ಪತ್ರಕರ್ತರ ಸಂಘದಿಂದ ಸುರೇಶ್ ಬಾಬುಗೆ “ಮಾಧ್ಯಮ ಮಾಣಿಕ್ಯ” ಪ್ರಶಸ್ತಿ

ಪತ್ರಕರ್ತರ ಸಂಘದಿಂದ ಸುರೇಶ್ ಬಾಬುಗೆ ಮಾಧ್ಯಮ ಮಾಣಿಕ್ಯ ಪ್ರಶಸ್ತಿ
ದಾವಣಗೆರೆ : ಜನರ ಜೀವನಾಡಿಯಾಗಿರುವ ಪತ್ರಿಕೆಗಳು ಜನಮಾನಸಕ್ಕೆ, ಅಂದಿನಂದಿನ ಸುದ್ದಿ ಸಮಾಚಾರಗಳನ್ನು ತಿಳಿಸುತ್ತ ವೈಚಾರಿಕತೆಯ ಬೆಳಕನ್ನು ಹರಿಸುತ್ತವೆ, ಪತ್ರಿಕೆ ಮುದ್ರಣ ಗೊಂಡು ಹೊರಬರುವಲ್ಲಿ ಅನೇಕರ ಪರಿಶ್ರಮವು ಅಡಕವಾಗಿರುತ್ತದೆ. ಮುದ್ರಣ ಗೊಂಡ ಪತ್ರಿಕೆಯನ್ನು ಬೆಳ್ಳಂಬೆಳಿಗ್ಗೆ ಪ್ರಕೃತಿ ವಿಕೋಪಗಳ ಅಲೆಯಲ್ಲೂ ಮಳೆ, ಚಳಿ, ಗಾಳಿ, ಬಿಸಿಲೆನ್ನದೆ ಸೈಕಲ್ ತುಳಿಯುತ್ತ ಬೀದಿ ಬೀದಿ ಸಂಚರಿಸಿ, ಮನೆ, ಅಂಗಡಿ, ಕಛೇರಿಗಳ ಬಾಗಿಲಿಗೆ  ತಲುಪಿಸುವ, ಪತ್ರಿಕಾ ವಿತರಕರ ಶ್ರಮ, ಸೇವೆ, ಹೊಣೆಗಾರಿಕೆಯು ಮಹತ್ವಪೂರ್ಣವಾದದ್ದು.
 ಅಂಥಹ ಪವಿತ್ರ ಕಾಯಕದಲ್ಲಿ ತನ್ನನ್ನು ತೊಡಗಿಸಿಕೊಂಡ ದಾವಣಗೆರೆಯ ಎಸ್. ಸುರೇಶ್ ಬಾಬುರವರು,   28 ವರ್ಷಗಳಿಂದ “ಪತ್ರಿಕಾ ವಿತರಣಾ ಕ್ಷೇತ್ರ”ದಲ್ಲಿ ನಿಷ್ಠೆಯಿಂದ ದುಡಿಯುತ್ತ, ತಮ್ಮದೇ ಆದ ವ್ಯಕ್ತಿತ್ವವನ್ನು ರೂಪಿಸಿಕೊಂಡು ಪತ್ರಿಕಾ ರಂಗದಲ್ಲಿ ಚಿರಪರಿಚಿತರೆನಿಸಿದ್ದಾರೆ. ಸ್ಥಳೀಯ ಪತ್ರಿಕೆಗಳ ಜೊತೆಗೆ ಜಿಲ್ಲೆ, ರಾಜ್ಯಮಟ್ಟದ ಪತ್ರಿಕೆಗಳನ್ನು ವಿತರಿಸುತ್ತ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡಿದ್ದಾರೆ. ವೈಯುಕ್ತಿಕ ಬದುಕಿನ ಸಂಕಷ್ಟದಲ್ಲೂ ಕಾಯಕ ನಿಷ್ಠೆಗೆ ಕಿಂಚೆತ್ತು ಧಕ್ಕೆ ಬಾರದ ರೀತಿ ಕರ್ತವ್ಯ ನಿರ್ವಹಿಸುತ್ತ ಪತ್ರಕರ್ತರ ಪ್ರೀತಿ, ವಿಶ್ವಾಸ, ಅಭಿಮಾನಕ್ಕೆ ಪಾತ್ರರಾಗಿದ್ದಾರೆ.
 ದಾವಣಗೆರೆಯ ಹೆಸರಾಂತ ಪೈಲ್ವಾನ್ ಶಿವಣ್ಣ ಹಾಗೂ ಶ್ರೀಮತಿ ಸುಭದ್ರಮ್ಮ ದಂಪತಿಗಳ ಪುತ್ರರಾಗಿ 1972 ರಲ್ಲಿ ಜನಿಸಿದ ಸುರೇಶ ಬಾಬುರವರು, 9ನೇ ತರಗತಿಯವರೆಗೆ ವಿದ್ಯಾಭ್ಯಾಸ ಪೂರೈಸಿ, ಬಡತನದ ಭವಣೆಯಿಂದ ಶಿಕ್ಷಣ ಮುಂದುವರೆಸಲಾಗದೇ, ಜೀವನ ನಿರ್ವಹಣೆಗಾಗಿ  ಸೈಕಲ್ ಶಾಪ್ ನಲ್ಲಿ ದುಡಿಮೆಗೆ ನಿಂತರು. 1995 ರಲ್ಲಿ ದಾವಣಗೆರೆ ಟೈಮ್ಸ್ ದಿನ ಪತ್ರಿಕೆಯ ವಿತರಕರಾಗಿ ಕೆಲಸ ಮಾಡತೊಡಗಿದರು. 1998ರಲ್ಲಿ ಕೆ ಏಕಾಂತಪ್ಪನವರ ಸಂಪಾದಕತ್ವದ “ಮಲ್ನಾಡ ವಾಣಿ” ದಿನಪತ್ರಿಕೆಯ ವಿತರಕರಾಗಿ  ವೃತ್ತಿ ಬದುಕನ್ನು ಕಟ್ಟಿಕೊಂಡರು, ಸಿಬ್ಬಂಧಿ ವಿಭಾಗದಲ್ಲೂ ಒಂದಿಷ್ಟು ಕೆಲಸ ಮಾಡುತ್ತಾ ಪತ್ರಿಕಾ ಬಳಗಕ್ಕೂ ಆಪ್ತರಾದರು.
 ಜೀವನ ನಿರ್ವಹಣೆಗಾಗಿ ಆರ್ಥಿಕ ಹೊರೆ ಭಾರವಾ    ದಾಗ, ಕೆ.ಏಕಾಂತಪ್ಪನವರ ಅಭಿಮಾನದ ಆಸರೆಯಲ್ಲಿಯೇ, ನಗರ, ಜಿಲ್ಲೆ, ರಾಜ್ಯಮಟ್ಟದ ಅನೇಕ ಪತ್ರಿಕೆಗಳ ವಿತರಣೆಯ ಕಾರ್ಯದಲ್ಲೂ ಮುಂದಾಗಿ, ಒಂದಿಷ್ಟು ಬದುಕಿಗೆ ಆಸರೆ ಮಾಡಿಕೊಂಡರು. ಯಾವುದೇ ಪತ್ರಿಕೆಯವರು ವಿತರಣಾ ಕಾರ್ಯದಲ್ಲಿ ವಹಿಸಿದ ಜವಾಬ್ದಾರಿಯನ್ನು, ಪ್ರಾಮಾಣಿಕವಾಗಿ ನಿರ್ವಹಿಸುತ್ತಾ ಬಂದಿರುವ ಬಾಬು, ಅವರೆಲ್ಲರ ವಿಶ್ವಾಸ ಗಳಿಸಿದ್ದಾರೆ. ತನ್ನ ಕಾಯಕದೊಂದಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ  ಸಂಘದ ಸದಸ್ಯರಾಗಿಯೂ, ಸಂಘದ ಚಟುವಟಿಕೆಗಳಲ್ಲೂ ಕ್ರಿಯಾಶೀಲರಾಗಿದ್ದಾರೆ.
ಪತ್ನಿ ಶ್ರೀಮತಿ ಅನಿತಾ ಹಾಗೂ ಈರ್ವರು ಪುತ್ರರು, ಓರ್ವ ಪುತ್ರಿ ಯೊಂದಿಗೆ ಜೀವನ ನಿರ್ವಹಿಸುತ್ತಿದ್ದಾರೆ.  ಎಸ್. ಸುರೇಶ್ ಬಾಬುರವರ ಸೇವಾ ಕಾರ್ಯವನ್ನು ಗುರುತಿಸಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು, ಇದೇ 23ರಂದು ನಗರದ ಲಯನ್ಸ್ ಭವನದಲ್ಲಿ ಏರ್ಪಡಿಸಿರುವ, 2023ರ ” ಪತ್ರಿಕಾ ದಿನಾಚರಣೆ”  ಪ್ರಶಸ್ತಿ ಪ್ರಧಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ “ಮಲ್ನಾಡ ವಾಣಿ ಸಿಬ್ಬಂದಿ ವಿಭಾಗ”ದ ಎಸ್. ಸುರೇಶ್ ಬಾಬು ಅವರಿಗೆ, “ಮುದ್ರಣ ಮಾಣಿಕ್ಯ” ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಅಭಿನಂದನೀಯವಾದುದು.
– ಬಸವರಾಜ್ ಐರಣಿ, ಲೇಖಕರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!