ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ್ದ ಮಿಶ್ರಾಗೆ ವಿಮಾನ ಪ್ರಯಾಣ ನಿಷೇಧ

ನವದೆಹಲಿ:  ಮಹಿಳೆಯೊಬ್ಬರ ಮೇಲೆ ಮೂತ್ರ ವಿಸರ್ಜಿಸಿದ್ದ ಆರೋಪಿ ಶಂಕರ್ ಮಿಶ್ರಾ ಎಂಬಾತನನ್ನು ವಿಮಾನ ಪ್ರಯಾಣದಿಂದ 4 ತಿಂಗಳು ನಿಷೇಧಿಸಿ ಏರ್‌ ಇಂಡಿಯಾ ಕಂಪನಿ ಆದೇಶಿಸಿದೆ.
2022ರ ನವೆಂಬರ್‌ 26 ರಂದು, ಮುಂಬೈ ಮೂಲದ ಉದ್ಯಮಿ ಶಂಕರ್ ಮಿಶ್ರಾ ಕುಡಿದ ಮತ್ತಿನಲ್ಲಿ ಮಹಿಳೆಯ ಮೇಲೆ ಮೂತ್ರ ವಿಸರ್ಜಿಸಿದ್ದ. ವಿಮಾನ ಲ್ಯಾಂಡ್‌ ಆದ ನಂತರವೂ ಮಿಶ್ರಾ ವಿರುದ್ಧ ಯಾವುದೇ ಕ್ರಮ ಜರುಗಿಸಿರಲಿಲ್ಲ. ನ್ಯೂಯಾರ್ಕ್‌ನಿಂದ ದೆಹಲಿಗೆ ಬರುತ್ತಿದ್ದ ವಿಮಾನದ ಬ್ಯುಸಿನೆಸ್‌ ಕ್ಲಾಸ್‌ನಲ್ಲಿ ಈ ಘಟನೆ ನಡೆದಿತ್ತು.
ಮಹಿಳೆ ಏರ್‌ ಇಂಡಿಯಾಗೆ ನೀಡಿದ ದೂರಿನ ಮೇರೆಗೆ ದೆಹಲಿ ಪೊಲೀಸರು ಈತನ ವಿರುದ್ಧ ಜನವರಿ 4ರಂದು ಎಫ್‌ಐಆರ್‌ ದಾಖಲಿಸಿಕೊಂಡಿದ್ದರು. ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದ ಮಿಶ್ರಾನನ್ನು ಬಂಧಿಸಿ ದೆಹಲಿಗೆ ಕರೆತರಲಾಗಿತ್ತು.
ಜ.7 ರಂದು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಜಾಮೀನು ಅರ್ಜಿ ವಿಚಾರಣೆ ನಡೆಸಿದ ಪಟಿಯಾಲಾ ಹೌಸ್ ಕೋರ್ಟ್‌ ನ್ಯಾಯಾಧೀಶರು, ಇದೊಂದು ಅತ್ಯಂತ ಅಸಹ್ಯಕರ ಘಟನೆ ಎಂದು ಖಂಡಿಸಿದ್ದರು.
ನಿಷೇಧದ ಕುರಿತು ಎಎನ್‌ಐ ಟ್ವೀಟ್ ಮಾಡಿದ್ದು, ಶಂಕರ್ ಮಿಶ್ರಾ ಏರ್ ಇಂಡಿಯಾದ ಯಾವುದೇ ವಿಮಾನಗಳಲ್ಲಿ 4 ತಿಂಗಳುವರೆಗೆ ಪ್ರಯಾಣ ಮಾಡುವಂತಿಲ್ಲ ಎಂದು ಕಟ್ಟುನಿಟ್ಟಿನ ನಿರ್ಧಾರ ತೆಗೆದುಕೊಂಡಿದೆ.

Leave a Reply

Your email address will not be published. Required fields are marked *

error: Content is protected !!