ಯೋಜನೆ ಪೂರ್ಣಗೊಳಿಸಲು 2 ತಿಂಗಳ ಗಡುವು ನೀಡಿದ ಶಾಸಕ ಶಾಮನೂರು ಶಿವಶಂಕರಪ್ಪ

ಯೋಜನೆ ಪೂರ್ಣಗೊಳಿಸಲು 2 ತಿಂಗಳ ಗಡುವು ನೀಡಿದ ಶಾಸಕ ಶಾಮನೂರು ಶಿವಶಂಕರಪ್ಪ

ದಾವಣಗೆರೆ: ಜಲಸಿರಿ ಯೋಜನೆಯೂ ಕಳೆದ 6 ವರ್ಷಗಳ ಹಿಂದೆ ಪ್ರಾರಂಭವಾಗಿದ್ದರೂ ಸಹ ಕಾಮಗಾರಿ ಇನ್ನು ಮುಕ್ತಾಯಗೊಳ್ಳದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಡಾ|| ಶಾಮನೂರು ಶಿವಶಂಕರಪ್ಪನವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಇಂದು ತಮ್ಮ ಗೃಹ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ ಶಾಸಕರು ಕಳೆದ 6 ವರ್ಷಗಳ ಹಿಂದೆ ಯೋಜನೆಯನ್ನು ತಂದು ಕಾಮಗಾರಿಗೆ ಚಾಲನೆ ನೀಡಲಾಗಿತ್ತು. 4 ವರ್ಷಗಳ ಅವಧಿಯಲ್ಲಿ ಕಾಮಗಾರಿ ಮುಕ್ತಾಯಗೊಳಿಸಿ ಸಾರ್ವಜನಿಕರಿಗೆ ನೀರು ಒದಗಿಸಬೇಕಾಗಿತ್ತು ಎಂದರು.

ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿಳಂಬ ನೀತಿಯಿಂದಾಗಿ ಕಾಮಗಾರಿ ಪೂರ್ಣಗೊಳ್ಳದೇ ನೀರು ಪೂರೈಕೆ ಆಗದೇ ಜನರು ಪರಿತಪಿಸುವಂತಾಗಿದೆ. ಜನತೆ ನಮ್ಮ ಬಳಿ ಬಂದು ತಮ್ಮ ಅಳಲನ್ನು ತೊಡಿಕೊಳ್ಳುತ್ತಿದ್ದು, ನೀವು ನೀರು ಇಲ್ಲದೇ ಜೀವಿಸುತ್ತಿರಾ ಎಂದು ಪ್ರಶ್ನಿಸಿದರು.

ಕಾಮಗಾರಿ ವಿಳಂಬಕ್ಕೆ ಕಾರಣ ನೀಡಿ ಎಂದು ಸೂಚಿಸಿದ ಅವರು ಇನ್ನೆರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಇಡೀ ದಾವಣಗೆರೆ ನಗರಕ್ಕೆ ನೀರು ಒದಗಿಸಬೇಕು. ಇಲ್ಲದಿದ್ದರೆ ಶಿಸ್ತುಕ್ರಮ ಎದುರಿಸಲು ಮುಂದಾಗಿ ಎಂದು ಎಚ್ಚರಿಸಿದರು.

ಇದೇ ವೇಳೆ ಸ್ಮಾರ್ಟ್‍ಸಿಟಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು ಕಾಂಗಾರಿಗಳ ವಿಳಂಬ ಆಗದಂತೆ ಅದಷ್ಟು ಶೀಘ್ರ ಗುಣಮಟ್ಟದ ಕಾಮಗಾರಿ ಮಾಡುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಉದ್ಯಮಿ ಎಸ್.ಎಸ್.ಗಣೇಶ್, ಮಹಾನಗರ ಪಾಲಿಕೆ ಸದಸ್ಯರುಗಳಾದ ಎ.ಬಿ.ರಹೀಂ, ಕಬೀರ್, ಸ್ಮಾರ್ಟ್‍ಸಿಟಿ ವ್ಯವಸ್ಥಾಪಕ ನಿರ್ದೇಶಕ ವಿರೇಶ್ ಶೆಟ್ಟಿ, ನಿರ್ದೇಶಕರಾದ ಎಂ.ನಾಗರಾಜ್, ಪ್ರಭಾರ ಮುಖ್ಯ ಇಂಜಿನಿಯರ್ ಹರ್ಷಿತಾ, ಜಲಸಿರಿ ಯೋಜನೆಯ ವಿರೇಂದ್ರ ಕುಂದಗೊಳ್, ಕಾರ್ಯಪಾಲಕ ಅಭಿಯಂತರ ಕಾಯಿ ಮಂಜುನಾಥ್, ಮುಖಂಡರುಗಳಾದ ಕೊಡಪಾನ ದಾದಾಪೀರ್, ಲಾಲ್ ಆರೀಫ್, ಅಲಿ, ಸೈಯದ್ ಬಾಬ್ ಜಾನ್ ಮತ್ತಿತರರಿದ್ದರು.

Leave a Reply

Your email address will not be published. Required fields are marked *

error: Content is protected !!