ರಾಷ್ಟ್ರೀಯ ಯುವಕರ ದಿನಾಚರಣೆ: ‘ಗುಲಾಬಿ ಹಿಡಿ ತಂಬಾಕು ಬಿಡಿ’ ವಿನೂತನ ಕಾರ್ಯಕ್ರಮ

ದಾವಣಗೆರೆ: ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ತಮ್ಮ ಮನೆಗೆ ತಾವೇ ವಿವೇಕಾನಂದರಾಗಿ, ಕುಟುಂಬದ ಇತರೆ ಸದಸ್ಯರಿಗೆ ತಂಬಾಕು ಬಳಕೆಯ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಸಹಕಾರಿಯಾಗುವಂತೆ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಕರೆ ನೀಡಿದರು.

ನಗರದ ಹೈಸ್ಕೂಲ್ ಮೈದಾನದ ಮುಂಭಾಗದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜ್(ಹೈಸ್ಕೂಲ್ ಮೈದಾನ) ದಾವಣಗೆರೆ ಇವರ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ರಾಷ್ಟ್ರೀಯ ಯುವಕರ ದಿನಾಚರಣೆ ಅಂಗವಾಗಿ ಆಯೋಜಿಸಿದ ಜಾಗೃತಿ ಗುಲಾಬಿ ಆಂದೋಲನ ವೇದಿಕೆ ಹಾಗೂ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

12 ರಿಂದ 16 ವಯೋಮಿತಿಯೊಳಗಿನ ಮಕ್ಕಳು ಸಾಮಾನ್ಯವಾಗಿ ಮೋಜು ಮಾಡುವುದು ಹಾಗೂ ಬೇರೆಯವರು ಹೇಳಿದ್ದನ್ನೆಲ್ಲ ಕೇಳುವಂತಹ ವಯಸ್ಸಾಗಿರುತ್ತದೆ. ಹೀಗಾಗಿ ಅವರಿಗೆ ತಂಬಾಕು ಹಾಗೂ ಅದರ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸುವುದು ಅತ್ಯಗತ್ಯ. ಇದರಿಂದ ಆರೋಗ್ಯಕರವಾದ ಸ್ವಸ್ಥ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ತಮ್ಮ ಮನೆಗೆ ತಾವೇ ವಿವೇಕಾನಂದರಾಗಿ ಕುಟುಂಬದ ಇತರೆ ಸದಸ್ಯರಿಗೆ ತಂಬಾಕು ಬಳಕೆಯ ಕೆಟ್ಟ ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಸಹಕಾರಿಯಾಗುತ್ತದೆ. ಕುಟುಂಬದಲ್ಲಿ ಅಥವಾ ಸುತ್ತ ಮುತ್ತಲಿನಲ್ಲಿ ತಂಬಾಕು ವ್ಯಸನಿಗಳಿದ್ದರೆ ಜಿಲ್ಲಾ ಆಸ್ಪತ್ರೆಯ ತಂಬಾಕು ವ್ಯಸನ ಮುಕ್ತ ಕೇಂದ್ರಕ್ಕೆ ಕಳುಹಿಸಲು ಶ್ರಮಿಸಿ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಅನುಷ್ಠಾನಾಧಿಕಾರಿ ಡಾ|| ರಾಘವನ್ ಜಿ.ಡಿ, ನಾವು ಜಿಲ್ಲೆಯಾದ್ಯಂತ ಎಲ್ಲಾ ತಾಲ್ಲೂಕುಗಳಲ್ಲಿ ಗುಲಾಬಿ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ. ದಾವಣಗೆರೆಯಲ್ಲಿಯೂ ಸಹ ಹಮ್ಮಿಕೊಂಡಿದ್ದು, ಶೈಕ್ಷಣಿಕ ಸಂಸ್ಥೆಯ 100 ಗಜದ ಸುತ್ತಳತೆಯೊಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತವರನ್ನು ಗುರಿಯಾಗಿ ಇಟ್ಟುಕೊಂಡು ಒಂದು ಗುಲಾಬಿ ಹೂ ಮತ್ತು ಕರ ಪತ್ರ ನೀಡುವುದರೊಂದಿಗೆ “ಗುಲಾಬಿ ಹಿಡಿ ತಂಬಾಕು ಬಿಡಿ” ಎಂಬ ಘೋಷ ವಾಕ್ಯದೊಂದಿಗೆ ಪ್ರಸ್ತುತ ದಿನದಲ್ಲಿ ಯುವಕರು ತಂಬಾಕು ಉತ್ಪನ್ನಗಳ ದುಷ್ಚಟಕ್ಕೆ ಬಲಿಯಾಗುತ್ತಿರುವ ಬಗ್ಗೆ ಮಾಹಿತಿ ನೀಡಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಂತೆ ಮನವೊಲಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಹೆಚ್.ಶಿವಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ ಕೋಟ್ಪಾ-2003 ರ ಕಾಯ್ದೆಯ ಸೆಕ್ಷನ್-6ಬಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಈ ಗುಲಾಬಿ ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದು,್ದ ರಾಷ್ಟ್ರ ನಿರ್ಮಾಣಕ್ಕಾಗಿ ಯುವ ಶಕ್ತಿಯನ್ನು ಉತ್ತೇಜಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿರುತ್ತದೆ. ಅದರಂತೆ ತಂಬಾಕು ಮುಕ್ತ ಯುವ ಪೀಳಿಗೆ ಹಾಗೂ ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆಯನ್ನಾಗಿ ಮಾಡಿದ್ದೆ ಆದಲ್ಲಿ ಈ ದಿನದ ಉದ್ದೇಶ ಸಾರ್ಥಕವಾಗುತ್ತದೆ ಎಂದರು.

ಆರ್.ಸಿ.ಹೆಚ್. ಅಧಿಕಾರಿ ಡಾ|| ಮೀನಾಕ್ಷಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ|| ವೆಂಕಟೇಶ್, ಜಿಲ್ಲಾ ಆರೋಗ್ಯ ಮೇಲ್ವಿಚಾರಕರಾದ ಎಂ.ವಿ ಹೊರಕೇರಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವೆಂಕಟಾಚಲ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಉಮಾಪತಿ, ಗಾಯತ್ರಿ, ಜಿಲ್ಲಾ ಸಲಹೆಗಾರ ಸತೀಶ್ ಕಲಹಾಳ್, ಸಾಮಾಜಿಕ ಕಾರ್ಯಕರ್ತ ದೇವರಾಜ್ ಕೆ.ಪಿ, ಕಾಲೇಜಿನ ಉಪನ್ಯಾಸಕರಾದ ಉಮೇಶ ಕುಮಾರ ಎಸ್ ಮತ್ತು ರಮೇಶ್ ಎಂ.ಜಿ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!