ನಿವೃತ್ತ ಯೋಧರಿಬ್ಬರಿಗೆ ಅದ್ದೂರಿ ಸ್ವಾಗತ ಮಾಡಿದ ಮೇಯರ್ ಎಸ್ ಟಿ ವಿರೇಶ್
ದಾವಣಗೆರೆ: ದೇಶ ಸೇವೆ ಸಲ್ಲಿಸಿ ನಿವೃತ್ತರಾಗಿ ತಾಯ್ನಾಡಿಗೆ ಮರಳಿದ ಅರಸೀಕೆರೆಯ ನಾಗರಾಜ್ ಶೆಟ್ಟಿ ಹಾಗೂ ದಾವಣಗೆರೆಯ ರಾಘವೇಂದ್ರ ಎಂಬ ಇಬ್ಬರು ಯೋಧರಿಗೆ ನಗರದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ನಿವೃತ್ತ ಯೋಧರಾದ ರಾಘವೇಂದ್ರ ೨೧ ವರ್ಷಗಳ ಕಾಲ ಹಾಗೂ ನಾಗರಾಜ್ ಶೆಟ್ಟಿ ೨೭ ವರ್ಷಗಳ ಕಾಲ ಬಿಎಸ್‌ಎಫ್‌ನಲ್ಲಿ ಸೇವೆ ಸಲ್ಲಿಸಿ ಇಂದು ತವರಿಗೆ ಮರಳಿದರು.
ದಾವಣಗೆರೆಯ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ನಿವೃತ್ತ ಯೋಧರನ್ನು ತೆರೆದ ವಾಹನದಲ್ಲಿ ನಗರಾದ್ಯಂತ ಮೆರವಣಿಗೆ ಮಾಡಿ ಗೌರವ ಸಲ್ಲಿಸಲಾಯಿತು. ಆ ಸಂದರ್ಭದಲ್ಲಿ ಮೇಯರ್ ಎಸ್.ಟಿ. ವೀರೇಶ್ ಸೇರಿದಂತೆ ಯೋಧರ ಕುಟುಂಬದವರು ಮತ್ತು ಕಾರ್ಯಕರ್ತರು ಹಾಡಿಗೆ ಸಖತ್ ಸ್ಟೆಪ್ ಹಾಕುವ ಮೂಲಕ ನಿವೃತ್ತ ಸೈನಿಕರನ್ನು ಬರಮಾಡಿಕೊಂಡರು.
ಇದೇ ವೇಳೆ ಮಾತನಾಡಿದ ಮೇಯರ್ ಎಸ್.ಟಿ. ವೀರೇಶ್, ಪಾಪಿ ಚೀನಾ ಮತ್ತು ಪಾಕಿಸ್ತಾನದ ಕುತಂತ್ರದಿಂದ ನಾವ್ಯಾರು ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ದಿನ ದಿನಕ್ಕೂ ಅವರ ಕುತಂತ್ರ ಬುದ್ಧಿಗಳು ಜಾಹೀರಾಗುತ್ತಲೇ ಇವೆ. ಆದರೆ, ಅಂತಹ ಕುತಂತ್ರಿಗಳಿಗೆ ನಮ್ಮ ಯೋಧರು ತಕ್ಕ ಉತ್ತರ ನೀಡುತ್ತಿದ್ದಾರೆ ಎಂದು ಪ್ರಶಂಸಿಸಿದರು.