತಿ ಏಕಕಾಲದಲ್ಲಿ ಶಿವಲಿಂಗ ಪೂಜೆ ನಡೆಸಿದರು. ಹೆಬ್ಬಾಳು ಸುಕ್ಷೇತ್ರದ ರುದ್ರೇಶ್ವರ ಸ್ವಾಮೀಜಿ ಪೂಜಾ ವಿಧಾನಗಳನ್ನು ಹೇಳಿಕೊಟ್ಟರು
ಶಿವಲಿಂಗಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯದ ಲೀಲಾಜಿ ಮಾತನಾಡಿ, ಉಪವಾಸವೆಂದರೆ ಆಹಾರ ತ್ಯಜಿಸುವುದಲ್ಲ. ಶಿವನನ್ನು ಮನಸ್ಸಿನಲ್ಲಿ ಸದಾ ನೆನಪಿಸಿಕೊಳ್ಳುವುದೇ ನಿಜವಾದ ಉಪವಾಸ. ಕೆಟ್ಟದನ್ನು ಕೇಳಬಾರದು, ನೋಡಬಾರದು, ಕೆಟ್ಟ ಆಲೋಚನೆಗಳನ್ನು ಮಾಡದೇ ಕೆಟ್ಟ ಕೆಲಸಗಳನ್ನು ಮಾಡಬಾರದು ಎಂದು ಸಲಹೆ ನೀಡಿದರು.
ಸಿನಿಮಾ ನೋಡುವ ಮೂಲಕ ಜಾಗರಣೆ ಮಾಡುವುದು ಅಜ್ಞಾನ. ಅದರ ಬದಲು ಜಾಗರೂಕತೆಯಿಂದ ನಡೆಯಬೇಕು. ವರ್ಷಕ್ಕೊಮ್ಮೆ ಉಪವಾಸ, ಜಾಗರಣೆಗಳನ್ನು ಮಾಡುವುದಲ್ಲ. ಬದಲಾಗಿ ನಿತ್ಯವೂ ಶಿವನ ಸ್ಮರಣೆ ಮಾಡಿದರೆ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.


ಕೊಗ್ಗನೂರಿನ ಬೀರಲಿಂಗೇಶ್ವರ ಡೊಳ್ಳಿನ ಯುವಕ ಸಂಘದಿಂದ ಡೊಳ್ಳು ಕುಣಿತ, ಹಾಲೇಶ್ ತಂಡದಿಂದ ಸ್ಯಾಕ್ಸೋಫೋನ್ ವಾದನ ಹಾಗೂ ವಿದುಷಿ ಶುಭದ ಹಾಗೂ ಗಾನ ಸೌರಭ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ನಡೆದ ವೀಣಾ ವಾದನಗಳು ಗಮನ ಸೆಳೆದವು. ರಾಧಾ ಮತ್ತು ತಂಡವರ ಭರತ ನಾಟ್ಯ, ಕನಸು ಡ್ಯಾನ್ಸ್ ಅಕಾಡೆಮಿಯಿಂದ ನಡೆದ ಸಾಮೂಹಿಕ ನೃತ್ಯ ಮನರಂಜಿಸಿದವು. ಹುಚ್ಚೆಂಗಮ್ಮ ಮತ್ತು ತಂಡದಿಂದ ಚೌಡಿಕೆ ಪದ, ಬಸವೇಶ್ವರ ಭಜನಾ ಸಂಘದಿಂದ ಭಜನೆ ಹಾಗೂ ಅಜಯ್‌ನಾರಾಯಣ್‌ ಹಾಗೂ ಆದಿತಿ ಬೃಂಗಿಮಠ್‌ ತಂಡದವರ ಭಕ್ತಿ ಗೀತೆ ಗಾಯನಗಳು ನಡೆದವು.
ಮಹಾನಗರ ಪಾಲಿಕೆ ಸದಸ್ಯ ಬಿ.ಜಿ. ಅಜಯ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪ್ರಚಾರಕ ದೇವಾಲಯಗಳ ಸಂವರ್ಧನಾ ಸಮಿತಿಯ ಕರ್ನಾಟಕ ರಾಜ್ಯ ಸಂಯೋಜಕ ಮನೋಹರ್ ಮಠದ್ ವೇದಿಕೆಯಲ್ಲಿ ಇದ್ದರು. ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಫಾಲಾಕ್ಷಿ ಸ್ವಾಗತಿಸಿದರು. ದಕ್ಷಿಣ ವಲಯದ ಬಿಇಒ ದಾರುಕೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.

Leave a Reply

Your email address will not be published. Required fields are marked *

error: Content is protected !!