ಸರ್ಕಾರ ಜಾರಿಗೊಳಿಸಿದ ನಿರ್ಬಂಧಗಳನ್ನು ಸಾರ್ವಜನಿಕರು ಕಟ್ಟುನಿಟ್ಟಾಗಿ ಪಾಲಿಸಬೇಕು – ಮಹಾಂತೇಶ್ ಬೀಳಗಿ

ದಾವಣಗೆರೆ: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ದಿಢೀರನೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣಕ್ಕೆ ತರಲು ರಾಜ್ಯ ಸರಕಾರ ಮುಂಜಾಗ್ರತಾ ಕ್ರಮವಾಗಿ ಮಾರ್ಗಸೂಚಿ ಪ್ರಕಟಿಸಿದ್ದು, ಅದರನ್ವಯ ಜಿಲ್ಲೆಯಲ್ಲಿಯೂ ಸರಕಾರ ಜಾರಿಗೊಳಿಸಿದ ನಿರ್ಬಂಧಗಳನ್ನು ಜನರು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿನ ಕಚೇರಿ ಸಭಾಂಗಣದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಮಾರ್ಗಸೂಚಿಯು ಜ.೦೫ ಬುಧವಾರ ರಾತ್ರಿ ೧೦ ರಿಂದ ಜ. ೧೯ ರ ಬೆಳಿಗ್ಗೆ ೦೫ ರವರೆಗೆ ಜಾರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಪ್ರತಿದಿನ ರಾತ್ರಿ ೧೦ ಗಂಟೆಯಿಂದ ಬೆಳಿಗ್ಗೆ ೦೫ ಗಂಟೆಯವರೆಗೆ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದು ಹೇಳಿದರು.

ವಾರಾಂತ್ಯ ಕರ್ಫ್ಯೂ, ಚಿತ್ರಮಂದಿರ, ಹೋಟೆಲ್, ರೆಸ್ಟೋರೆಂಟ್ ಮುಂತಾದೆಡೆ ಶೇ.೫೦ ಆಸನ ಸಾಮರ್ಥ್ಯದೊಂದಿಗೆ ಕೋವಿಡ್ ನಿಯಂತ್ರಣ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಸೇರಿದಂತೆ ಹಲವು ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ. ಸಾರ್ವಜನಿಕರು ಮಾರ್ಗಸೂಚಿಯನ್ನು ತಪ್ಪದೆ ಪಾಲಿಸುವುದರ ಮೂಲಕ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ತಿಳಿಸಿದರು.

ಕರ್ಫ್ಯೂ ಅವಧಿಯಲ್ಲಿ ರೋಗಿಗಳಿಗೆ ಆಸ್ಪತ್ರೆಗೆ ದಾಖಲಿಸುವುದು ಅಲ್ಲದೆ ತುರ್ತು ಸೇವೆಯ ಚಟುವಟಿಕೆ ಹೊರತುಪಡಿಸಿ, ಉಳಿದಂತೆ ಎಲ್ಲ ಬಗೆಯ ಸಾರ್ವಜನಿಕರ ಸಂಚಾರ ನಿಷೇಧಿಸಲಾಗಿದೆ. ಎಲ್ಲ ಕಚೇರಿಗಳು ಸೋಮವಾರದಿಂದ ಶುಕ್ರವಾರದವರೆಗೆ ವಾರದ ೦೫ ದಿನ ಕಾರ್ಯ ನಿರ್ವಹಿಸಲಿವೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕೋವಿಡ್ ನಿಯಂತ್ರಣ ಮಾರ್ಗಸೂಚಿಯಂತೆ ಜಾರಿಯಲ್ಲಿರುತ್ತದೆ.

ಪಬ್ಸ್, ಕ್ಲಬ್ಸ್, ರೆಸ್ಟೋರೆಂಟ್ಸ್, ಬಾರ್‍ಸ್, ಹೋಟೆಲ್ ಗಳು, ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್, ರಂಗಮಂದಿರಗಳು, ಆಡಿಟೋರಿಯಂ, ಈಜುಕೊಳ, ಜಿಮ್, ಕ್ರೀಡಾ ಕಾಂಪ್ಲೆಕ್ಸ್ ಇತ್ಯಾದಿ ಸ್ಥಳಗಳಲ್ಲಿಯೂ ಕೂಡ ಆಸನ ಸಾಮರ್ಥ್ಯದ ಶೇ. ೫೦ ರಷ್ಟು ಮಾತ್ರ ಕಾರ್ಯಚಟುವಟಿಕೆಯನ್ನು ಕೋವಿಡ್ ನಿಯಂತ್ರಣ ಮಾರ್ಗಸೂಚಿ ಪಾಲಿಸಿಕೊಂಡು ಕೈಗೊಳ್ಳಬೇಕು. ಸರಕಾರ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಯಾವುದೇ ರಿಯಾಯಿತಿ ನೀಡಲು ಜಿಲ್ಲಾಡಳಿತಕ್ಕೆ ಅವಕಾಶ ಇರುವುದಿಲ್ಲ, ಆದರೆ ಅಗತ್ಯವಿದ್ದರೆ ಇನ್ನಷ್ಟು ನಿರ್ಬಂಧ ಹೇರಲು ಅವಕಾಶಗಳಿವೆ ಎಂದರು.

ಎಲ್ಲ ಸಾರ್ವಜನಿಕ ಪಾರ್ಕ್‌ಗಳು ಮುಚ್ಚಲಾಗುತ್ತದೆ. ಆಹಾರ ಧಾನ್ಯ, ಆಹಾರ, ಹಣ್ಣು, ತರಕಾರಿ, ಮಾಂಸ, ಮೀನು, ಹಾಲು ಮತ್ತು ಇತರೆ ಡೈರಿ ಪದಾರ್ಥಗಳು, ಪಶು ಆಹಾರಕ್ಕೆ ಸಂಬಂಧಿಸಿದ ಅಂಗಡಿಗಳು ತೆರೆಯಲು ಅವಕಾಶವಿದೆ. ತಳ್ಳುಗಾಡಿಯಲ್ಲಿ ತರಕಾರಿ, ಹಣ್ಣುಗಳ ವ್ಯಾಪಾರಕ್ಕೆ ನಿರ್ಬಂಧ ಇಲ್ಲ. ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಪಾರ್ಸಲ್ ಸೇವೆ ಹೋಂ ಡೆಲಿವರಿ ವ್ಯವಸ್ಥೆಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಅವಕಾಶವಿಲ್ಲ: ಆದರೆ, ಬಟ್ಟೆ, ಪಾತ್ರೆ, ಬೆಳ್ಳಿ-ಬಂಗಾರ ದಂತಹ ಅಂಗಡಿಗಳಿಗೆ ಅವಕಾಶವಿಲ್ಲ. ಬಸ್, ರೈಲು, ಸಾರ್ವಜನಿಕ ಸಾಗಾಣಿಕೆ ವಾಹನ, ಟ್ಯಾಕ್ಸಿ ಇತ್ಯಾದಿ ವಾಹನಗಳ ಓಡಾಟಕ್ಕೆ ಅಡ್ಡಿ ಇರುವುದಿಲ್ಲ, ಆದರೆ ಸಾರ್ವಜನಿಕರು ಇದಕ್ಕೆ ಸಂಬಂಧಿಸಿದ ದಾಖಲೆ/ಟಿಕೆಟ್ ಹೊಂದಿರಬೇಕು. ಕೋವಿಡ್ ನಿಯಂತ್ರಣ ಮಾರ್ಗಸೂಚಿಯನ್ನು ಪಾಲಿಸುವುದು ಕಡ್ಡಾಯವಾಗಿರುತ್ತದೆ. ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಿರುವುದರಿಂದ, ಶನಿವಾರದಂದು ಶಾಲಾ ಕಾಲೇಜುಗಳು ಇರುವುದಿಲ್ಲ ಎಂದರು.

ಯಾವುದಕ್ಕೆ ನಿರ್ಬಧವಿಲ್ಲ: ಕೈಗಾರಿಕೆ, ಕಂಪನಿಗಳ ವ್ಯಕ್ತಿಗಳ ಅಗತ್ಯ ಚಟುವಟಿಕೆಗಳಿಗಾಗಿ ಸಂಚಾರಕ್ಕೆ. ವೈದ್ಯಕೀಯ, ಔಷಧಿ ಸೇವೆ ಸಂಬಂಧಪಟ್ಟವರಿಗೆ. ಸರಕು ಸಾಗಾಣಿಕೆ ಸಾಗಿಸುವ ವಾಹನ, ಟ್ರಕ್, ಗೃಹ ಪೂರೈಕೆ ವಾಹನಗಳು, ಇ-ಕಾಮರ್ಸ್ ಚಟುವಟಿಕೆಗಳಿಗೆ ನಿರ್ಬಂಧ ಇರುವುದಿಲ್ಲ. ಬಸ್, ರೈಲು, ಸಾರ್ವಜನಿಕ ಸಾಗಾಣಿಕೆ ವಾಹನ, ಟ್ಯಾಕ್ಸಿ ಇತ್ಯಾದಿ ವಾಹನಗಳ ಓಡಾಟಕ್ಕೆ ಅಡ್ಡಿಯಿಲ್ಲ. ಆದರೆ ಸಾರ್ವಜನಿಕರು ಇದಕ್ಕೆ ಸಂಬಂಧಿಸಿದ ದಾಖಲೆ/ಟಿಕೆಟ್ ಹೊಂದಿರಬೇಕು. ಇವುಗಳನ್ನು ಹೊರತುಪಡಿಸಿ ಇತರೆ ಎಲ್ಲ ಬಗೆಯ ಚಟುವಟಿಕೆಗಳಿಗೂ ನಿರ್ಬಂಧ ವಿಧಿಸಲಾಗಿದೆ ಎಂದು ಡಿಸಿ ಮಹಾಂತೇಶ್ ಬೀಳಗಿ ತಿಳಿಸಿದರು.

ಬೂಸ್ಟರ್: ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಸರ್ಕಾರದ ಸೂಚನೆಯಂತೆ ಬೂಸ್ಟರ್ ಡೋಸ್ ಲಸಿಕೆ ನೀಡಿಕೆ ಕಾರ್ಯ ಜ. ೧೦ ರಿಂದ ಜಿಲ್ಲೆಯಲ್ಲಿ ಆರಂಭವಾಗಲಿದೆ. ಓಮಿಕ್ರಾನ್ ಪತ್ತೆಗೆ ಸದ್ಯ ನಾವು ಹಾಸನ ಜಿಲ್ಲೆಗೆ ಮಾದರಿಯನ್ನು ಕಳುಹಿಸುವ ವ್ಯವಸ್ಥೆ ಇದೆ. ದಾವಣಗೆರೆ ಜಿಲ್ಲೆಯಲ್ಲಿಯೇ ಜಿನೋಮಿಕ್ ಸೀಕ್ವೆನ್ಸ್ ಪರೀಕ್ಷೆ ಆಗುವಂತಾಗಲು, ವಿಶೇಷ ಪ್ರಯೋಗಾಲಯ ವ್ಯವಸ್ಥೆ ಒದಗಿಸುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮಾತನಾಡಿ, ಸರ್ಕಾರದ ಮಾರ್ಗಸೂಚಿಯಂತೆ ಜ. ೧೯ ರವರೆಗೆ ಜಿಲ್ಲೆಯಲ್ಲಿ ಯಾವುದೇ ಧರಣಿ, ಪ್ರತಿಭಟನೆ, ರ್‍ಯಾಲಿ, ಉತ್ಸವ, ಜಾತ್ರೆಗಳಿಗೆ ಅವಕಾಶವಿರುವುದಿಲ್ಲ.  ಮದುವೆಗಳಲ್ಲಿ ಹೊರಾಂಗಣದಲ್ಲಿ ಗರಿಷ್ಠ ೨೦೦, ಒಳಾಂಗಣದಲ್ಲಿ ಗರಿಷ್ಠ ೧೦೦ ಜನ ಮಾತ್ರ ಭಾಗವಹಿಸಲು ಅವಕಾಶವಿದೆ.  ದೇವಾಲಯಗಳಲ್ಲಿಯೂ ಕೂಡ ಕೇವಲ ದರ್ಶನಕ್ಕೆ ಮಾತ್ರ ಅವಕಾಶವಿದೆ.  ಸಾರ್ವಜನಿಕರು ತಪ್ಪದೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತು ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ.  ಧ್ವನಿವರ್ಧಕಗಳ ಮೂಲಕ ಪ್ರಚಾರ ಮಾಡಲಾಗುತ್ತಿದೆ.  ಉಲ್ಲಂಘನೆ ಕಂಡುಬಂದರೆ ನಿಯಮಾನುಸಾರ ದಂಡ ಹಾಕುವಂತೆ ಈಗಾಗಲೆ ಜಿಲ್ಲೆಯ ಎಲ್ಲ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.  ಸಾರ್ವಜನಿಕರು ತಪ್ಪದೆ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಬೇಕು, ಇಲ್ಲದಿದ್ದಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

Leave a Reply

Your email address will not be published. Required fields are marked *

error: Content is protected !!