ಮಾದಾರಶ್ರೀ ಮಠಕ್ಕೆ ತಿಮ್ಮರಾಯಪ್ಪ ಜಯಣ್ಣ ಬೇಟಿ; ಶ್ರೀಗಳೊಂದಿಗೆ ಗೌಪ್ಯ ಚರ್ಚೆ ಶ್ರೀಗಳ ಸ್ಪರ್ಧೆಗೆ ಜೆಡಿಎಸ್ ಸಮ್ಮತಿ ?
ಚಿತ್ರದುರ್ಗ: ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಯವರು ಬಿಜೆಪಿ ಅಭ್ಯರ್ಥಿಯಾಗುವ ಬಗ್ಗೆ ಚರ್ಚೆಗಳು ತೀವ್ರಗೊಂಡಿರುವ ಮಧ್ಯೆ ಚಿತ್ರದುರ್ಗ ಲೋಕಸಭಾ ವ್ಯಾಪ್ತಿಯಲ್ಲಿ ಜೆಡಿಎಸ್ ಪಕ್ಷ ಉಸ್ತುವಾರಿಯ ಜವಾಬ್ದಾರಿ ನೀಡಿರುವ ಪಾವಗಡದ ಮಾಜಿ ಶಾಸಕರಾದ ತಿಮ್ಮರಾಯಪ್ಪನವರು ಶನಿವಾರ ಮಾದಾರ ಚೆನ್ನಯ್ಯ ಶ್ರೀಮಠಕ್ಕೆ ತೆರಳಿ ಶ್ರೀಗಳನ್ನು ಬೇಟಿಯಾಗಿ ಗೌರವಿಸಿ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಿದ್ದಾರೆ.
ಲೋಕಸಭಾ ಚುನಾವಣೆಗೆ ಈಗಾಗಲೇ ಬಿಜೆಪಿ ಯೊಂದಿಗೆ ಜೆಡಿಎಸ್ ಪಕ್ಷ ಮೈತ್ರಿಯನ್ನು ಘೋಷಿಸಿಕೊಂಡಿದ್ದು ಬಹುತೇಕ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವುದು ಖಚಿತವಾಗಿದೆ ಈ ಹಿನ್ನೆಲೆಯಲ್ಲಿ ಶನಿವಾರ ಲೋಕಸಭಾ ವ್ಯಾಪ್ತಿಯ ಜೆಡಿಎಸ್ ಮುಖಂಡರ ಅಭಿಪ್ರಾಯ ಸಂಗ್ರಹಿಸಿ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯ ಮತ್ತು ಗೆಲುವಿನ ಬಗ್ಗೆ ತಿಮ್ಮರಾಯಪ್ಪ ಪಕ್ಷದ ಮುಖಂಡರೊಂದಿಗೆ ಚರ್ಚಿಸಿದ್ದಾರೆ.
ತರುವಾಯ ಮಾಧ್ಯಮಗಳಲ್ಲಿ ಬಿತ್ತರವಾದ ವರದಿಯಂತೆ ಮಾದಾರಶ್ರೀ ಗಳವರು ಬಿಜೆಪಿ ಅಭ್ಯರ್ಥಿಯಾಗುವ ಬಗ್ಗೆ ಸುಳಿವು ದೊರೆತಿರುವುದರಿಂದ ತಿಮ್ಮರಾಯಪ್ಪ ಶ್ರೀಮಠಕ್ಕೆ ತೆರಳಿ ಮಾದಾರ ಚನ್ನಯ್ಯ ಶ್ರೀಗಳವರೊಂದಿಗೆ ಗುಪ್ತವಾಗಿ ಚರ್ಚಿಸಿದ್ದಾರೆ ಬಹುತೇಕ ಜೆಡಿಎಸ್ ಪಕ್ಷವು ಕೂಡ ಮೈತ್ರಿ ಅಭ್ಯರ್ಥಿಯಾಗಿ ಮಾದಾರ ಚನ್ನಯ್ಯ ಶ್ರೀಗಳವರು ಅಭ್ಯರ್ಥಿಯಾಗಲು ಸೂಕ್ತ ಎಂಬ ಒಲವು ಹೊಂದಿದೆ ಎನ್ನಲಾಗಿದೆ, ಚರ್ಚೆಯ ವೇಳೆ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ ಜಯಣ್ಣರ ಉಪಸ್ಥಿತಿಯಲ್ಲಿ ಚುನಾವಣೆ ಕುರಿತು ಚರ್ಚಿಸಿದ್ದಾರೆ ಬಿಜೆಪಿ ಪಕ್ಷವು ಮತ್ತೆ ಕ್ಷೇತ್ರ ಗೆಲ್ಲುವ ಸಲುವಾಗಿ
ಮಾದಾರಶ್ರೀಗಳವರಿಗೆ ಸ್ಪರ್ಧೆಗೆ ಅವಕಾಶ ಮಾಡಿಕೊಡುವ ಸಾಧ್ಯತೆ ಹೆಚ್ಚು ಇದ್ದಂತೆ ಕಾಣಸಿಗುತ್ತಿದೆ.
ಲೋಕಸಭಾ ವ್ಯಾಪ್ತಿಯ ಪಾವಗಡ ಹಿರಿಯೂರು ಚಳ್ಳಕೆರೆ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ತನ್ನ ಪಾರಂಪರಿಕ ಮತ ಬ್ಯಾಂಕ್ ಹೊಂದಿದ್ದು ಮೈತ್ರಿ ಅಭ್ಯರ್ಥಿಯ ಗೆಲುವಿಗೆ ಪೂರಕವಾಗಲಿದೆ ಎಂಬ ನಿರೀಕ್ಷೆಯಿದೆ ಬಿಜೆಪಿ ಪಕ್ಷ ಸ್ವಾಮೀಜಿಯೊಬ್ಬರನ್ನು ಚುನಾವಣಾ ಕಣಕ್ಕಿಳಿಸುವ ಪ್ರಯತ್ನ ಯಾವ ಮಟ್ಟದಲ್ಲಿ ಫಲ ನೀಡಲಿದೆ ಎಂಬುದನ್ನು ಕಾದುನೋಡಬೇಕಿದೆ.