ಕೋವಿಡ್ ನಿಯಂತ್ರಣ ಕುರಿತು ಸಭೆ: ಜ. 20 ರೊಳಗೆ ಮಕ್ಕಳ ಲಸಿಕೆ ಹಾಗೂ ಬೂಸ್ಟರ್ ಡೋಸ್ ಲಸಿಕೆ ಪೂರ್ಣಗೊಳಿಸಿ ಬಿ.ಎ. ಬಸವರಾಜ

ದಾವಣಗೆರೆ: ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಎರಡನೆ ಡೋಸ್ ಪಡೆಯಲು ಬಾಕಿ ಇರುವವರು, 15 ರಿಂದ 18 ವರ್ಷದೊಳಗಿನ ಮಕ್ಕಳು, ಬೂಸ್ಟರ್ ಡೋಸ್ ಪಡೆಯಲು ಬಾಕಿ ಇರುವವರಿಗೆ ಲಸಿಕೆ ನೀಡುವ ಕಾರ್ಯ ಜ. 20 ರ ಒಳಗಾಗಿ ಪೂರ್ಣಗೊಳ್ಳಬೇಕು ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ. ಬಸವರಾಜ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಿಲ್ಲೆಯಲ್ಲಿ ಕೊವೀಡ್-19 ನಿಯಂತ್ರಣ ಕುರಿತು ಗುರುವಾರ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಏರ್ಪಡಿಸಲಾದ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿನ ಲಸಿಕಾ ಕಾರ್ಯದ ಪ್ರಗತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಜಿಲ್ಲಾ ಉಸ್ತುವಾರಿ ಸಚಿವರು, ಲಸಿಕಾ ಕಾರ್ಯ ನಿರೀಕ್ಷಿತ ವೇಗದಲ್ಲಿ ಆಗದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ. ಮೀನಾಕ್ಷಿ ಅವರು ಲಸಿಕಾಕರಣ ಕುರಿತು ಮಾಹಿತಿ ನೀಡಿ, ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ 12.23 ಲಕ್ಷ ಜನರಿಗೆ ಕೋವಿಡ್ ನಿರೋಧಕ ಲಸಿಕೆ ಹಾಕುವ ಗುರಿ ಇದ್ದು, ಈವರೆಗೆ 12.37 ಲಕ್ಷ ಜನರು ಮೊದಲ ಡೋಸ್ ಲಸಿಕೆ ಪಡೆದಿದ್ದು, ಶೇ. 101 ರಷ್ಟು ಸಾಧನೆಯಾಗಿದೆ. 9.76 ಲಕ್ಷ ಜನರು ಎರಡೂ ಡೋಸ್ ಲಸಿಕೆ ಪಡೆದಿದ್ದು, ಶೇ. 80 ರಷ್ಟು ಸಾಧನೆಯಾಗಿದೆ.

ಎರಡನೆ ಡೋಸ್ ಪಡೆಯಲು ಕೋವಿಶೀಲ್ಡ್ ಲಸಿಕೆಗೆ 84 ದಿನ ಹಾಗೂ ಕೋವ್ಯಾಕ್ಸಿನ್ ಲಸಿಕೆಗೆ 28 ದಿನಗಳ ಅಂತರವಿದ್ದು, ಇನ್ನೂ 35 ಸಾವಿರ ಜನರು ಎರಡನೆ ಡೋಸ್ ಪಡೆಯುವುದು ಬಾಕಿ ಇದೆ. 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಜಿಲ್ಲೆಗೆ 84936 ಗುರಿ ನಿಗದಿಪಡಿಸಿದ್ದು, ಈವರೆಗೆ 51763 ಮಕ್ಕಳಿಗೆ ಲಸಿಕೆ ನೀಡಿ, ಶೇ. 61 ಸಾಧನೆಯಾಗಿದೆ, ಆದರೆ ಕೋವಿನ್ ಪೋರ್ಟಲ್‍ನಲ್ಲಿ 17 ರಿಂದ 18 ವರ್ಷದೊಳಗಿನ ಮಕ್ಕಳ ದತ್ತಾಂಶ ದಾಖಲಿಸುವ ಸಂದರ್ಭದಲ್ಲಿ ಅದು 18 ವರ್ಷ ಮೇಲ್ಪಟ್ಟ ವರ್ಗದಲ್ಲಿ ದಾಖಲಾಗುತ್ತಿರುವುದರಿಂದ, ಸುಮಾರು 10 ಸಾವಿರ ಮಕ್ಕಳ ಲಸಿಕಾಕರಣ ಈ ರೀತಿ ದಾಖಲಾಗಿದ್ದು, ಇನ್ನೂ 27 ಸಾವಿರ ಮಕ್ಕಳಿಗೆ ಲಸಿಕೆ ನೀಡುವುದು ಬಾಕಿ ಇದೆ.

ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟವರು ಎರಡನೆ ಡೋಸ್ ಪಡೆದು 9 ತಿಂಗಳು ಪೂರ್ಣಗೊಂಡವರಿಗೆ ಬೂಸ್ಟರ್ ಡೋಸ್ ಲಸಿಕೆ ನೀಡುವ ಕಾರ್ಯ ಚಾಲನೆಗೊಂಡಿದ್ದು, ಗುರುತಿಸಲಾದ 11450 ಜನರ ಪೈಕಿ ಈವರೆಗೆ 3750 ಜನರಿಗೆ ಬೂಸ್ಟರ್ ಡೋಸ್ ಲಸಿಕೆ ನೀಡಲಾಗಿದೆ ಎಂದರು. ಬಳಿಕ ತಾಲ್ಲೂಕುವಾರು ಲಸಿಕಾಕರಣದ ಮಾಹಿತಿ ಪಡೆದ ಸಚಿವರು, ನಿಗದಿತ ಗುರಿ ಸಾಧಿಸದ ಅಧಿಕಾರಿಗಳ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಜ. 20 ರಂದು ಜಿಲ್ಲೆಗೆ ಆಗಮಿಸಿ, ಎಲ್ಲ ತಾಲ್ಲೂಕು ಆಸ್ಪತ್ರೆಗಳಿಗೆ ಭೇಟಿ ನೀಡಿ, ಅಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡಿರುವ ಸಿದ್ಧತೆಗಳನ್ನು ಖುದ್ದು ಪರಿಶೀಲಿಸುತ್ತೇನೆ. ಹೀಗಾಗಿ ಜ. 20 ರ ಒಳಗಾಗಿ ಜಿಲ್ಲೆಯಲ್ಲಿ ಬಾಕಿ ಉಳಿದಿರುವ ಲಸಿಕಾಕರಣದ ಕಾರ್ಯ ಪೂರ್ಣಗೊಳ್ಳಬೇಕು. ತಪ್ಪಿದಲ್ಲಿ ಸಂಬಂಧಪಟ್ಟ ತಾಲ್ಲೂಕು ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಿ, ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದರು. 15 ರಿಂದ 18 ವಯಸ್ಸಿನ ಎಲ್ಲಾ ಮಕ್ಕಳಿಗೂ ಕಡ್ಡಾಯವಾಗಿ ಲಸಿಕೆ ಹಾಕಬೇಕು. ಸೋಂಕು ಯಾವುದೇ ಮಕ್ಕಳಿಗೆ ಪ್ರಾಣಹಾನಿ ಆಗುವ ಮಟ್ಟಕ್ಕೆ ಹೋಗಬಾರದು. ಎಲ್ಲರ ಆರೋಗ್ಯ ರಕ್ಷಣೆಮಾಡುವುದು ನಮ್ಮ ಆದ್ಯ ಕರ್ತವ್ಯ ಎಲ್ಲಿಯೂ ಸಹ ಯಾವ ಹಾನಿಯಾಗಬಾರದು ಈ ಬಗ್ಗೆ ಜಿಲ್ಲಾಡಳಿತ ಹೆಚ್ಚಿನ ಕ್ರಮ ವಹಿಸಬೇಕು ಎಂದರು.

ಅನ್ಯರಾಜ್ಯದಿಂದ ಆಗಮಿಸುವವರ ನಿಗಾ ವಹಿಸಿ : ಕೇರಳ, ತಮಿಳುನಾಡು, ಮಹಾರಾಷ್ಟ್ರ, ಗೋವಾ ಅಲ್ಲದೆ ವಿವಿಧ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವವರ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಇವರೆಲ್ಲರಿಗೂ ಕೋವಿಡ್ ಟೆಸ್ಟ್ ಮಾಡಬೇಕು. ಸೋಂಕು ದೃಢಪಟ್ಟವರಿಗೆ ಸೂಕ್ತ ಚಿಕಿತ್ಸೆ ಕೊಡುವುದಲ್ಲದೆ, ನಿಯಮಾನುಸಾರ ಕ್ವಾರಂಟೈನ್ ಮಾಡುವ ಮೂಲಕ ಇಂತಹವರು ಇತರರಿಗೆ ಸೋಂಕು ಹರಡುವುದನ್ನು ತಡೆಗಟ್ಟಬೇಕು. ಜಿಲ್ಲೆಯಲ್ಲಿ ಸದ್ಯ 280 ಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿದ್ದು, ಬರುವ ದಿನಗಳಲ್ಲಿ ಸೋಂಕು ಹೆಚ್ಚು ಹರಡದಂತೆ ತೀವ್ರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಜನಜೀವನಕ್ಕೆ ತೊಂದರೆಯಾಗದ ರೀತಿಯಲ್ಲಿ, ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಜಿಲ್ಲೆಯಲ್ಲಿ ಜಾರಿಗೊಳಿಸಬೇಕು. ಪೊಲೀಸ್ ಅಧಿಕಾರಿಗಳು ಹೆಚ್ಚಿನ ಜನಸಂದಣಿ ಉಂಟಾಗದಂತೆ ನೋಡಿಕೊಂಡು, ಮಾಸ್ಕ್ ಧರಿಸದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿ, ದಂಡ ವಸೂಲಿಯನ್ನೂ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಸಚಿವರು, ಹಳ್ಳಿಗಳಲ್ಲಿ ರೈತ ಸಮುದಾಯದವರು ಮಾಸ್ಕ್ ಹಾಕದಿರುವುದು ಕಂಡುಬಂದಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಜನರು, ರೈತರು, ಮಕ್ಕಳು ತಪ್ಪದೆ ಮಾಸ್ಕ್ ಧರಿಸಿ, ಕಾಯಿಲೆಗೆ ಒಳಗಾಗುವುದನ್ನು ತಪ್ಪಿಸಬೇಕು ಎಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.

ಕೆಮ್ಮು, ಶೀತ, ಜ್ವರ ಹಾಗೂ ಇತರೆ ರೋಗಲಕ್ಷಣಗಳು ಕಂಡುಬಂದಲ್ಲಿ ಅವರು ನೇರವಾಗಿ ವೈದ್ಯರಬಳಿ ಬಂದು ಚಿಕಿತ್ಸೆ ಪಡೆಯಬೇಕು, ಇದರಿಂದ ಕೋವಿಡ್ ನಿಯಂತ್ರಣ ಆಗಲು ಸಾಧ್ಯವಾಗುತ್ತದೆ ಹಾಗೂ ಮಾಸ್ಕ್ ಹಾಕದೆ ಓಡಾಡುವವರಿಗೆ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ, ಜಿಲ್ಲಾದ್ಯಂತ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್, ಹಾಗೂ ಕೋವಿಡ್ ನಿಯಂತ್ರಣಕ್ಕಾಗಿ ಕಟ್ಟುನಿಟ್ಟಿನ ವ್ಯವಸ್ಥೆ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸಂಸದ ಜಿ ಎಂ ಸಿದ್ದೇಶ್ವರ್ ಅಧಿಕಾರಿಗಳಿಂದ ಮಾಹಿತಿ ಪಡೆದು ಬೂಸ್ಟರ್ ಡೋಸ್ ಲಸಿಕೆ ನೀಡುವುದರ ವಿಳಂಬವನ್ನು ಪ್ರಶ್ನಿಸಿ, ಶೀಘ್ರದಲ್ಲೆ ಪೂರ್ಣ ಗೊಳಿಸುವಂತೆ ತಾಕಿತು ಮಾಡಿದರು. ಹೊರ ರಾಜ್ಯದಿಂದ ಜಿಲ್ಲೆಗೆ ಬರುವವರನ್ನು ಐಸೋಲೆಷನ್ ಮತ್ತು ಕೋವಿಡ್-19 ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡುವಂತೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾಹಿತಿ ನೀಡಿ ಓಂಶಕ್ತಿ ಪೀಠ ಪೂಜೆ ಮತ್ತು ಶಬರಿಮಲೆ ಯಾತ್ರೆ ಕೈಗೊಂಡು ಜಿಲ್ಲೆಗೆ ವಾಪಸ್ಸು ಆದವರ ಮಾಹಿತಿ ಪಡೆದು ಪರೀಕ್ಷಿಸಲಾಗುತ್ತಿದೆ. ಚನ್ನಗಿರಿ ತಾಲ್ಲೂಕಿನ ಮಾವಿನಹೊಳೆ ಇಂದಿರಾಗಾಂಧಿ ವಸತಿ ನಿಲಯದ ಒಬ್ಬ ವಿದ್ಯಾರ್ಥಿಯ ಪೋಷಕರು ಓಂ ಶಕ್ತಿ ಯಾತ್ರೆ ಕೈಗೊಂಡು ಬಂದ ಬಳಿಕ, ಅವರಿಗೆ ಪಾಸಿಟಿವ್ ಬಂದಿದೆ. ಆ ಮಗುವಿನಿಂದ ಶಾಲೆಯ ಇತರ ಮಕ್ಕಳಿಗೆ ಹರಡಿದ್ದು ಒಟ್ಟು 238 ಮಕ್ಕಳನ್ನು ಪರೀಕ್ಷಿಸಿದಾಗ 46 ಮಕ್ಕಳಿಗೆ ಪಾಸಿಟಿವ್ ಬಂದಿದೆ. ಅವರಲ್ಲಿ ಸ್ವಲ್ಪ ರೋಗ ಲಕ್ಷಣ ಇರುವ ಮಕ್ಕಳನ್ನು ಅಲ್ಲಿಯೇ ಚಿಕಿತ್ಸೆಗೆ ಒಳಪಡಿಸಲಾಗಿದೆ, ಉಳಿದವರನ್ನು ಐಸೋಲೆಷನ್ ನಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಜಿಲ್ಲೆಯಲ್ಲಿ ಪರಿಸ್ಥಿತಿ ಕೈಮೀರದಂತೆ ಕೋವಿಡ್ ನಿರ್ವಹಣೆ ಮಾಡಲಾಗುವುದು. ಮನೆ ಮನೆಗೆ ತೆರಳಿ ಲಸಿಕಾಕರಣಕ್ಕೆ ಹೆಚ್ಚಿನ ವೇಗ ನೀಡಲಾಗುವುದು ಎಂದು ಹೇಳಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್ ಮಾಹಿತಿ ನೀಡಿ ಜಿಲ್ಲೆಯಲ್ಲಿ ಪತ್ತೆಯಾಗಿರುವ ಪ್ರಕರಣಗಳಲ್ಲಿ ಶೇ 90 ರಷ್ಟು ಸೋಂಕಿತರಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡುಬಂದಿಲ್ಲ. ದಾವಣಗೆರೆ ನಗರ ವ್ಯಾಪ್ತಿಯಲ್ಲಿಯೇ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ದಾವಣಗೆರೆ 157, ಚನ್ನಗಿರಿ 61, ಹೊನ್ನಾಳಿ 06, ಜಗಳೂರು 37, ಹರಿಹರ 05, ಹಾಗೂ ಹೊರ ಜಿಲ್ಲೆಗಳಿಂದ ಬಂದಿರುವ ಜನರಲ್ಲಿ 14 ಪ್ರಕರಣ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಒಟ್ಟು 282 ಸಕ್ರಿಯ ಪ್ರಕರಣಗಳಿವೆ. ಸದ್ಯ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಶೇ. 0.74 ರಷ್ಟಿದ್ದರೆ, ದಾವಣಗೆರೆ ನಗರದಲ್ಲಿ ಶೇ. 1.18 ರಷ್ಟಿದ್ದು, ಪ್ರಸ್ತುತ ಕೋವಿಡ್ ಪ್ರಕರಣಗಳ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದೆ.

ಮೂರನೇ ಅಲೆಯಲ್ಲಿ ಇದುವರೆಗೂ 20302 ಪರೀಕ್ಷೆಗಳನ್ನು ನಡೆಸಲಾಗಿ ಅದರಲ್ಲಿ 288 ಪಾಸಿಟಿವ್ ಪ್ರಕರಣ ಕಂಡು ಬಂದಿದ್ದು 06 ಪ್ರಕರಣಗಳನ್ನು ಹೊರ ಜಿಲ್ಲೆಗೆ ಕಳುಹಿಸಲಾಗಿದೆ. ಜಿಲ್ಲೆಯಲ್ಲಿ ಸರ್ಕಾರದ ಸೂಚನೆಯಂತೆ ಪ್ಯಾರ ಮೆಡಿಕಲ್, ನರ್ಸಿಂಗ್ ಕಾಲೇಜುಗಳಲ್ಲಿ ಕೊವೀಡ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ, ಒಟ್ಟು 71 ಸೋಂಕಿತ ಮಕ್ಕಳಲ್ಲಿ 6 ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 36 ತಂಡಗಳು ಕೋವಿಡ್ ಪರೀಕ್ಷೆ ನಡೆಸುತ್ತಿದ್ದಾರೆ. ಸರ್ಕಾರದ ಸೂಚನೆಯಂತೆ ಖಾಸಗಿ ಆಸ್ಪತ್ರೆಗಳಲ್ಲಿ ಶೇ. 50 ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ 75 ರಷ್ಟು ಬೆಡ್‍ಗಳನ್ನು ಕಾಯ್ದಿರಿಸಿಕೊಳ್ಳಲಾಗಿದೆ ಎಂದರು.

ಡಿ.ಹೆಚ್.ಒ ನಾಗರಾಜ್ ಮಾತನಾಡಿ ಜಿಲ್ಲೆಯಲ್ಲಿರುವ 4 ತಾಲೂಕು ಆಸ್ಪತ್ರೆಗಳಲ್ಲಿ ತಜ್ಞವೈದ್ಯರ ಕೊರತೆಯಿಲ್ಲ, ರಾಷ್ಟ್ರೀಯ ಆರೋಗ್ಯ ಅಭಿಯಾನದಲ್ಲಿ ಪ್ರತಿಯೊಂದು ತಾಲ್ಲೂಕುಗಳಲ್ಲಿ 6 ಹಾಗೂ ಜಿಲ್ಲೆಗೆ 6 ಶುಶ್ರೂಷಕರನ್ನು ನೇಮಿಸಿಕೊಳ್ಳಲಾಗಿದೆ. ಮಾನವ ಸಂಪನ್ಮೂಲದ ಯಾವುದೇ ಕೊರತೆ ಇಲ್ಲ ಎಂದರು.
ಸಭೆಯಲ್ಲಿ ಸಂಸದ ಡಾ. ಜಿ.ಎಂ. ಸಿದ್ದೇಶ್ವರ, ಶಾಸಕರಾದ ಎಸ್.ಎ.ರವೀಂದ್ರನಾಥ್, ಪ್ರೋ. ಲಿಂಗಣ್ಣ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಜಿ.ಪಂ. ಸಿ.ಇ.ಒ ಡಾ. ವಿಜಯ ಮಹಾಂತೇಶ್ ದಾನಮ್ಮನವರ್, ದೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ಪಾಲಿಕೆ ಮೇಯರ್ ಎಸ್.ಟಿ.ವೀರೇಶ್, ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!