ಮಠಾಧೀಶರ ರಾಜಕೀಯ ಪ್ರವೇಶಕ್ಕೆ ಸ್ವಾಗತ: ಈಶ್ವರಪ್ಪ
ಚಿತ್ರದುರ್ಗ: ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀ ಅವರು ಲೋಕಸಭೆಗೆ ಸ್ಪರ್ಧಿಸಿದರೆ, ಮೊದಲು ಖುಷಿ ಪಡುವುದು ನಾನೇ. ದೇಶ ಮತ್ತು ರಾಜ್ಯದ ಒಳಿತು ಬಯಸುವ ಸ್ವಾಮೀಜಿಗಳು ರಾಜಕೀಯ ಪ್ರವೇಶಿಸಿದರೆ, ತಪ್ಪೇನಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಚಿತ್ರದುರ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ವಸ್ವವನ್ನು ತ್ಯಾಗ ಮಾಡಿ ದೇಶ ಮತ್ತು ಸಮಾಜಕ್ಕೆ ಒಳ್ಳೆಯದು ಮಾಡಬೇಕು ಎಂಬ ಉದ್ದೇಶದಿಂದ ಸನ್ಯಾಸತ್ವ ಸ್ವೀಕರಿಸುತ್ತಾರೆ. ರಾಜಕೀಯ ಪ್ರವೇಶಿಸಿ, ಜನೋಪಯೋಗಿ ಕಾರ್ಯದಲ್ಲಿ ತೊಡಗಿದರೆ, ಯಾರೂ ಬೇಡವೆನ್ನುವುದಿಲ್ಲ. ಅವರೂ ಭಾರತೀಯ ಪ್ರಜೆಯಲ್ಲವೇ ಎಂದು ಪ್ರಶ್ನಿಸಿದರು.
ಸ್ವಾಮೀಜಿ ಅವರು ಚಿತ್ರದುರ್ಗ ಕ್ಷೇತ್ರದ ಅಭ್ಯರ್ಥಿಯಾದರೆ ಕೆಲಸ ಮಾಡುತ್ತೇವೆ. ಆದ ಈ ಕುರಿತು ರಾಜ್ಯ ಬಿಜೆಪಿಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಪಕ್ಷದ ರಾಷ್ಟ್ರೀಯ ಘಟಕದಲ್ಲಿ ಆಗಿರುವ ಚರ್ಚೆಯ ಬಗ್ಗೆ ಗಮನಕ್ಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಯಾರನ್ನೂ ಹೊಡೆಯಿರಿ, ಬಡಿಯಿರಿ, ಕಡಿಯಿರಿ ಎಂದು ಹೇಳಿಲ್ಲ. ದೇಶ ವಿಭಜನಯ ಬಗ್ಗೆ ಪ್ರಸ್ತಾಪಿಸಿದವರ ವಿರುದ್ಧ ಕಾನೂನು ರೂಪಿಸುವಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ದೇಶವನ್ನು ತುಂಡು ಮಾಡಿದ ಜಿನ್ನಾ ಮನಸ್ಥಿತಿ ಕಾಂಗ್ರೆಸ್‌ನಲ್ಲಿದೆ. ಹೈಕೋರ್ಟ್ ದಂಡದ ಶಿಕ್ಷೆಗೆ ಗುರಿಯಾಗಿರುವ ಮುಖ್ಯಮಂತ್ರಿಯಿಂದ ಕಲಿಯುವುದು ಏನೂ ಇಲ್ಲ ಎಂದು ಈಶ್ವರಪ್ಪ ಹೇಳಿದರು.