ಪೊಲೀಸರು ಹೆಲ್ಮೆಟ್ ಧರಿಸದಿದ್ದರೆ ಡಬ್ಬಲ್ ಫೈನ್
ದಾವಣಗೆರೆ: ಪೊಲೀಸರು ಹೆಲ್ಮೆಟ್ ಧರಿಸದೇ ಇದ್ದರೆ ದುಪ್ಪಟ್ಟು ದಂಡ ವಿಧಿಸಲಾಗುವುದು ಎಂದು ಸಿ.ಬಿ. ರಿಷ್ಯಂತ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ನಗರದ ಪೊಲೀಸರಿಗೆ ಐಎಸ್ಐ ಗುಣಮಟ್ಟದ ಹೆಲ್ಮೆಟ್‌ಗಳನ್ನು ವಿತರಿಸಿ ಅವರು ಮಾತನಾಡಿದರು.
ಹೆಲ್ಮೆಟ್ ಧರಿಸದೇ ಒಬ್ಬರು ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ. ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕಾದ ನಾವೇ ಕಾನೂನು ಉಲ್ಲಂಘಿಸಿದರೆ ಹೇಗೆ? ಪೊಲೀಸರು ಹೆಲ್ಮೆಟ್ ಧರಿಸದೇ ಇರುವ ಫೋಟೊವನ್ನು ಸಾರ್ವಜನಿಕರು ಶೇರ್ ಮಾಡಿದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವು ಎಂದು ಎಚ್ಚರಿಸಿದರು.
ಹೆಲ್ಮೆಟ್ ಧರಿಸಿ ಎಂದು ಬಲವಂತವಾಗಿ ಹೇಳುವುದಲ್ಲ. ನಿಮ್ಮಲ್ಲೇ ಜಾಗೃತಿ ಮೂಡಬೇಕು. ಹೇರ್ ಸ್ಟೈಲ್ ಹಾಳಾಗುತ್ತದೆ ಎಂದು ತಿರಸ್ಕರಿಸುವುದಲ್ಲ. ಜೀವನಕ್ಕಿಂತ ಯಾವುದು ಮುಖ್ಯವಲ್ಲ. ಹೆಲ್ಮೆಟ್ ಒಂದೇ ಅಲ್ಲ. ಯಾವುದೇ ನಿಯಮ ಉಲ್ಲಂಘಿಸಿದರೂ ದಂಡ ವಿಧಿಸಲಾಗುವುದು ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಬಿ.ಬಸರಗಿ, ಸಂಚಾರ ವಿಭಾಗದ ಸಿಪಿಐ ಆರ್.ಪಿ. ಅನಿಲ್ ಇದ್ದರು. ನಗರ ವಿಭಾಗದ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ಎಸ್‌ಐಗಳಾದ ಸೋಮಶೇಖರ್, ಜಯಪ್ರಕಾಶ್, ವೀರಬಸಪ್ಪ, ಜಯಪ್ಪನಾಯ್ಕ ಇದ್ದರು.